ಕಾಡಾನೆ ದಾಳಿಗೆ ಕಂದಕ ತಡೆ
ಸುಬ್ರಹ್ಮಣ್ಯ: ಕಾಡಿನಿಂದ ನಾಡಿಗೆ ಇಳಿದು ಬಂದು ಕೃಷಿಕರು ಬೆಳೆದ ಬೆಲೆಬಾಳುವ ಉತ್ಪನ್ನಗಳನ್ನು ನಾಶಪಡಿಸುವ ಮತ್ತು ಜೀವಕ್ಕೆ ಕುತ್ತು ತರುವ ಕಾಡಾನೆಗಳನ್ನು ಓಡಿಸಲು ಗ್ರಾಮೀಣ ಭಾಗದಲ್ಲಿ ಕೃಷಿಕರು ಹಲವಾರು ತಂತ್ರಗಳನ್ನು ಪ್ರಯೋಗಿಸಿದ್ದಾರೆ.
ಆದರೆ ಅದು ಯಾವುದೇ ಪ್ರಯೋಜನಕ್ಕೆ ಬಾರದೇ ಹೋದಾಗ ಇದೀಗ ಇನ್ನೊಂದು ವಿಧಾನವನ್ನು ಕಂಡುಕೊಂಡಿದ್ದಾರೆ. ತೋಟಕ್ಕೆ ನುಗ್ಗುವ ಕಾಡಾನೆಗಳನ್ನು ತಡೆಗಟ್ಟಲು ತಮ್ಮ ಜಮೀನುಗಳ ಸುತ್ತ ಕಂದಕಗಳನ್ನು ನಿರ್ಮಾಣಗೊಳಿಸುವುದು. ಇದು ಕಾಡಾನೆ ಪೀಡಿತ ಸುಬ್ರಹ್ಮಣ್ಯ ಸಮೀಪದ ಐನೆಕಿದು ಕೃಷಿಕರ ವಿನೂತನ ಪ್ರಯೋಗ ಎಂದು ಐನೆಕಿದು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಸತೀಶ್ ಕೂಜುಗೋಡು ಹೇಳಿದ್ದಾರೆ.
ಹಲವಾರು ಪ್ರಯತ್ನ: ದ.ಕ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಹಲವಾರು ಗ್ರಾಮಗಳು ಕಾಡುಪ್ರಾಣಿಗಳ ಹಾವಳಿಗೆ ಗಂಭೀರವಾಗಿ ತುತ್ತಾಗಿವೆ. ಹರಿಹರ, ಬಾಳುಗೋಡು, ಐನೆಕಿದು, ಕಲ್ಮಕಾರು, ಕೊಲ್ಲಮೊಗ್ರು, ಮಡಪ್ಪಾಡಿ, ಸುಬ್ರಹ್ಮಣ್ಯ, ಎಡಮಂಗಲ ಮುಂತಾದ ಪರಿಸರದಲ್ಲಿ ಕಾಡಾನೆಗಳು ಎಡೆಬಿಡದೇ ಕೃಷಿಕರ ತೋಟಗಳಿಗೆ ದಾಳಿ ನಡೆಸಿ ಕೃಷಿಕರನ್ನು ನಿದ್ದೆಗೆಡುವಂತೆ ಮಾಡಿದೆ. ಕಷ್ಟಪಟ್ಟು ತಮ್ಮ ಭೂಮಿಯಲ್ಲಿ ಬೆಳೆದ ಚಿನ್ನದಂತಹ ಬೆಳೆಗಳನ್ನು ರಾತ್ರಿ ಬೆಳಗಾಗುವಷ್ಟರಲ್ಲಿ ನಾಶಪಡಿಸುವ, ಪ್ರಾಣಕ್ಕೂ ಎರವಾಗುವ ಕಾಡಾನೆಗಳನ್ನು ಓಡಿಸಲು ಸಿಡಿಮದ್ದು ಸಿಡಿಸುವುದು, ತೋಟಗಳ ಅಂಚಿನಲ್ಲಿ ಚಿಮಣಿದೀಪ, ಲ್ಯಾಂಪ್ಗಳನ್ನು ಹೊತ್ತಿಸಿ ನೇತು ಹಾಕುವುದು, ತೋಟಗಳಲ್ಲಿ ಡಬ್ಬ ಇರಿಸಿ ಹಗ್ಗ ಅಳವಡಿಸಿ ಹಗ್ಗದ ಮೂಲಕ ಶಬ್ದ ಮಾಡುವುದು ಇತ್ಯಾದಿ ವಿಧಾನಗಳನ್ನು ಬಳಸಿ ಕಾಡಾನೆಗಳನ್ನು ಓಡಿಸಲು ಪ್ರಯತ್ನಿಸಿ ಫಲಕಾರಿಯಾಗದೇ ಕೈ ಸುಟ್ಟುಕೊಂಡಿದ್ದಾರೆ ಇಲ್ಲಿನ ಕೃಷಿಕರು.
