ಪೊಲೀಸ್ ಸರ್ಕಲ್
ಮೊಬೈಲ್ ಟವರ್ ಕಂಟೈನರ್ ಸ್ಫೋಟ
ವಿಟ್ಲ: ಪರಿಯಾಲ್ತಡ್ಕದಲ್ಲಿ ಮೊಬೈಲ್ ಟವರ್ನ ಕಂಟೈನರ್ ಸ್ಫೋಟಗೊಂಡು ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಪರಿಯಾಲ್ತಡ್ಕ ಬಿಎಸ್ಎನ್ಎಲ್ಗೆ ಸಂಬಂಧಿಸಿದ ಟವರ್ನ ಬಿಟಿಎಸ್ ಮತ್ತು ವೈರ್ಲೆಸ್ ಫೋನ್ಗಳ ಸಂಪರ್ಕಕ್ಕೆ ಅಳವಡಿಸಿದ ಕಂಟೈನರ್ ಸ್ಫೋಟಗೊಂಡು ಬೆಂಕಿ ಹತ್ತಿಕೊಂಡಿತ್ತು. ಸ್ಫೋಟದ ತೀವ್ರತೆಗೆ ಕಂಟೈನರ್ ಸಂಪೂರ್ಣ ಛಿದ್ರವಾಗಿ ಹೋಗಿದೆ. ರಾತ್ರಿ ಬೆಂಕಿ ಆರಿಸಲಾಗಿದ್ದು, ಸುಮಾರು ರು. 25 ಲಕ್ಷ ನಷ್ಟ ಸಂಭವಿಸರಬಹುದು ಎಂದು ಅಂದಾಜಿಸಲಾಗಿದೆ. ಭಾನುವಾರ ಬೆಳಗ್ಗೆ ಮಂಗಳೂರು ಬಿಎಸ್ಎನ್ಎಲ್ ಡಿಜಿಎಂಗಳಾದ ವಾಸುದೇವ ಹೊಳ್ಳ, ಎಸ್.ಎಂ. ಹೆಗ್ಡೆ, ಎಜಿಎಂಆರ್ಎಸ್ ಪೈಲಕೇರಿ, ಡಿಎಎಂಎಸ್ ಲೋಕೇಶ್, ಎಸ್ಡಿಇ ನಾರಾಯಣ ನಾಯ್ಕ, ಆನಂದ ಸ್ಥಳಕ್ಕೆ ಬೇಟಿ ನೀಡಿ ಮಹಜರು ಮಾಡಿದ್ದಾರೆ.
ಬ್ಯಾನರ್ ಹರಿದು ದಾಂದಲೆ: ದೂರು
ಪುತ್ತೂರು: ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ರೆಂಜದಲ್ಲಿ ಭಾನುವಾರ ನಡೆಯಲಿದ್ದ ಎಸ್ಕೆಎಸ್ಎಸ್ಎಫ್ ಮಹಾಸಮ್ಮೇಳನದ ಪ್ರಯುಕ್ತ ಅಳವಡಿಸಲಾಗಿದ್ದ ಬ್ಯಾನರ್ವೊಂದನ್ನು ಹರಿದು ಹಾಕಿ ದಾಂದಲೆ ಸೃಷ್ಟಿಸಿದ್ದ ವ್ಯಕ್ತಿಯೊಬ್ಬನ ವಿರುದ್ಧ ಸಂಪ್ಯ ಪೊಲೀಸರಿಗೆ ದೂರು ನೀಡಲಾಗಿದೆ. ವೃತ್ತಿಯಲ್ಲಿ ಚಾಲಕರಾಗಿರುವ ಬೆಟ್ಟಂಪಾಡಿ ಗ್ರಾಮದ ಅಶ್ರಫ್ ಯಾನೆ ಅಚ್ಚು ಎಂಬವರ ವಿರುದ್ಧ ದೂರು ನೀಡಲಾಗಿದ್ದು, ಸಂಪ್ಯ ಪೊಲೀಸರು ಅಲ್ಲಿಗೆ ತೆರಳುತ್ತಿದ್ದಂತೆ ಆತ ಪರಾರಿಯಾಗಿದ್ದಾನೆ. ಪೊಲೀಸರು ಆರೋಪಿಯ ಬೈಕನ್ನು ವಶಪಡಿಸಿಕೊಂಡಿದ್ದಾರೆ.
