ರಸ್ತೆ ಚೆನ್ನಾಗಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ...
ವಿಟ್ಲ: ಕಲ್ಲಡ್ಕ- ಕಾಂಞಂಗಾಡು ರಸ್ತೆಗೆ ಅತ್ಯುತ್ತಮ ಮಟ್ಟದ ಡಾಂಬರೀಕರಣವೇನೋ ಆಗಿದೆ. ಇದರಿಂದ ಜನರು ರಸ್ತೆಯಲ್ಲಿ ಸುವ್ಯವಸ್ಥಿತವಾಗಿ ಚಲಿಸುವ ಹಿತ ಅನುಭವವನ್ನು ಕೂಡಾ ಪಡೆಯುತ್ತಿದ್ದಾರೆ. ಆದರೆ, ಕಾಮಗಾರಿ ಮಾತ್ರ ಇನ್ನೂ ಪೂರ್ತಿಗೊಂಡಿಲ್ಲ. ಮೋರಿ ಮತ್ತು ಚರಂಡಿಗಳ ಕೆಲಸ ಹಾಗೇ ಉಳಿದಿದೆ.
ಮುಖ್ಯವಾಗಿ ಚರಂಡಿಗಳು ಇನ್ನೂ ಸಮರ್ಪಕವಾಗಿ ದುರಸ್ತಿಯಾಗಿಲ್ಲ. ಕೆಲವು ದಿನಗಳ ಹಿಂದೆ ಬಂದ ಮಳೆರಾಯ ರಸ್ತೆಯ ಮಧ್ಯದಲ್ಲೇ ಸಂಚಾರ ಮಾಡುತ್ತಿದ್ದದ್ದು ಕಂಡು ಬಂದಿತ್ತು. ಇದೇ ರೀತಿ ಮುಂದುವರೆದರೆ ರಸ್ತೆಯಲ್ಲಿ ಹೊಂಡಗಳು ಬಿದ್ದು ಮತ್ತೆ ರಸ್ತೆಗಳು ಹಾಳಾಗುವುದರಲ್ಲಿ ಸಂಶಯವಿಲ್ಲ. ಹಲವು ಕಡೆ ಮೋರಿಗಳೇ ಬ್ಲಾಕ್ ಆಗಿ ಕಸಕಡ್ಡಿಗಳು, ಪ್ಲಾಸ್ಟಿಕ್ಗಳು ರಸ್ತೆ ಮೇಲೆ ಬಂದು ಬಿದ್ದಿದ್ದವು.
ವಿಟ್ಲದ ಮಂಗಿಲಪದವಿನಿಂದ ಹಿಡಿದು ಸಾರಡ್ಕ ತನಕ 7 ಮೋರಿಗಳ ಕಟ್ಟೆಯನ್ನು ಒಡೆದು ಹಾಕಲಾಗಿದೆ. ಆದರೆ, ರಸ್ತೆಯ ಕಾಮಗಾರಿ ಆದ ತರುವಾಯ ಅದರ ಕಡೆ ಗಮನವನ್ನು ಕೊಡಲೇ ಇಲ್ಲ. ಇಂದಿಗೂ ಬೊಬ್ಬೆಕೇರಿ ಕಟ್ಟೆ ಬಳಿ, ಕಬ್ಬಿನ ಹಿತ್ಲು, ಉಕ್ಕುಡ-ದರ್ಬೆಯಲ್ಲಿ ಮೋರಿಯ ಅಗಲ ಕಿರಿದಾಗಿದ್ದು, ವಾಹನ ಸಂಚಾರಕ್ಕೆ ಕಷ್ಟಕರವಾಗುತ್ತಿದೆ. ಇದರಿಂದ ಮುಂದೊಂದು ದಿನ ಯಾವುದಾದರೂ ವಾಹನಗಳು ಮೋರಿಯ ಹೊಂಡಕ್ಕೆ ಬಿದ್ದರೆ ಯಾರು ಹೊಣೆಯಾಗುತ್ತಾರೆ...?
ತಡೆಗೋಡೆ ನಿರ್ಮಾಣಕ್ಕೆ ಆದೇಶ: ಈ ರಸ್ತೆಗೆ ರು. 6 ಕೋಟಿಗೂ ಅಧಿಕ ಅನುದಾನ ಮಂಜೂರಾಗಿದೆ. ಮಂಗಿಲಪದವು ಸಾರಡ್ಕ ರಸ್ತೆಯ ಹಲವು ಮೋರಿಗಳು ಇನ್ನೂ ಕಿರಿದಾಗಿ ಇರುವುದನ್ನು ಗಮನಿಸಿದ ಇಲಾಖೆ ಪ್ರತ್ಯೇಕ ಟೆಂಡರ್ ಮಾಡಿ ವಾಹನಗಳ ಡಿಕ್ಕಿಯಿಂದ ಕೆಳಗೆ ಬಿದ್ದ ಮೋರಿಗಳ ತಡೆಗೋಡೆ ನಿರ್ಮಾಣಕ್ಕೆ 2012ರಲ್ಲಿ ಯೋಜನೆ ರೂಪಿಸಿತ್ತು. ಮೋರಿ ನಿರ್ಮಾಣಕ್ಕೆ ಗುತ್ತಿಗೆದಾರನಿಗೆ ಆದೇಶವನ್ನು ನೀಡಿತ್ತು.
ಮಳೆ ಸರಿಯಾಗಿ ಸುರಿಯಲು ಇನ್ನೂ ಹತ್ತಿರ ಹತ್ತಿರ 2 ತಿಂಗಳು ಬಾಕಿ ಉಳಿದಿದೆ. ಈ ಸಮಯದಲ್ಲಾದರೂ ಇಲಾಖೆ ಸೂಕ್ತ ಅನುದಾನವನ್ನು ಉಪಯೋಗಿಸಿ ಅದರ ಸದ್ವಿನಿಯೋಗ ಮಾಡುವುದರ ಮೂಲಕ ರಸ್ತೆಯ ಎರಡೂ ಬದಿಗಳಲ್ಲಿರುವ ಚರಂಡಿಯನ್ನು ದುರಸ್ತಿ ಮಾಡಿ, ನೀರು ಸುಗಮವಾಗಿ ಸಾಗುವಂತೆ ಮಾಡಬೇಕಾಗಿದೆ.
ಇದರಿಂದ ಪರಿಸರ ಮಾಲಿನ್ಯವನ್ನು ನಿಯಂತ್ರಿಸಿ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಿದ ಹೆಗ್ಗಳಿಕೆ ಇಲಾಖೆ ಪಾತ್ರವಾಗಬಹುದು. ಜೊತೆಗೆ ಸೂಕ್ತ ಸಮಯದಲ್ಲಿ ನಡೆಯದ ಕಾಮಗಾರಿಯಿಂದ ಜನೋಪಯೋಗಿ ಕಾರ್ಯಗಳು ನಡೆಯುತ್ತಿಲ್ಲ ಎನ್ನುವ ಜನರ ಅಪವಾದದಿಂದ ಇಲಾಖೆ ಮುಕ್ತವಾಗಬಹುದು.