ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸ್ವರ್ಣ ಕಲಶ ಸಮರ್ಪಣೆ

Parashurama
Updated On : 17 Mar 2013, 12:18 pm

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀಅಮ್ಮನವರ ಗರ್ಭಗುಡಿಯ ಜೀರ್ಣೋದ್ಧಾರ ಪ್ರಯುಕ್ತ ಮೇಲ್ಛಾವಣಿಗೆ ಚಿನ್ನದ ಹೊದಿಕೆ ಮಾಡಲಾಗಿದ್ದು, ಶನಿವಾರ ಸಂಜೆ ಶ್ರೀಅಮ್ಮನವರ ಗುಡಿಗೆ ಸ್ವರ್ಣ ಕಲಶಗಳ ಸಮರ್ಪಣಾ ಸಮಾರಂಭ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು.
ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಅರಳು ಸಿಂಚನದ ಮೂಲಕ ಕಲಶಗಳ ಸಮರ್ಪಣೆ ಮಾಡಿ, ಆಧ್ಯಾತ್ಮಿಕ ಅನುಭವ ಪಡೆಯಲು ಸಮರ್ಪಣಾ ಮನೋಭಾವ ಅವಶ್ಯ. ಸ್ವರ್ಣದಲ್ಲಿ ದೈವೀ ಸ್ವಾಭಾವದ ಗುಣಗಳು ಅಡಕವಾಗಿವೆ. ಶಕ್ತಿಯನ್ನು ಆಕರ್ಷಿಸುವ, ಹಿಡಿದಿಡುವ ಗುಣ ಬೆಳ್ಳಿ- ಬಂಗಾರಕ್ಕೆ ಇದೆ. ಪ್ರಾಕೃತಿಕ ಶಕ್ತಿಗಳನ್ನು ಕೇಂದ್ರೀಕರಿಸಲು ದೇವಳದ ಮೇಲೆ ಸ್ವರ್ಣ ಶಿಖರಗಳನ್ನು ಸ್ಥಾಪಿಸಲಾಗುತ್ತದೆ. ಇದರಿಂದ ದೇವಳದೊಳಗೆ ಸಾತ್ವಿಕತೆ ತುಂಬಿ ಅದು ಭಕ್ತರಿಗೆ ಹಂಚಿಕೆಯಾಗುತ್ತದೆ. ಸಾತ್ವಿಕತೆ ಸಮೃದ್ಧಿಯಾದಾಗ ಆಧ್ಯಾತ್ಮಿಕ ಸ್ತರದಲ್ಲಿ ಹೆಚ್ಚು ಚಿಂತನೆ ಮಾಡಲು ಮನಸ್ಸು ಉದ್ಯುಕ್ತವಾಗುತ್ತದೆ ಎಂದರು.
ಶ್ರೀಧಾಮ ಮಾಣಿಲದ ಶ್ರೀಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ಕೇರಳ- ಹಿಂದೂ ಐಕ್ಯ ವೇದಿಕೆಯ ರವೀಶ್ ತಂತ್ರಿ ಕುಂಟಾರು ಧಾರ್ಮಿಕ ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಮಂಜುನಾಥ ಸ್ವಾಮಿ ಹಾಗೂ ಹೆಗ್ಗಡೆಯವರ ಸಂಬಂಧವನ್ನು ಬೆಸೆದವರು ಧರ್ಮದೇವತೆಗಳು. ಬೇರೆ ಕಡೆ ಅರಸರುಗಳಿಗೆ ಜನರು ಪಟ್ಟಕಟ್ಟಿದರೆ ಇಲ್ಲಿ ಧರ್ಮದೇವತೆಗಳೇ ಹೆಗ್ಗಡೆಯವರಿಗೆ ಪಟ್ಟ ಕಟ್ಟುವುದು ಸಂಪ್ರದಾಯ. ಇಲ್ಲಿಯ ನುಡಿಕಟ್ಟುಗಳು ಎಲ್ಲ ಕಾಲಕ್ಕೆ ಪ್ರಸ್ತುತವಾಗಿವೆ. ದೇವರು ನಮ್ಮ ಕ್ರಿಯೆಗಳಿಗೆ ಸಾಕ್ಷಿಯಾಗಿ ಇರುತ್ತಾರೆ ಎಂದರು. ಇದೇ ಸಂದರ್ಭ ದೇಗುಲ ಕಾರ್ಯದಲ್ಲಿದ್ದ ವಾಸ್ತುಶಿಲ್ಪಿ ಪ್ರಸಾದ್ ಮುನಿಯಂಗಳ, ನೀಲೇಶ್ವರ ಆಲಂಪಾಡಿ ವಾಸುದೇವ ತಂತ್ರಿ, ನೀಲೇಶ್ವರ ಆಲಂಪಾಡಿ ಪದ್ಮನಾಭ ತಂತ್ರಿ, ಕಲ್ಲಿನ ಶಿಲ್ಪಿ ರಾಜು ಮೇಸ್ತ್ರಿ, ಮರದ ಶಿಲ್ಪಿ ನಾರಾಯಣ ಆಚಾರ್ಯ ಕಲ್ಲಮಂಡ್ಕೂರು, ಬೆಳ್ಳಿಯ ಬಾಗಿಲು ಹಾಗೂ ಬೆಳ್ಳಿಯ ಇತರ ಕೆತ್ತನೆಗಳನ್ನು ಮಾಡಿದ ವಿದ್ಯಾಧರ ಶೇಟ್, ಹಿರಿಯ ವ್ಯವಸ್ಥಾಪಕ ಗೋಪಾಲ ಮೆನನ್, ವ್ಯವಸ್ಥಾಪಕ ವಸಂತ ಗೌಡ ಅವರನ್ನು ಡಾ. ವೀರೇಂದ್ರ ಹೆಗ್ಗಡೆ ಸಮ್ಮಾನಿಸಿದರು.
ಸ್ವರ್ಣಶ್ರೀ ಅಡಿಗ, ತನ್ಮಯಿ ಪ್ರಾರ್ಥಿಸಿದರು. ಡಿ.ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಅಧ್ಯಾಪಕ ಸೋಮಶೇಖರ ಶೆಟ್ಟಿ ವಂದಿಸಿದರು. ಜಯರಾಮ ಮಯ್ಯ ವಂದಿಸಿದರು.
ಕಾರ್ಯಕ್ರಮಕ್ಕೆ ಮೊದಲು ನೆಲ್ಯಾಡಿ ಬೀಡಿನಿಂದ ಧರ್ಮಸ್ಥಳದ ಬೀದಿಗಳಲ್ಲಿ ಸ್ವರ್ಣ ಶಿಖರಗಳ ವರ್ಣರಂಜಿತ ಮೆರವಣಿಗೆ ನಡೆಯಿತು. ಶಿಖರಗಳ ಸಮರ್ಪಣೆ ವೇಳೆ ತುಂತರು ವರ್ಷಧಾರೆ ಉಂಟಾಗಿ ವಾತಾವರಣ ತಂಪೇರಿದ್ದು ವಿಶೇಷವಾಗಿತ್ತು. ಅಮ್ಮನವರ ಗರ್ಭಗುಡಿ ಮತ್ತು ಸ್ವರ್ಣಲೇಪಿತ ಮೇಲ್ಛಾವಣಿಯ ಸಮರ್ಪಣೆಯು ಮಾ.18ರಂದು ಪೂರ್ವಾಹ್ನ 9 ಗಂಟೆಗೆ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments