ಅಂಗೈಯಲ್ಲಿ ಕರಾವಳಿ ತೀರದ ಸಮಗ್ರ ಮಾಹಿತಿ
ಆತ್ಮಭೂಷಣ್
ಮಂಗಳೂರು: ಸಮುದ್ರ ತಟದಲ್ಲಿ ಕನಸಿನ ಮನೆ ನಿರ್ಮಿಸಿ ವಿಹರಿಸಲು ನೂರೆಂಟು ತಾಪತ್ರಯ ಇನ್ನು ಬಾರದು. ತಮಗೆ ಬೇಕೆಂದಲ್ಲಿ ಮನೆ ನಿರ್ಮಿಸಲು ಕುಳಿತಲ್ಲೇ ವೆಬ್‌ಸೈಟ್ ನೋಡಿದರೆ ಸಾಕು. ಎಲ್ಲೆಲ್ಲಿ ಸಿಆರ್‌ಝಡ್(ಕರಾವಳಿ ನಿಯಂತ್ರಣ ವಲಯ)ವರ್ಗೀಕರಣ ಇದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಬಳಿಕ ಮನೆ ನಿರ್ಮಾಣಕ್ಕೆ ನಿರಕ್ಷೇಪಣಾ ಪತ್ರಕ್ಕೆ ಅರ್ಜಿ ಸಲ್ಲಿದರೆ ಮುಗಿಯಿತು.
ರಾಜ್ಯದ ಕರಾವಳಿ ವ್ಯಾಪ್ತಿ 300 ಕಿ.ಮೀ. ಉಳ್ಳಾಲದಿಂದ ಕಾರವಾರ ವರೆಗೆ ಹಬ್ಬಿಕೊಂಡಿದೆ. ಕರಾವಳಿ ತಟದಲ್ಲಿ ಯಾವುದೇ ಶಾಶ್ವತ ರಚನೆಗೆ ಸಿಆರ್‌ಝಡ್ ಅನುಮತಿ ಬೇಕೇ ಬೇಕು. ಕರಾವಳಿ ತೀರದಲ್ಲಿ ವಾಸಿಸುವ ಕುಟುಂಬಗಳ ನಿರ್ದಿಷ್ಟ ಮಾಹಿತಿ ರಾಜ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯಲ್ಲಿ ಇಲ್ಲ. ಕರಾವಳಿ ಭದ್ರತೆ ದೃಷ್ಟಿಯಿಂದ ಪೊಲೀಸ್ ಇಲಾಖೆ ತೀರ ನಿವಾಸಿಗಳ ಮಾಹಿತಿಯನ್ನಷ್ಟೇ ಪಡೆದುಕೊಂಡಿತ್ತು. ಆದರೆ ಸಮಗ್ರ ವಿವರ ಅವರಲ್ಲೂ ಇಲ್ಲ.
ಡಿಜಿಟಲ್ ಲೈಬ್ರರಿಗೆ ಆದೇಶ ಬಾಕಿ: ಕರಾವಳಿ ಪ್ರದೇಶದಲ್ಲಿ ವಾಸಿಸುವ ಎಲ್ಲ ಕುಟುಂಬಗಳ ಸಮಗ್ರ ಮಾಹಿತಿಯನ್ನು ಇಲಾಖೆ ಡಿಜಿಟಲೀಕರಣಗೊಳಿಸಲಿದೆ. ಪ್ರತಿ ಮನೆಗಳಿಗೆ ತೆರಳಿ ವಿವರವಾದ ಮಾಹಿತಿ ಸಂಗ್ರಹಿಸಲಿದ್ದು, ಅವನ್ನು ಡಿಜಿಟಲ್ ಲೈಬ್ರರಿ ಮಾದರಿಯಲ್ಲಿ ಸಂಗ್ರಹಿಸಲಿದೆ. ಇದರಿಂದ ಒಂದೇ ಕಡೆ ಬೇಕಾದಾಗ ಮಾಹಿತಿಯನ್ನು ಪಡೆಯಲು ಸಾಧ್ಯ. ಇದನ್ನು ಕಾಲಕಾಲಕ್ಕೆ ಅಪ್‌ಡೇಟ್ ಕೂಡ ಮಾಡಲಿದೆ.
ಈ ಕುರಿತ ಪ್ರಸ್ತಾವನೆಯನ್ನು ಇಲಾಖೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ಎರಡು ತಿಂಗಳು ಕಳೆದಿದೆ. ಸರ್ಕಾರದಿಂದ ಅನುಮೋದನೆ ಬಾಕಿ ಇದೆ. ಸರ್ಕಾರ ಒಪ್ಪಿಗೆ ನೀಡಿದಾಕ್ಷಣ ಕರಾವಳಿ ತೀರ ಕುಟುಂಬಗಳ ಸರ್ವೇ ಕಾರ್ಯ ನಡೆಯಲಿದೆ.
ಕಡಲ ತಡಿಯ ಮ್ಯಾಪ್ ಸಿದ್ಧ: ಸಿಆರ್‌ಝಡ್ ಕಾನೂನು ಬಂದದ್ದು 1991ರಲ್ಲಿ. 2011ರಲ್ಲಿ ಕಾನೂನು ಬದಲಾವಣೆಗೊಂಡಿತು. ಆಗ ಕೆಲವು ಕಡೆ ನದಿ ಕಿನಾರೆಯಲ್ಲಿ ವಸತಿ ಪ್ರದೇಶ ನಿರ್ಬಂಧ 150 ಮೀಟರ್ ಇದ್ದುದನ್ನು 100 ಮೀಟರ್‌ಗೆ ಇಳಿಸಲಾಗಿತ್ತು. ಹಾಗಾಗಿ ಕಡಲ ತಡಿಯ ಹೊಸ ಮ್ಯಾಪ್ ರಚನೆಯನ್ನು 2012ರಲ್ಲಿ ಡೆಹರಡೂನ್‌ನ ರಾಷ್ಟ್ರೀಯ ಹೈಡ್ರೋಗ್ರಾಫಿಕ್ ಆಫೀಸ್(ಎನ್‌ಎಚ್‌ಒ)2 ಕೋಟಿ ವೆಚ್ಚದಲ್ಲಿ ಸಿದ್ಧಪಡಿಸಿತ್ತು. ಈ ಮ್ಯಾಪ್ ಫೆ.25ರಂದು ಇಲಾಖೆಗೆ ರವಾನೆಯಾಗಿದ್ದು, ಸಿಆರ್‌ಝಡ್‌ನಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಇದಕ್ಕೆ ಏ.4ರೊಳಗೆ ಸಾರ್ವಜನಿಕರ ಆಕ್ಷೇಪಣೆ ಆಹ್ವಾನಿಸಲಾಗಿದೆ.
ನಿಯಮ ಹೇಳುವುದು ಏನು?: ಸಿಆರ್‌ಝಡ್-1 ಪರಿಸರ ಸೂಕ್ಷ್ಮ ಪ್ರದೇಶ. ಸಮುದ್ರ ದಡದಿಂದ 500 ಮೀಟರ್ ವರೆಗೆ ಯಾವುದೇ ರಚನೆ ನಿರ್ಮಿಸುವಂತಿಲ್ಲ. ಕಡಲ್ಕೊರೆತ ಮುಂತಾದವುಗಳು ಈ ವ್ಯಾಪ್ತಿಗೆ ಒಳಪಡುತ್ತದೆ.
ಸಿಆರ್‌ಝಡ್-2 ಇದು ನಗರ ಪಾಲಿಕೆ ವ್ಯಾಪ್ತಿಗೆ ಬರುತ್ತದೆ. ಹಳೆ ರಚನೆ ನವೀಕರಿಸಬಹುದು. ಹೊಸದಾಗಿ ನಿರ್ಮಾಣಕ್ಕೂ ಅವಕಾಶವಿದೆ. ಇದು ವಾಸಕ್ಕೆ ಸುರಕ್ಷಿತ ಜಾಗ.
ಸಿಆರ್‌ಝಡ್-3 200ರಿಂದ 500 ಮೀಟರ್ ವರೆಗೆ ಕಟ್ಟಡ ನಿರ್ಮಿಸಬಹುದು. ಗ್ರಾಮ ಪ್ರದೇಶ ಒಳಗೊಳ್ಳುತ್ತದೆ.
ಸಿಆರ್‌ಝಡ್-4 ನದಿ ಮತ್ತು ಸಮುದ್ರ ಸಂಧಿಸುವ ಪ್ರದೇಶ. ಇಲ್ಲಿ ಯಾವುದೇ ನಿರ್ಮಾಣಕ್ಕೆ ಅವಕಾಶವಿಲ್ಲ.
ಉಡುಪಿ ಮತ್ತು ಕುಂದಾಪುರದಲ್ಲಿ 60 ಗ್ರಾಮಗಳಿಗೆ ಕಾಂಪ್ರಹೆನ್ಸಿವ್ ಯೋಜನೆಯಡಿ ಸಿಆರ್‌ಝಡ್-3ರಲ್ಲಿ ಹಾಲಿ ಜೀವಿಸುವವರಿಗೆ ಇನ್ನೊಂದು ಮನೆ ನಿರ್ಮಿಸಲು ಸರ್ಕಾರ ಅನುಮತಿ ನೀಡಿದೆ. ಅದೇ ರೀತಿ ಸೋಮೇಶ್ವರದಲ್ಲೂ 600 ಮನೆ ನಿರ್ಮಾಣಕ್ಕೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎನ್ನುತ್ತಾರೆ ಸಿಆರ್‌ಝಡ್ ಅಧಿಕಾರಿ ಮಹೇಶ್.