ಕರ ಪಾವತಿಸದ ಮರಳು ವಾಹನ ಪೊಲೀಸ್ ವಶಕ್ಕೆ
ಉಪ್ಪಿನಂಗಡಿ: ಕೊಕ್ಕಡ ಗ್ರಾ.ಪಂ. ವ್ಯಾಪ್ತಿಯ ಮುಂಡೂಪಳಿಕೆ ಮೈಪಾಳ ನದಿಯಿಂದ ಮರಳುಗಾರಿಕೆ ನಡೆಸಲು ಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರರು ಗ್ರಾ.ಪಂ.ಗೆ ನಿಗದಿಪಡಿಸಿದ ರಸ್ತೆ ನಿರ್ವಹಣಾ ಕರ ಪಾವತಿಸದ ಕಾರಣಕ್ಕೆ ಮರಳು ಸಾಗಾಟದ ವಾಹನಗಳನ್ನು ಜಫ್ತು ಮಾಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳವಾರ ನಡೆದಿದೆ. ಮೈಪಾಳ ನದಿಯಿಂದ ಮರಳು ತೆಗೆಯಲು ಗಣಿ ಇಲಾಖೆಯಿಂದ ಗುತ್ತಿಗೆ ಪಡೆದ ಗುತ್ತಿಗೆದಾರರಿಗೆ ಗ್ರಾ.ಪಂ. ರಸ್ತೆಯ ನಿರ್ವಹಣೆಗೆಂದು ವಾರ್ಷಿಕ ನೆಲೆಯಲ್ಲಿ ಶುಲ್ಕ ವಿಧಿಸಲಾಗಿತ್ತು. ಈ ಶುಲ್ಕ ಪಾವತಿಯ ನಿಯಮಾವಳಿಯಲ್ಲಿ ಗುತ್ತಿಗೆದಾರರ ನಿರಾಸಕ್ತಿ ವ್ಯಕ್ತವಾದ ಹಿನ್ನೆಲೆಯಲ್ಲಿ ಪಂಚಾಯಿತಿ ಆಡಳಿತ ಕಠಿಣ ನಿರ್ಧಾರ ಕೈಗೊಂಡಿತ್ತು. ಕಾರ್ಯಾಚರಣೆಯನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೀವಿ ರೈ ಮುಂದಾಳತ್ವದಲ್ಲಿ ನಡೆಸಲಾಯಿತು. ಉಪ್ಪಿನಂಗಡಿ ಪೊಲಿಸರು ಪ್ರಕರಣ ದಾಖಲಿಸಿದ್ದಾರೆ.