ದುಬೈಯಲ್ಲಿ ಅಪಘಾತ: ಬೆಳ್ಳಾರೆ ಯುವಕ ಸಾವು
ಸುಳ್ಯ: ದುಬೈಯಲ್ಲಿ ತ್ರಿಸ್ಟಾರ್ ಹೊಟೇಲೊಂದರಲ್ಲಿ ಉದ್ಯೋಗಿಯಾಗಿದ್ದ ಬೆಳ್ಳಾರೆಯ ಸಂಶುದ್ದೀನ್ (25) ಎಂಬ ಯುವಕ ಶನಿವಾರ ರಾತ್ರಿ ದುಬಾಯಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ. ಇದೇ ಕಾರಿನಲ್ಲಿದ್ದ ಅಜ್ಜಾವರದ ಸತ್ತಾರ್ ಎಂಬ ಯುವಕ ಗಾಯಗೊಂಡಿದ್ದಾನೆ.
ಕಾಡುಕೋಣ ಕಳೇಬರ ಪತ್ತೆ
ಸುಳ್ಯ: ಜಾಲ್ಸೂರು ಗ್ರಾಮದ ಗೋಂಟಡ್ಕ ಎಂಬಲ್ಲಿ ರಕ್ಷಿತಾರಣ್ಯದ ರಬ್ಬರ್ ನಿಗಮದ ನೆಡುತೋಪಿನ ಬಳಿ ಕಾಡುಕೋಣ ಮೃತಪಟ್ಟ ಘಟನೆ ನಡೆದಿದೆ. ಗೋಂಟಡ್ಕ ಬಳಿ ರಬ್ಬರ್ ನಡುತೋಪಿಗೆ ಹಾಕಲಾಗಿರುವ ತಂತಿ ಬೇಲಿಯನ್ನು ಹಾರುವ ಯತ್ನದಲ್ಲಿ ಕಾಡುಕೋಣದ ಕಾಲಿಗೆ ಗಾಯವಾಗಿದೆ. ಆದರೆ, ಇದನ್ನು ಲೆಕ್ಕಿಸದೆ ಕಾಡುಕೋಣ ಅದೇ ಪ್ರದೇಶದಲ್ಲಿ ಓಡಾಡುತ್ತಿತ್ತು. ಕೆಲವು ದಿನದ ಹಿಂದೆ ಅದು ಮತ್ತೆ ಬೇಲಿ ಹಾರುವ ಪ್ರಯತ್ನ ಮಾಡಿದಾಗ ಕಣಿಗೆ ಬಿದ್ದು ಗಂಭೀರ ಗಾಯಗೊಂಡಿತ್ತು ಎನ್ನಲಾಗಿದೆ. ಶನಿವಾರ ಮುಂಜಾನೆ ಅದರ ಶವ ಕಣಿಯಲ್ಲಿ ಪತ್ತೆಯಾಗಿದೆ. ಇದನ್ನು ತಿಳಿದ ಅರಣ್ಯ ಇಲಾಖೆಯವರು ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಎ.ಎಸ್. ಅಬ್ಬಾಸ್ ಹಾಗೂ ಪುತ್ತೂರು ವಲಯ ರಕ್ಷಿತಾರಣ್ಯಾಧಿಕಾರಿ ಪಿ. ಶ್ರೀಧರ್ ಮತ್ತು ಇತರ ಅಧಿಕಾರಿಗಳು ಬಂದು ಮಹಜರು ನಡೆಸಿದರು. ಕಾಡುಕೋಣಕ್ಕೆ 5 ವರ್ಷ ಪ್ರಾಯವಾಗಿರಬಹುದು ಎಂದು ಅಂದಾಜಿಸಲಾಗಿದೆ. ಉಪವಲಯ ಅರಣ್ಯಾಧಿಕಾರಿ ಲೋಕೇಶ್ ಹಾಗೂ ಸಿಬ್ಬಂದಿ ಸುಳ್ಯ ಪಶು ವೈದ್ಯಕೀಯ ಸಹಾಯಕ ನಿರ್ದೇಶಕ ಡಾ. ರಾಜಣ್ಣ ಅವರಿಂದ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಅಂತ್ಯ ಸಂಸ್ಕಾರ ನೆರವೇರಿಸಿದರು.
ಸಂಪಾಜೆ: ಕಲ್ಲಂಗಡಿ ಸಾಗಿಸುತ್ತಿದ್ದ ಲಾರಿ ಪಲ್ಟಿ
ಸುಳ್ಯ: ಮಡಿಕೇರಿಯಿಂದ ಸುಳ್ಯ ಕಡೆಗೆ ಕಲ್ಲಂಗಡಿ ಹೇರಿಕೊಂಡು ಬರುತ್ತಿದ್ದ ಮಜ್ದಾ ಗಾಡಿಯು ಭಾನುವಾರ ಮುಂಜಾನೆ 5 ಗಂಟೆಗೆ ಸಂಪಾಜೆ ಸೊಸೈಟಿ ಎದುರಿನ ಸೇತುವೆ ಮೇಲೆ ಹತ್ತಿದ ಪರಿಣಾಮ ಪಲ್ಟಿಯಾದ ಘಟನೆ ನಡೆದಿದೆ. ಬೆಳಗ್ಗೆ ಗಂಟೆ 5 ರಿಂದ ಬೆಳಗ್ಗೆ 8.30ರ ವರೆಗೆ ರಸ್ತೆ ಬಂದ್ ಆಗಿ ಘನ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಲಾರಿಗೆ ಬಹುತೇಕ ಹಾನಿಯಾಗಿದೆ.
ಅಪಘಾತ: ಗಾಯಾಳು ಯುವಕ ಸಾವು
ಪುತ್ತೂರು: ಪುತ್ತೂರು ಪೇಟೆಯ ಹೊರ ವಲಯದ ಬನ್ನೂರು ಗ್ರಾಮದ ಕರ್ಮಲ ಎಂಬಲ್ಲಿ ಬೋರ್ವೆಲ್ ಲಾರಿ ಮತ್ತು ಬೈಕೊಂದರ ನಡುವೆ ಡಿಕ್ಕಿ ಸಂಭವಿಸಿ ಗಂಭೀರ ಗಾಯಗೊಂಡಿದ್ದ ಎಂಜಿನಿಯರ್ ಯುವಕ ಶನಿವಾರ ಮೃತಪಟ್ಟಿದ್ದಾನೆ. ಬನ್ನೂರು ಗ್ರಾಮದ ಜನತಾ ಕಾಲೋನಿಯ ನಿವಾಸಿ ಭುಜಂಗ ಆಚಾರ್ಯ ಅವರ ಪುತ್ರ, ಮಂಗಳೂರಿನ ಎಸ್.ಎನ್. ಕನ್ಸ್ಟ್ರಕ್ಶನ್ ಸಂಸ್ಥೆಯಲ್ಲಿ ಎಂಜಿಯರ್ ಆಗಿದ್ದ ಕಿಶನ್ ಕುಮಾರ್ (29) ಮೃತ ಯುವಕ. ಮಾರ್ಚ್ 10ರಂದು ಬನ್ನೂರು ಗ್ರಾಮದ ಕರ್ಮಲ ಬಲಮುರಿ ಗಣಪತಿ ದೇವಸ್ಥಾನದ ಬಳಿ ಕಿಶನ್ ಕುಮಾರ್ ಚಲಾಯಿಸುತ್ತಿದ್ದ ಬೈಕ್ ಮತ್ತು ಬೋರ್ವೆಲ್ ಲಾರಿಯೊಂದರ ನಡುವೆ ಡಿಕ್ಕಿ ಸಂಭವಿಸಿತ್ತು. ಗಂಭೀರ ಗಾಯಗೊಂಡಿದ್ದ ಕಿಶನ್ ಕುಮಾರ್ ಅವರನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ಕರೆಯೊಯ್ದು ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬನ್ನೂರು ಗ್ರಾಮದ ಕರ್ಮಲ ಬಲಮುರಿ ಗಣಪತಿ ದೇವಸ್ಥಾನದ ಬಳಿಯ ರಸ್ತೆ ತಿರುವು ಅಪಾಯಕಾರಿಯಾಗಿದ್ದು, ಕಿಶನ್ ಕುಮಾರ್ ಅವರು ಈ ಭಾಗದಲ್ಲಿ ಅಫಘಾತಕ್ಕೀಡಾಗಿ ಮೃತಪಟ್ಟಿರುವ 5ನೇ ವ್ಯಕ್ತಿಯಾಗಿದ್ದಾರೆ. ಇಲ್ಲಿ ಕಳೆದ ಕೆಲ ಸಮಯದಿಂದ ಪದೇ ಪದೇ ಅಫಘಾತಗಳು ನಡೆಯುತ್ತಿದ್ದು, ರಸ್ತೆ ದಿಣ್ಣೆಗಳನ್ನು ನಿರ್ಮಿಸಬೇಕೆಂಬ ಈ ಭಾಗದ ಜನತೆಯ ಬೇಡಿಕೆಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.
ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ಕುಂದಾಪುರ: ಇಲ್ಲಿನ ಕುರ್ಪಾಡಿಯಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಡ ಘಟನೆ ಶನಿವಾರ ನಡೆದಿದೆ. ಸುರೇಂದ್ರ ಶೇರೆಗಾರ್ ಮೃತರು. ಅವರು ಸುಮಾರು 5 ವರ್ಷಗಳಿಂದ ಮದ್ಯಪಾನ ಚಟ ಹೊಂದಿದ್ದು, ಈ ಬಗ್ಗೆ ಉಡುಪಿ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಅಮಲು ಪದಾರ್ಥ ಸೇವಿಸುವುದನ್ನು ಬಿಡದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ಮನೆಯ ಕೋಣೆಯಲ್ಲಿ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಮೃತರ ಸಹೋದರ ಸುಧಾಕರ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಿಜೆಪಿ ಮುಖಂಡ ಕೊಲೆ ಯತ್ನ ಆರೋಪಿ ವಿಮಾನ ನಿಲ್ದಾಣದಲ್ಲಿ ಸೆರೆ
ಮಂಗಳೂರು: 3 ಕೊಲೆ ಯತ್ನ ಸಹಿತ 6 ಪ್ರಕರಣಗಳ ಆರೋಪಿ ಕಾಸರಗೋಡಿನ ಜೈನುಲ್ ಅಬಿದ್ ಯಾನೆ ಅಬಿ (22) ಎಂಬಾತನನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಾನುವಾರ ಬಂಧಿಸಲಾಯಿತು.
ಆರೋಪಿ ಅಬಿದ್ ಬಿಜೆಪಿ ಮುಖಂಡ ಜ್ಯೋತಿಶ್ ಎಂಬವರ ಕೊಲೆಗೆ ಯತ್ನಿಸಿ, ತಲೆ ಮರೆಸಿಕೊಂಡಿದ್ದ. ಕೊಲ್ಲಿ ರಾಷ್ಟ್ರಕ್ಕೆ ಪಲಾಯನಕ್ಕೆ ಸಿದ್ಧತೆ ನಡೆಸುತ್ತಿದ್ದ ಬಗ್ಗೆ ಕಾಸರಗೋಡು ಪೊಲೀಸರಿಗೆ ಮಾಹಿತಿ ಬಂದಿದ್ದು, ಇಮಿಗ್ರೇಶನ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಲಾರಿ ಡಿಕ್ಕಿ: ಪಾದಚಾರಿ ಸಾವು
ಮಂಗಳೂರು: ಪಂಪ್ವೆಲ್ ಬಳಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದು ಒಳಚ್ಚಿಲ್ ಅರ್ಕುಳ ನಿವಾಸಿ ದಾಮೋದರ ನಾಯಕ್ (38)ಮೃತಪಟ್ಟಿದ್ದಾರೆ. ಶನಿವಾರ ಬೆಳಗ್ಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆಯಿತು. ಗಂಭೀರ ಗಾಯಗೊಂಡಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮಧ್ಯಾಹ್ನ 3 ಗಂಟೆಗೆ ಮೃತಪಟ್ಟರು. ತಮ್ಮ ಪುರುಷೋತ್ತಮ ನಾಯಕ್ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.
ವ್ಯಕ್ತಿ ಮೃತದೇಹ ಪತ್ತೆ
ಮೂಲ್ಕಿ: ಇಲ್ಲಿನ ಮೂರುಕಾವೇರಿ ಎಂಬಲ್ಲಿ ಮನೆಯೊಂದರ ಗೇಟ್ನಲ್ಲಿ ಸಿಲುಕಿಕೊಂಡ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಭಾನುವಾರ ಬೆಳಗ್ಗೆ ಪತ್ತೆಯಾಗಿದೆ. ಮೃತರನ್ನು ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯ ಕಮ್ಮಜೆ ನಿವಾಸಿ ವಾಸುದೇವ ಕುಲಾಲ್ (58) ಎಂದು ಗುರುತಿಸಲಾಗಿದೆ. ವಿಪರೀತ ಅಮಲು ಪದಾರ್ಥ ಸೇವನೆ ಚಟ ಹೊಂದಿದ್ದ ಅವರು, ಶನಿವಾರ ಸಂಜೆ ಅಮಲು ಪದಾರ್ಥ ಸೇವಿಸಿ ಮನೆಗೆ ಬಂದು ಗಲಾಟೆ ಮಾಡಿದ್ದರು. ಬಳಿಕ ಕಿನ್ನಿಗೋಳಿ ಬಸ್ಸು ನಿಲ್ದಾಣದಲ್ಲಿ ಮತ್ತೆ ಅಮಲು ಪದಾರ್ಥ ಸೇವಿಸಿ ಗಲಾಟೆ ಮಾಡುತ್ತಿದ್ದರು, ನಂತರ ರಿಕ್ಷಾದಲ್ಲಿ ಮನೆ ಕಡೆ ಹೊರಟು ದಾರಿ ಮಧ್ಯೆ ಮೂರುಕಾವೇರಿಯಲ್ಲಿ ಇಳಿದಿದ್ದರು ಎನ್ನಲಾಗಿದೆ. ಆದರೆ, ಭಾನುವಾರ ಅವರ ಮೃತದೇಹ ಮೂರುಕಾವೇರಿಯ ಎಮಿಲ್ದಾ ಎಂಬವರ ಮನೆಯ ಗೇಟ್ನಲ್ಲಿ ಸಿಲುಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಗೆ ಎಮಿಲ್ದಾ ದೂರು ನೀಡಿದ್ದು, ಶವವನ್ನು ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಜರು ನಡೆಸಿ ವಾರಸುದಾರರಿಗೆ ನೀಡಲಾಗಿದೆ. ಶನಿವಾರ ರಾತ್ರಿ ಕಿನ್ನಿಗೋಳಿಯಲ್ಲಿ ಇಳಿದ ವಾಸುದೇವ, ಮಲಗಲು ಎಮಿಲ್ದಾ ಅವರ ಗೇಟ್ನ ಮೇಲೆ ಹಾರಿ ಒಳಗೆ ಹೋಗುವ ಸಂದರ್ಭ ಗೇಟ್ನ ಮೇಲೆ ಇರುವ ಚೂಪಾದ ಕಬ್ಬಿಣದ ಮುಳ್ಳಿಗೆ ಸಿಕ್ಕಿಕೊಂಡು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಗೇಟ್ನಲ್ಲಿ ರಕ್ತದ ಕಲೆಗಳು ಕಂಡುಬಂದಿವೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.