ಬುದ್ಧಿವಂತರ ಜಿಲ್ಲೆಯಲ್ಲಿ ಗ್ರಾಹಕ ಜಾಗೃತಿ ಕಡಿಮೆ: ಪ್ರಕಾಶ್
ಮಂಗಳೂರು: ಬುದ್ಧಿವಂತರ ಜಿಲ್ಲೆ ಎಂಬ ಹಣೆ ಪಟ್ಟಿ ಹಚ್ಚಿಕೊಂಡಿರುವ ಕರಾವಳಿ ಜಿಲ್ಲೆಗಳಲ್ಲಿ ಗ್ರಾಹಕರ ಹಕ್ಕುಗಳಬಗ್ಗೆ ಜಾಗೃತಿ ಕಡಿಮೆ ಇದೆ ಎಂದು ಜಿಲ್ಲಾಧಿಕಾರಿ ಎನ್.ಪ್ರಕಾಶ್ ಹಳಿದರು. ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಶುಕ್ರವಾರ ವಿಶ್ವ ಗ್ರಾಹಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಸರಕುಗಳ ಯೋಗ್ಯತೆ, ಪ್ರಮಾಣ, ಸಾಮರ್ಥ್ಯ, ಶುದ್ಧತೆ, ಗುಣಮಟ್ಟ ಮತ್ತು ಧಾರಣೆ ಬಗ್ಗೆ ಪ್ರಶ್ನಿಸುವ ಮತ್ತು ದೂರು ನೀಡಿ ಸಮಸ್ಯೆ ಬಗೆ ಹರಿಸುವ ಹಕ್ಕನ್ನು ಗ್ರಾಹಕ ಪಡೆದುಕೊಂಡಿದ್ದಾನೆ. ಇದನ್ನು ವಿದ್ಯಾರ್ಥಿಗಳು ಮನೆ, ಮನೆಗಳಲ್ಲಿ ತಿಳಿಸಿ ಗ್ರಾಹಕರು ಜಾಗೃತಿಗೊಳ್ಳುವಂತೆ ಮಾಡಬೇಕಾಗಿದೆ ಎಂದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಮಲ್ಲಿಕಾರ್ಜುನ ಮಾತನಾಡಿ, ಸೌಕರ್ಯಗಳು ಹೆಚ್ಚಿದಲ್ಲಿ ಸಮಸ್ಯೆಗಳು ಹೆಚ್ಚುತ್ತದೆ. ಎಲ್ಲ ಬಸ್ಗಳಲ್ಲಿ ಕಂಪ್ಯೂಟರ್ ಟಿಕೆಟ್ ನೀಡುವ ವ್ಯವಸ್ಥೆ ಮತ್ತು ಕರ್ಕಶ ಹಾರ್ನ್ ಬದಲಾಯಿಸಿ ಸಾಧಾರಣ ಹಾನ್ ಬಳಸುವ ಬಗ್ಗೆ, ಚಾಲಕ, ನಿರ್ವಾಹಕರು ಸೌಜನ್ಯದಿಂದವರ್ತಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕಾಲೇಜು ಪ್ರಾಂಶುಪಾಲ ಡಾ.ಲಕ್ಷ್ಮೀನಾರಾಯಣ ಭಟ್ಟ ಎಚ್.ಆರ್. ಅಧ್ಯಕ್ಷತೆ ವಹಿಸಿದ್ದರು.ಗ್ರಾಹಕ ಶಿಕ್ಷಣ ಸರ್ಟಿಫಿಕೆಟ್, ಉತ್ತಮ ಕ್ಲಬ್ಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಶ್ವವಿದ್ಯಾಲಯ ಪ್ರೊ.ಟಿ.ಎನ್.ಶ್ರೀಧರ ಮತ್ತು ಕಾಲೇಜುಗಳ ಪ್ರಾಂಶುಪಾಲರು ಇದ್ದರು.