ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

6 ಲಕ್ಷಕ್ಕೂ ಅಧಿಕ ಮಂದಿಗೆ ಸೂರು: ಸೋಮಣ್ಣ

Mainashree
Updated On : 18 Mar 2013, 11:30 am

-ಕುಡುಪು, ಕೋಟೆಕಾರ್ನಲ್ಲಿ ಗೃಹಮಂಡಳಿ ವಸತಿ ಸಮುಚ್ಚಯಗಳಿಗೆ ಗುದ್ದಲಿ ಪೂಜೆ
ಮಂಗಳೂರು: ಬಸವ ವಸತಿ ಯೋಜನೆಯಿಂದ 6 ಲಕ್ಷಕ್ಕೂ ಮೇಲ್ಪಟ್ಟ ಜನರಿಗೆ ವಸತಿ ಒದಗಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕೇಂದ್ರದ ಇಂದಿರಾ ಆವಾಸ್ 37 ಸಾವಿರ ಜತೆಯಲ್ಲಿ ರಾಜ್ಯ ಸರ್ಕಾರ 42 ಸಾವಿರ ನೀಡಿ ಮನೆಗಳನ್ನು ನೀಡುತ್ತಿವೆ. ಕೊಳಚೆ ನಿರ್ಮೂಲನೆ ಮಂಡಳಿಯಿಂದ 100 ಕೋಟಿ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಮಧ್ಯಮ ವರ್ಗದವರಿಗೆ ಸೂರು ಒದಗಿಸುವ ದೃಷ್ಟಿಯಿಂದ ಕರ್ನಾಟಕ ಗೃಹಮಂಡಳಿ ಕುಡುಪು ಮತ್ತು ಕೋಟೆಕಾರ್ ಬಡಾವಣೆಯಲ್ಲಿ ನಿರ್ಮಿಸಿದ 286 ಮನೆಗಳನ್ನೊಳಗೊಂಡ ಬಹುಮಹಡಿ ವಸತಿ ಸಮುಚ್ಚಯಗಳಿಗೆ ಭಾನುವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಹಿಂದಿನ 56 ವರ್ಷಗಳಲ್ಲಿ 4 ಸಾವಿರ ಮನೆ ವಿತರಿಸಿದರೆ ಬಿಜೆಪಿ ಆಡಳಿತದಲ್ಲಿ 40 ಸಾವಿರಕ್ಕೂ ಅಧಿಕ ಸೈಟ್ ಮತ್ತು 12 ಸಾವಿರಕ್ಕೂ ಹೆಚ್ಚು ಮನೆ ನಿರ್ಮಿಸಿದೆ. ಮನೆ ನಿರ್ಮಾಣ ಜತೆ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ರಾಜ್ಯದ ಎಲ್ಲ 30 ಜಿಲ್ಲಾ ಕೇಂದ್ರಗಳಲ್ಲಿಯೂ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ ಎಂದು ಅವರು ಹೇಳಿದರು.
ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ, ವಿಧಾನ ಸಭೆ ಉಪಾಧ್ಯಕ್ಷ ಎನ್.ಯೋಗೀಶ್ ಭಟ್, ಶಾಸಕ ಕೃಷ್ಣ ಜೆ.ಪಾಲೇಮಾರ್, ವಿಧಾನ ಪರಿಷತ್ ಸದಸ್ಯ ಕೆ.ಮೋನಪ್ಪ ಭಂಡಾರಿ, ಸ್ಥಳೀಯ ಪಾಲಿಕೆ ಸದಸ್ಯ ಭಾಸ್ಕರ ಮೊಯ್ಲಿ ಇದ್ದರು. ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರುಪಿಸಿದರು.
ಬಸವ ವಸತಿ ಯೋಜನೆ ಲಾಕ್ ತೆರವು: ಬಸವ ವಸತಿ ಯೋಜನೆಯಡಿ ಮಂಗಳೂರಲ್ಲಿ 30 ಸಾವಿರ ಮನೆ ನೀಡಿದ್ದು, ಕಾಮಗಾರಿ ಆರಂಭಿಸದ ಹಿನ್ನೆಲೆಯಲ್ಲಿ ಖಾತೆಗಳು ಲಾಕ್ ಆದ ವಿಚಾರ ತಿಳಿದಿದೆ. ಅಧಿಕಾರಿಗಳು ಮುತುವರ್ಜಿ ವಹಿಸದ ಕಾರಣ ಹೀಗಾಗಿದೆ. ಸದ್ಯಕ್ಕೆ ಮಾಡಿದ ಲಾಕ್ ತೆರೆಯುವಂತೆ ಆದೇಶ ನೀಡಿದ್ದೇನೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಸೋಮಣ್ಣ, ಮನೆಯನ್ನು 6 ತಿಂಗಳ ಒಳಗೆ ನಿರ್ಮಿಸಬೇಕು. ಇಲ್ಲವಾದರೆ ಮತ್ತೆ ಸಮಸ್ಯೆ ಆಗುತ್ತದೆ. ಚೆಕ್, ಹಣಕಾಸಿಗಾಗಿ ಅಧಿಕಾರಿಗಳಿಗೆ ಎಡತಾಕಿ ಕಂಬ ಸುತ್ತುವ ಸಮಸ್ಯೆ ಆಗಬಾರದು. ನೈಜ ಫಲಾನುಭವಿಗೆ ಸೌಲಭ್ಯ ಲಭಿಸಬೇಕು ಎಂಬ ಕಾರಣಕ್ಕೆ ಫಲಾನುಭಾವಿ ಖಾತೆಗೆ ಜಿಪಿಎಸ್ ಅಳವಡಿಸಲಾಗಿದೆ. ಮನೆ ಮುಂದೆ ಫಲಾನುಭವಿ ಫೋಟೋ ತೆಗೆದು ಕಳುಹಿಸಬೇಕು. ಫಲಾನುಭವಿ ಹೆಬ್ಬೆಟ್ಟು ಒತ್ತಿದ ತಕ್ಷಣ ಕಂತಿನ ಹಣ ಮಂಜೂರಾಗುವ ಪಾರದರ್ಶಕ ವ್ಯವಸ್ಥೆ ಮಾಡಲಾಗಿದೆ ಎಂದರು. 5 ವರ್ಷಗಳಲ್ಲಿ 8 ಲಕ್ಷ ಮನೆ ಮಾಡಿ ಮುಗಿಸುವ ಯೋಜನೆ ಇದೆ. ಬಾಕಿ ಉಳಿದಿರುವ 1.6 ಲಕ್ಷ ಮನೆ ಮಾ.31ರೊಳಗೆ ಮಾಡಿ ಮುಗಿಸಲಾಗುವುದು ಎಂದರು.
ದೊಡ್ಡ ಮನೆಗೂ ಸಹಾಯಧನ: ಬಸವ ಯೋಜನೆಯಡಿ 350 ಚದರಡಿಗಿಂತ ದೊಡ್ಡ ಮನೆ ನಿರ್ಮಿಸಿದರೆ, ರು. 5 ಲಕ್ಷಕ್ಕಿಂತ ಹೆಚ್ಚು ಮೊತ್ತದಲ್ಲಿ ಮನೆ ಕಟ್ಟಿದರೆ ಯೋಜನೆ ಅಂತಿಮ ಕಂತುಗಳು ಲಭಿಸುವುದಿಲ್ಲ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಡವರಾದರೂ ಸ್ವಾಭಿಮಾನಿಗಳು ಸ್ವಲ್ಪ ದೊಡ್ಡ ಮನೆಯೇ ನಿರ್ಮಿಸುತ್ತಾರೆ ಎಂದು ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ  ಹೇಳಿದರು. ಈ ಹಿನ್ನೆಲೆಯಲ್ಲಿ 500 ಚದರಡಿ ಮನೆ ನಿರ್ಮಿಸಿದರೂ ಯೋಜನೆ ಸಂಪೂರ್ಣ ಮೊತ್ತ ಸಿಗುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ವ್ಯವಹಾರ ಅಲ್ಲ ಸೇವೆ: ಉಳ್ಳಾಲ ಕೋಟೆಕಾರ್ ಬಡಾವಣೆಯಲ್ಲಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸೋಮಣ್ಣ, ಗೃಹಮಂಡಳಿ ವ್ಯವಹಾರ ಪಾರದರ್ಶಕವಾಗಿದ್ದು, ಇದು ವ್ಯವಹಾರವಲ್ಲ ಸೇವೆ ಎಂದು ಸ್ಪಷ್ಟ ಪಡಿಸಿದರು. ನಗರದ ಎಂ.ಜಿ.ರೋಡ್ ಮತ್ತು ಕೊಟ್ಟಾರದಲ್ಲಿ ವಸತಿ ಸಮುಚ್ಛಯಕ್ಕೆ 1,500 ಕೋಟಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಈಗಿರುವ ಸರ್ಕಾರಿ ವಸತಿಗೃಹಗಳನ್ನು ಸರಿಪಡಿಸುವ ಉದ್ದೇಶ ಇದೆ. ಕೇವಲ ಬೆಂಗಳೂರು, ಮೈಸೂರಿಗೆ ಗೃಹಮಂಡಳಿ ಸೀಮಿತಗೊಳಿಸದೆ ರಾಜ್ಯದ ಎಲ್ಲ ಭಾಗಕ್ಕೂ ವಿಸ್ತರಿಸುತ್ತಿದೆ ಎಂದರು.
