ಪತ್ನಿ ಕೊಂದ ಪತಿಗೆ ಐದು ವರ್ಷ ಕಠಿಣ ಸಜೆ, ದಂಡ
ಮಡಿಕೇರಿ: ಕುಡಿದು ಹಣಕ್ಕಾಗಿ ಪೀಡಿಸಿ ಪತ್ನಿಯನ್ನು ಸೌದೆಯಿಂದ ಹೊಡೆದು ಕೊಲೆ ಮಾಡಿದ್ದ ಆರೋಪಿ ಪತಿ ಯಡವನಾಡು ಗ್ರಾಮದ ಚಂದ್ರು ಎಂಬಾತನಿಗೆ ಮಡಿಕೇರಿಯ ಶೀಘ್ರಗತಿ ನ್ಯಾಯಾಲಯವು ಆತನ ಅಪರಾಧ ಸಾಬೀತಾದ ಹಿನ್ನಲೆಯಲ್ಲಿ 5 ವರ್ಷ ಕಠಿಣ ಸಜೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.
ಸೋಮವಾರಪೇಟೆ ತಾಲೂಕಿನ ಯಡವನಾಡು ಗ್ರಾಮದ ಗಿರಿಜನ ಕಾಲೋನಿ ನಿವಾಸಿ ಚಂದ್ರು ಎಂಬಾತ ತನ್ನ ಪತ್ನಿ ರಾಧಳೊಂದಿಗೆ 2010ರ ಅಕ್ಟೋಬರ್ 10 ರಂದು ರಾತ್ರಿ 10 ಗಂಟೆ ವೇಳೆಗೆ ಕಂಠಪೂರ್ತಿ ಕುಡಿದು ಬಂದು ಹಣಕ್ಕಾಗಿ ಜಗಳ ಮಾಡಿದ್ದ.
ಈ ಸಂದರ್ಭ ಪತ್ನಿ ರಾಧಾಳಿಗೆ ದೊಣ್ಣೆಯಿಂದ ಮಾರಣಾಂತಿಕವಾಗಿ ಹೊಡೆದು ಆಕೆಯ ಸಾವಿಗೆ ಕಾರಣನಾದ. ಈ ಬಗೆಗಿನ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲು ಮಾಡಿಕೊಂಡು ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಚಂದ್ರುವಿನ ಮೇಲಿದ್ದ ಕೊಲೆ ಆರೋಪ ಸಾಬೀತಾದುದರಿಂದ ಚಂದ್ರುಗೆ 5 ವರ್ಷಗಳ ಕಠಿಣ ಸಜೆ ಮತ್ತು 8 ಸಾವಿರ ದಂಡವನ್ನು ವಿಧಿಸಿ ತೀರ್ಪು ನೀಡಿತು.
ಪಾವತಿಯಾಗುವ ದಂಡ ಹಣದಲ್ಲಿ 6 ಸಾವಿರವನ್ನು ಮೃತ ರಾಧಾಳ ತಾಯಿಗೆ ಪರಿಹಾರವಾಗಿ ನೀಡುವಂತೆ ತೀರ್ಪಿನಲ್ಲಿ ನ್ಯಾಯಾಧೀಶರು ಹೇಳಿದ್ದಾರೆ. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಎ.ಪಿ. ಫಿರೋಜ್ ಖಾನ್ ವಕಾಲತ್ತು ವಹಿಸಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.