ಸುದ್ದಿ ಸಂಕ್ಷೇಪ
ಇಂದಿನಿಂದ ತುಳು ಸಿನಿಮೋತ್ಸವ
ಮೂಲ್ಕಿ: ಕಿನ್ನಿಗೋಳಿಯ ರೋಟರಿ ಕ್ಲಬ್, ಯುಗಪುರುಷ, ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಮತ್ತು ಮೂಲ್ಕಿಯ ಯುವವಾಹಿನಿ ಆಶ್ರಯದಲ್ಲಿ ಕಿನ್ನಿಗೋಳಿಯ ಯುಗಪುರುಷದ ಸಭಾಭವನದಲ್ಲಿ 18ರಿಂದ 24ರವರೆಗೆ ಪ್ರತಿದಿನ ಸಂಜೆ 6ರಿಂದ 8.30ರವರೆಗೆ ತುಳು ಸಿನಿಮೋತ್ಸವ ಕಾರ್ಯಕ್ರಮ ಜರಗಲಿದೆ. ಸೋಮವಾರ ಸಂಜೆ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಕಟೀಲಿನ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಉದ್ಘಾಟಿಸಲಿದ್ದು, 18ರಂದು ಬದಿ, 19ರಂದು ಒಂತೆ ಅಡ್ಜೆಸ್ಟ್ ಮಲ್ಪಿ, 20ರಂದು ಬಂಗಾರ್ ಪಟ್ಲೇರ್, 21ರಂದು ಬಿರ್ಸೆ, 22ರಂದು ಗಗ್ಗರ, 23ರಂದು ಮಾರಿಬಲೆ ಹಾಗೂ 24ರ ಸಂಜೆ ಸಮಾರೋಪ ಸಮಾರಂಭ ಜರಗಲಿದೆ. ಬಳಿಕ ಕೋಟಿ ಚೆನ್ನಯ್ಯ ತಸಿನಿಮಾ ಪ್ರದರ್ಶಿಸಲ್ಪಡಲಿದೆ.
ಇಂದು ಕೆಡಿಪಿ ಸಭೆ
ಮಂಗಳೂರು: 2012-13ನೇ ಸಾಲಿನ ತ್ರೈಮಾಸಿಕ ಕೆಡಿಪಿ ಸಭೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅಧ್ಯಕ್ಷತೆಯಲ್ಲಿ ಸೋಮವಾರ ಮಧ್ಯಾಹ್ನ 2.30ಕ್ಕೆ ಜಿಲ್ಲಾ ಪಂಚಾಯ್ತಿಯ ನೇತ್ರಾವತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿಜಯ ಪ್ರಕಾಶ್ ತಿಳಿಸಿದ್ದಾರೆ.
ಇಂದು ಪ್ರಶ್ನೆ ಚಿಂತನ
ಬೆಳ್ತಂಗಡಿ: ನಾಳ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಮುಂದಿನ ವರ್ಷ ನಡೆಯಲಿರುವ ಬ್ರಹ್ಮಕಲಶೋತ್ಸವ ಹಾಗೂ ಅದಕ್ಕೆ ಪುರಕವಾಗಿ ರಾಜಗೋಪುರ ನಿರ್ಮಾಣ ಇನ್ನಿತರ ಅಭಿವೃದ್ಧಿ ಕಾರ್ಯಗಳು ನಡೆಯಲಿರುವ ಹಿನ್ನಲೆಯಲ್ಲಿ ಪ್ರಶ್ನೆ ಚಿಂತನ ಕಾರ್ಯಕ್ರಮ ಸೋಮವಾರ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ಮಜಲು ತಿಳಿಸಿದ್ದಾರೆ.
ಇಂದು ತಪಾಸಣಾ ಶಿಬಿರ
ಮೂಲ್ಕಿ: ತೋಕೂರಿನ ತಪೋವನದ ಎಂ.ಆರ್. ಪೂಂಜ ಐಟಿಐನ ಎನ್ಎಸ್ಎಸ್ ಮತ್ತು ರೋವರ್ಸ್ ಘಟಕದ ಆಶ್ರಯದಲ್ಲಿ ಮಂಗಳೂರಿನ ಕೆ.ಎಸ್. ಹೆಗ್ಡೆ ಸ್ಮಾರಕ ವೈದ್ಯಕೀಯ ಕಾಲೇಜಿನ ಸಹಯೋಗದೊಂದಿಗೆ ಸೋಮವಾರ ಬೆಳಗ್ಗೆ ಐಟಿಐನ ಸೆಮಿನಾರ್ ಹಾಲ್ನಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಜರಗಲಿದೆ. ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಭಾಸ್ಕರ ಕೋಟ್ಯಾನ್ ಉದ್ಘಾಟಿಸುವರು.
ಇಂದಿನಿಂದ ಉರೂಸ್
ಪುತ್ತೂರು: ಸುಮಾರು 400 ವರ್ಷಗಳ ಇತಿಹಾಸವಿರುವ ಪುತ್ತೂರು ತಾಲೂಕಿನ ಇರ್ದೆ ಪಳ್ಳಿತ್ತಡ್ಕ ದರ್ಗಾ ಶರೀಫ್ನ 37ನೇ ಉರೂಸ್ ಸಮಾರಂಭ ಹಾಗೂ 7 ದಿವಸಗಳ ಧಾರ್ಮಿಕ ಮತ ಪ್ರಭಾಷಣ ಸೋಮವಾರದಿಂದ 24ರ ತನಕ ನಡೆಯಲಿದೆ ಎಂದು ಉರೂಸ್ ಕಮಿಟಿಯ ಅಧ್ಯಕ್ಷ ಫಾರೂಕ್ ತಿಳಿಸಿದ್ದಾರೆ. ಅಸ್ಸಯ್ಯದ್ ಹಾಶಿಂ ತಂಙಳ್ ಬಾಅಲವಿ ಬಾಖವಿ ಮಲಪುರಂ, ಕೊರಿಂಗಿಲ ಉದ್ಘಾಟಿಸಲಿದ್ದು, ಕೊರಿಂಗಿಲ ಜಮಾಅತ್ ಅಧ್ಯಕ್ಷ ಮಹಮ್ಮದ್ ಕುಂಞ ಕೊರಿಂಗಿಲ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಳೆ ಕರೆಂಟ್ ಇಲ್ಲ
ಮಂಗಳೂರು: 33 ಕೆವಿ. ಪಣಂಬೂರು ಲೇನ್ ನಲ್ಲಿ ಮಂಗಳವಾರ ನಿರ್ವಹಣೆ ಕಾಮಗಾರಿ ಇರುವುದರಿಂದ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಅಗಲಿದೆ. ಪ್ರದೇಶಗಳು: ಬೆಂಗ್ರೆ, ತೋಟಬೆಂಗ್ರೆ, ತಣ್ಣೀರುಬಾವಿ, ಕಸಬ ಬೇಂಗ್ರೆ, ಕೋಡಿಕಲ್, ಕೂಳೂರು, ಬಂಗ್ರಕೂಳೂರು, ಕೊಟ್ಟಾರ, ಕುಂಟಿಕಾನ, ಭಾರತಿ ಶಿಪ್ಯಾರ್ಡ್ ಸುತ್ತಮುತ್ತಲ ಪ್ರದೇಶ.
ಉಚಿತ ಧರ್ಮೊಪನಯನ
ಮಂಗಳೂರು: ಕದ್ರಿ ಶ್ರೀ ಕೃಷ್ಣ ಧರ್ಮೊಪಯನ ಸಮಿತಿ ವತಿಯಿಂದ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅರ್ಶೀವಾದದಲ್ಲಿ ದ್ರಾವಿಡ ಬ್ರಾಹ್ಮಣ ವಟುಗಳಿಗೆ ಉಚಿತ ಸಾಮೂಹಿಕ ಧರ್ಮೊಪನಯನ ನಡೆಯಲಿದೆ. ಆಸಕ್ತರು ಸಮಿತಿ ಸಂಘಟನಾ ಕಾರ್ಯದರ್ಶಿ ಸುಧಾಕರ ರಾವ್ ಪೇಜಾವರರನ್ನು 9448546051 ಸಂಪರ್ಕಿಸಬಹುದು.
ಸಮ್ಮತಿ ಸೆಕ್ಸ್ ವಯಸ್ಸು ಇಳಿಕೆ: ಆಕ್ಷೇಪ
ಮಂಗಳೂರು: ಸಮ್ಮತಿ ಸೆಕ್ಸ್ ವಯಸ್ಸು 18ರಿಂದ 16ಕ್ಕೆ ಇಳಿಸಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಜಮಾತೆ ಇಸ್ಲಾಮಿ ಹಿಂದ್ ಅಸಮ್ಮತಿ ವ್ಯಕ್ತಪಡಿಸಿದೆ. ವಿವಾಹೇತರ ಅಥವಾ ಸಮ್ಮತಿ ಸೆಕ್ಸ್ ಎರಡನ್ನೂ ವಿಚಾರಣಾಧೀನ ಅಪರಾಧ ಎಂದು ಪರಿಗಣಿಸಬೇಕು ಎಂದು ಪ್ರಧಾನ ಕಾರ್ಯದರ್ಶಿ ನುಸ್ರತ್ ಅಲಿ ಆಗ್ರಹಿಸಿದ್ದಾರೆ.