21ಕ್ಕೆ ಡಿಸಿ ಕಚೇರಿ ಮುಂದೆ ಸಿಎನ್ಸಿ ಸತ್ಯಾಗ್ರಹ
ಮಡಿಕೇರಿ: ಅಂತಾರಾಷ್ಟ್ರೀಯ ಜನಾಂಗೀಯ ತಾರತಮ್ಯ ನಿವಾರಣಾ ದಿನದ ಅಂಗವಾಗಿ ಸಿಎನ್ಸಿ ಸಂಘಟನೆ ಕೊಡವ ಲ್ಯಾಂಡ್ ಮತ್ತು ಕೊಡವರಿಗೆ ರಾಜ್ಯಾಂಗದ ಭದ್ರತೆ ಒದಗಿಸಲು ಆಗ್ರಹಿಸಿ ಮಾ.21ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸತ್ಯಾಗ್ರಹ ಆಯೋಜಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ, ಅಂತಾರಾಷ್ಟ್ರೀಯ ಜನಾಂಗೀಯ ತಾರತಮ್ಯ ನಿವಾರಣಾ ದಿನದ ಪ್ರಯುಕ್ತ ಮೇ 21 ರಂದು ಮಡಿಕೇರಿಯಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಂಘಟನೆಯ ಸದಸ್ಯರು, ಧರಣಿ ಪ್ರತಿಭಟನೆ ನಡೆಸಲಿದ್ದು, ಈ ಸತ್ಯಾಗ್ರಹದ ಮೂಲಕ ಕೊಡವರ ವಿವಿಧ ಬೇಡಿಕೆಗಳ ಈಡೇರಿಕೆಗೆ ಹಕ್ಕೊತ್ತಾಯ ಮಂಡಿಸುವುದಾಗಿ ಹೇಳಿದರು.
ವಿವಿಧ ಬೇಡಿಕೆ: ಕೊಡವರ 45 ಪ್ರಾಚೀನ ನಾಡುಗಳನ್ನು ಸಂವಿಧಾನದ 6ನೇ ಪರಿಚ್ಛೇದಕ್ಕೆ ಸೇರಿಸುವಂತೆ, ಕೊಡವರನ್ನು ಅಲ್ಪಸಂಖ್ಯಾತ ಬುಡಕಟ್ಟು ಜನಾಂಗವೆಂದು ಪರಿಗಣಿಸುವಂತೆ, ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವುದರೊಂದಿಗೆ ಕೋವಿಯ ಹಕ್ಕು ಅಭಾದಿತವಾಗಿ ಮುಂದುವರಿಯಲು ರಾಜ್ಯಾಂಗ ಖಾತ್ರಿ ನೀಡುವಂತೆ ಮತ್ತು ಕೊಡವರಿಗೆ ಆಂತರಿಕ ಸ್ವಯಂ ನಿರ್ಣಯದ ಹಕ್ಕನ್ನು ಒದಗಿಸುವಂತೆ ಒತ್ತಾಯಿಸಲಾಗುತ್ತದೆ ಎಂದು ನಾಚಪ್ಪ ತಿಳಿಸಿದರು.
ವ್ಯವಸ್ಥಿತ ಪಿತೂರಿ: ಕನ್ನಡ ಭಾಷೆಯನ್ನು ಬೆಳೆಸುವ ಮತ್ತು ಮಲಯಾಳಂ ಭಾಷೆಯನ್ನು ವಿರೋಧಿಸುವ ನೆಪದಲ್ಲಿ ಕೊಡವ ಭಾಷೆಯನ್ನು ನಿರ್ನಾಮ ಮಾಡುವ ಪಿತೂರಿಯ ಭಾಗವಾಗಿ ಕುಟ್ಟ ಗ್ರಾಮ ಪಂಚಾಯಿತಿಯ ಕನ್ನಡ ನಾಮಫಲಕವನ್ನು ಅಳವಡಿಸಲು ಆದೇಶ ಮಾಡಿರುವುದಾಗಿ ಆರೋಪಿಸಿದ ನಾಚಪ್ಪ ಕೊಡವ ಭಾಷೆಯಲ್ಲಿ ನಾಮಫಲಕ ಅಳವಡಿಕೆಗೆ ಕುಟ್ಟ ಗ್ರಾ.ಪಂ. ನೊಟೀಸ್ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಅಕ್ರಮ- ಸಕ್ರಮ ಯೋಜನೆಯಡಿ ಫಲಾನುಭವಿಯಾಗಿರುವ ಕೊಡವರಿಗೆ ಬೆಂಬಲ ನೀಡುವ ಸಲುವಾಗಿ ವೀರಾಜಪೇಟೆಯಲ್ಲಿ ಮಾ.27 ಮತ್ತು ಟಿ. ಶೆಟ್ಟಿಗೇರಿಯಲ್ಲಿ ಏ.1ರಂದು ಮಾನವ ಸರಪಳಿ ಕಾರ್ಯಕ್ರಮ ಆಯೋಜಿಸಿರುವುದಾಗಿ ನಾಚಪ್ಪ ತಿಳಿಸಿದರು.
ಗೋಷ್ಠಿಯಲ್ಲಿ ಸಿಎನ್ಸಿ ಸಂಘಟನೆಯ ಪ್ರಮುಖರಾದ ಕಲಿಯಂಡ ಪ್ರಕಾಶ್, ಪುಲ್ಲೇರ ಕಾಳಪ್ಪ ಮತ್ತಿತರರು ಉಪಸ್ಥಿತರಿದ್ದರು.
ವಿವಿಧ ಬೇಡಿಕೆ ಮತ್ತು ಮೇ.21 ರ ಧರಣಿ ಕುರಿತಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.