ಶಾಸಕ ಯು.ಟಿ.ಖಾದರ್ ಮಾತನಾಡಿ, ಉಳ್ಳಾಲ ಒಂಬತ್ತುಕೆರೆಯಲ್ಲಿರುವ 10 ಎಕರೆ ಪ್ರದೇಶದ ರಾಜೀವಗಾಂಧಿ ವಸತಿ ಯೋಜನೆಯಡಿ ನಿರ್ಮಾಣವಾದ ಮನೆಗಳು ವಾಸಕ್ಕೆ ಯೋಗ್ಯವಾಗಿಲ್ಲ. ಬಡಜನರಿಗೆ ಗೃಹಮಂಡಳಿ ಸೂಕ್ತ ನಿವೇಶನ ಒದಗಿಸಬೇಕು ಎಂದು ಮನವಿ ಮಾಡಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಶೇಖರ್ ಕಣೀರುತೋಟ, ಗೃಹಮಂಡಳಿ ಅಧಿಕಾರಿಗಳು ಇದ್ದರು.  ವಾಸುದೇವ ರಾವ್ ಕುಡುಪು ವಂದಿಸಿದರು.

ಆಹ್ವಾನ ಸಿಗದೆ ಭಾಸ್ಕರ ಮೊಯ್ಲಿ ಗರಂ!
ಕುಡುಪು ಗೃಹಮಂಡಳಿ ಸಂಕೀರ್ಣ ಶಂಕುಸ್ಥಾಪನೆ ಸಂದರ್ಭ ಸ್ಥಳೀಯ ಕಾರ್ಪೊರೇಟರ್ ಅಹ್ವಾನ ನೀಡಿಲ್ಲ, ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಲ್ಲ ಎಂದು ಭಾಸ್ಕರ ಮೊಯ್ಲಿ ಅಸಮಧಾನ ವ್ಯಕ್ತಪಡಿಸಿದರು. ಗೃಹಮಂಡಳಿ ಅಧಿಕಾರಿಗಳ ಜತೆ ಈ ಕುರಿತು ಕೇಳಿದಾಗ ಪ್ರೋಟೋಕಾಲ್ನಲ್ಲಿ ಕಾರ್ಪೊರೇಟರ್ ಹೆಸರು ಇಲ್ಲ ಎಂದು ವಿವರಿಸಿದರು.
   ಆದರೆ ಭಾಸ್ಕರ ಮೊಯ್ಲಿ ಕೋಪ ತಣಿಯಲಿಲ್ಲ. ಕೊನೆಗೆ ಕೃಷ್ಣ ಜೆ.ಪಾಲೆಮಾರ್, ಮೋನಪ್ಪ ಭಂಡಾರಿ ಅವರು ಭಾಸ್ಕರ ಮೊಯ್ಲಿವರನ್ನು ಪದೇ ಪದೇ ಕರೆದಾಗ ಶಂಕುಸ್ಥಾಪನೆ ವೇದಿಕೆಗೆ ಆಗಮಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement