ತಾಳ್ತಜೆ ಪರಿಪೂರ್ಣ ವಿದ್ವಾಂಸ: ಡಾ. ಕಲಬುರ್ಗಿ
ಪುತ್ತೂರು: ಪ್ರಾಚೀನ, ಆಧುನಿಕ, ನವ್ಯ, ನವೋದಯ ಹೀಗೆ ಸಾಹಿತ್ಯದ ವಿವಿಧ ಆಯಾಮಗಳನ್ನು ವಿಸ್ತಾರವಾಗಿ ಅಧ್ಯಯನ ನಡೆಸಿದ್ದಲ್ಲದೆ, ಆ ಬಗ್ಗೆ ಪ್ರಬುದ್ಧ ಜ್ಞಾನ ಹೊಂದಿರುವ ಡಾ.ತಾಳ್ತಜೆ ವಸಂತ ಕುಮಾರ್ ಪರಿಪೂರ್ಣ ವಿದ್ವಾಂಸ ಎಂದು ಹಿರಿಯ ವಿಮರ್ಶಕ, ವಿದ್ವಾಂಸ ಡಾ.ಎಂ.ಎಂ. ಕಲಬುರ್ಗಿ ಹೇಳಿದ್ದಾರೆ. ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಭಾನುವಾರ ಡಾ.ತಾಳ್ತಜೆ ವಸಂತ ಕುಮಾರ್ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಆಕ್ರಮಣ ಹಾಗೂ ಸಂರಕ್ಷಣಾ ಮನೋಭಾವದ ವ್ಯಕ್ತಿಗಳಿರುತ್ತಾರೆ. ಸಂರಕ್ಷಣಾ ಮನೋಭಾವದವರು ತಾವು ತೊಂದರೆಗೊಳಗಾಗುತ್ತಿದ್ದರೂ ಪರಿಸರ ಬೆಳೆಯಬೇಕೆಂದು ಬಯಸುತ್ತಾರೆ. ಅಂತಹ ಸಜ್ಜನ ವ್ಯಕ್ತಿತ್ವದ ತಾಳ್ತಜೆ ವಸಂತ ಕುಮಾರ್ ಅವರದು. ಕನ್ನಡ ವಿಶ್ವವಿದ್ಯಾನಿಲಯಕ್ಕೆ ಉಪಕುಲಪತಿಯಾಗುವ ಅರ್ಹತೆ ಹೊಂದಿದವರು ಎಂದು ಡಾ.ಕಲಬುರ್ಗಿ ಹೇಳಿದರು. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಡಾ. ಏರ್ಯ ಲಕ್ಷ್ಮಿನಾರಾಯಣ ಆಳ್ವ, ಡಾ.ತಾಳ್ತಜೆ ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಕೆ.ರಾಮ ಭಟ್ ಉರಿಮಜಲು, ಕಾರ್ಯಾಧ್ಯಕ್ಷ ಪ್ರೊ.ಎ.ವಿ. ನಾರಾಯಣ, ಪ್ರಧಾನ ಕಾರ್ಯದರ್ಶಿ ಡಾ.ಗೋವಿಂದ ಪ್ರಸಾದ್ ಕಜೆ ಇದ್ದರು. ವಿವೇಕಾನಂದ ಕಾಲೇಜಿನ ಪ್ರಾಚಾರ್ಯ ಡಾ.ಎಚ್. ಮಾಧವ ಭಟ್ ಸ್ವಾಗತಿಸಿದರು. ಪ್ರಾಧ್ಯಾಪಕಿ ಡಾ.ಇಂದಿರಮ್ಮ ಎಸ್. ವಂದಿಸಿದರು. ಡಾ. ವರದರಾಜ ಚಂದ್ರಗಿರಿ ನಿರೂಪಿಸಿದರು.