'ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಾಬಿ ಮಾಡಿಲ್ಲ'
ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಾನು ಯಾವುದೇ ಲಾಬಿ ಅಥವಾ ಬ್ಲಾಕ್ಮೇಲ್ ಮಾಡಿಲ್ಲ. ಒಂದು ವೇಳೆ ಪಕ್ಷ ನನಗೆ ಜವಾಬ್ದಾರಿ ನೀಡಿದರೆ ಸಮರ್ಥವಾಗಿ ನಿರ್ವಹಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಪುನರುಚ್ಚರಿಸಿದ್ದಾರೆ.
ಭಾನುವಾರ ಮಂಗಳೂರಿನಲ್ಲಿ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಗಿರುವ ಸೋಲು ಒಪ್ಪಿಕೊಂಡಿದ್ದೇವೆ. ಇದನು ಜೀರ್ಣಿಸಿಕೊಂಡು ಮುಂದಿನ ವಿಧಾನಸಭಾ ಚುನಾವಣೆಗೆ ಸಿದ್ಧರಾಗುತ್ತಿದ್ದೇವೆ. ಇದು ಪರೀಕ್ಷೆಯ ಕಾಲ, ಇದನು ಸವಾಲಾಗಿ ಸ್ವೀಕರಿಸುತ್ತೇವೆ ಎಂದರು.
ರಾಜ್ಯವ್ಯಾಪಿ ಬೃಹತ್ ರ್ಯಾಲಿ: ಚುನಾವಣೆಗೆ ಎಲ್ಲ ನಾಯಕರು ಅಹಂ ಬಿಟ್ಟು ಕೆಲಸ ಮಾಡಬೇಕು. ಕಳೆದ ಸೋಲಿನ ಬಗ್ಗೆ ಯಾರ ವಿರುದ್ಧವೂ ದೋಷಾರೋಪಣೆ ಬೇಡ ಎಂದ ಅವರು, ಮಾ.23ರಿಂದ 31ರ ವರೆಗೆ ರಾಜ್ಯಾವ್ಯಾಪಿ ಬೃಹತ್ ರ್ಯಾಲಿಗಳ ಮೂಲಕ ಪಕ್ಷ ಸಂಘಟನೆ ಮಾಡುತ್ತೇವೆ. ಬಳಿಕ ವಿಧಾನಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.