ಕಾರ್ಪೊರೇಟರ್ಗಳ ಕಟೌಟ್ ಕಿಕೌಟ್!
ಮಂಗಳೂರು: ಮಹಾನಗರ ಪಾಲಿಕೆ ಅನುಮತಿ ಇಲ್ಲದೆ ನಗರದೆಲ್ಲೆಡೆ ಹಾಕಿರುವ ಕಾರ್ಪೊರೇಟರ್ಗಳ ಜಾಹೀರಾತು ಪ್ಲೆಕ್ಸ್ಗಳನ್ನು ಅಧಿಕಾರಿಗಳು ಗುರುವಾರ ತೆರವು ಮಾಡಿದ್ದಾರೆ.
ಕಾಂಗ್ರೆಸ್ ಕಾರ್ಪೊರೇಟರ್ಗಳು ಹೆಚ್ಚಿನ ಸಂಖ್ಯೆಯಲ್ಲಿ ಕಟೌಟ್, ಪ್ಲೆಕ್ಸ್ ಗಳನ್ನು ಬಳಸಿದ್ದಾರೆ.
ಪಾಲಿಕೆ ಅನುಮತಿ ಇಲ್ಲದೆ ಎಲ್ಲೂ ಜಾಹೀರಾತು ಕಮಾನು, ಫಲಕ ಹಾಕುವಂತಿಲ್ಲ. ಆದರೆ ಗೆದ್ದ ಭರದಲ್ಲಿ ಕಾರ್ಪೊರೇಟರ್ಗಳು ಮಹಾನಗರ ಪಾಲಿಕೆಯ ನಿಯಮವನ್ನೇ ಉಲ್ಲಂಘಿಸಿದ್ದಾರೆ.
ಚುನಾವಣೆ ಸಂದರ್ಭ ನೀತಿ ಸಂಹಿತೆ ಕಾರಣಕ್ಕೆ ಅನರ್ಹರಾಗಬಹುದು ಭೀತಿಯಿಂದ ಕಟೌಟ್ ಹಾಕದೆ ಕಾನೂನು ಪಾಲನೆ ಮಾಡಿದರು. ಗೆದ್ದ ಬಳಿಕ ಮರೆತು ಕಟೌಟ್ ಹಾಕತೊಡಗಿದ್ದಾರೆ.
'ಕಟೌಟ್ ಹಾಕಲು ಪಾಲಿಕೆ ಕಾನೂನಿನಲ್ಲಿ ಅವಕಾಶ ಇಲ್ಲ. 15ಕ್ಕೂ ಹೆಚ್ಚು ಅಭಿನಂದನೆ ಕಟೌಟ್ಗಳನ್ನು ಕಿತ್ತು ತೆಗೆಯಲಾಗಿದೆ. ಕಾರ್ಯಾಚರಣೆ ಮುಂದುವರಿಯಲಿದೆ' ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.
'ನಗರದಲ್ಲಿ ಪಾಲಿಕೆ ನಿಯಮ ಉಲ್ಲಂಘನೆ ಪ್ರಕರಣ ಕಂಡು ಬಂದರೆ ಆಯಾ ವ್ಯಾಪ್ತಿಯ ಕಂದಾಯ ನಿರೀಕ್ಷಕರ ಹೊಣೆ ಮಾಡಲಾಗುವುದು. ಅನುಮತಿ ಪಡೆದಿದ್ದರೂ ಪ್ಲೆಕ್ಸ್ ತೆಗೆಯಲಾಗಿದೆ ಎಂಬ ಬಗ್ಗೆ ಯಾರೂ ದೂರು ನೀಡಿಲ್ಲ, ದೂರು ನೀಡಿದರೆ ಕ್ರಮ ತೆಗೆದುಕೊಳ್ಳಲಾಗುವುದು.
ಕಾರ್ಯಕ್ರಮ ನಡೆಯುವ ದಿನ ಪ್ಲೆಕ್ಸ್ಗೆ ಅವಕಾಶ ನೀಡಿದ್ದು ಬಿಟ್ಟರೆ ಮುಖ್ಯಮಂತ್ರಿ ಆಗಮನ ಸಂದರ್ಭದಲ್ಲಿಯೇ ಕಟೌಟ್ ಹಾಕಲು ಬಿಟ್ಟಿಲ್ಲ ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್ ತಿಳಿಸಿದ್ದಾರೆ.