ದೂರಿದರೂ ಪ್ರಯೋಜನವಾಗಲಿಲ್ಲ: ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದು ಆಯಿತು. ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದೂ ಆಯಿತು. ಕಾಡಾನೆಗಳ ಉಪಟಳಕ್ಕೆ ಶಾಶ್ವತ ಪರಿಹಾರವಾಗಲೀ, ನಾಶಗೊಂಡ ಬೆಳೆಗಳಿಗೆ ನಿರೀಕ್ಷಿತ ಪರಿಹಾರವಾಗಲೀ ದೊರಕದಿದ್ದಾಗ ಕೃಷಿ ಮಾಡುವುದನ್ನೇ ನಿಲ್ಲಿಸುವ ಹಂತ ತಲುಪಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಐನೆಕಿದು ಕೃಷಿಕರು ಒಂದು ಹೊಸ ವಿಧಾನ ಅಳವಡಿಸಿಕೊಂಡಿದ್ದಾರೆ.
ಐನೆಕಿದು ಪರಿಸರದಲ್ಲಿ ಕಳೆದ ಕೆಲವು ಸಮಯಗಳಿಂದ ಎಡಬಿಡದೇ ಕಾಡನೆಗಳು ತೋಟಕ್ಕೆ ನುಗ್ಗುತ್ತಿರುವುದರಿಂದ ಕಂಗೆಟ್ಟ ಇಲ್ಲಿನ ಕೃಷಿಕರು ಕಾಡಾನೆಗಳ ಹಾವಳಿ ತಪ್ಪಿಸಲು ಹೊಸತೊಂದು ಉಪಾಯ ಕಂಡುಕೊಂಡಿದ್ದಾರೆ.
ಇಲ್ಲಿನ ರೈತರೆಲ್ಲಾ ಸಮಾಲೋಚನೆ ಮಾಡಿ ತಮ್ಮದೇ ವೆಚ್ಚದಲ್ಲಿ ಗ್ರಾಮದ ಸುತ್ತ ಕಂದಕಗಳನ್ನು ತೋಡಿ ಕಾಡಾನೆಗಳು ತೋಟಕ್ಕೆ ಬಾರದಂತೆ ತಡೆಯೊಡ್ಡುತ್ತಿದ್ದಾರೆ. ಆನೆಗಳು ಈ ಕಂದಕ ದಾಟಿ ಬರಲು ಸಾಧ್ಯವಿಲ್ಲ ಎಂಬುದು ಇವರ ಅಭಿಪ್ರಾಯ. ಅದರಂತೆ ಗ್ರಾಮದ ಸುತ್ತಲೂ ತಮ್ಮ ಜಮೀನುಗಳ ವ್ಯಾಪ್ತಿಯಲ್ಲಿ ಕಂದಕ ತೋಡುವ ಕೆಲಸ ಭರದಿಂದ ಸಾಗುತ್ತಿದೆ. ಇದರ ವೆಚ್ಚವನ್ನು ಜಮೀನಿನ ವಾರಸುದಾರರೇ ಭರಿಸುತ್ತಿದ್ದಾರೆ.
ಅರಣ್ಯ ಇಲಾಖೆ ಬೆಂಬಲ: ಅರಣ್ಯ ಇಲಾಖೆಯ ಜೊತೆ ಸಮಾಲೋಚಿಸಿ, ಕಾನೂನಿನ ತೊಡಕು ಎದುರಾಗದಂತೆ, ಅರಣ್ಯಕ್ಕೂ ತೊಂದರೆಯಾಗದಂತೆ ಈ ಕಂದಕ ನಿರ್ಮಾಣಕ್ಕೆ ಮುಂದಾಗಿದ್ದಾರೆ. 10 ಅಡಿ ಆಳ ಮತ್ತು 8 ಅಡಿ ಅಗಲದಲ್ಲಿ ಈ ಕಂದಕ ನಿರ್ಮಾಣವಾಗುತ್ತಿದೆ. 'ನಮ್ಮ ಭೂಮಿ ನಮ್ಮ ರಕ್ಷಣೆ' ಎಂಬ ಧ್ಯೇಯದೊಂದಿಗೆ ಕೃಷಿ ಭೂಮಿಗಳನ್ನು ತಾವೇ ಸಂರಕ್ಷಿಸುವ ಈ ವಿನೂತನ ಯೋಜನೆಯ ಕಲ್ಪನೆ ಯಶಸ್ವಿಯಾದಲ್ಲಿ ಆನೆಬಾಧಿತ ಎಲ್ಲ ಭಾಗಗಳಿಗೂ ವಿಸ್ತರಿಸಿ ಅಳವಡಿಸಬಹುದು. ಇದರಿಂದ ಪರಿಣಾಮ ಬೀರಬಹುದು ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ಸಾರ್ವಜನಿಕರ ಪ್ರಶಂಸೆ: ಆದರೆ ಗ್ರಾಮದ ಸುತ್ತಲಿನ ಉದ್ದಕ್ಕೂ ಕಂದಕ ತೋಡುವುದೆಂದರೇ ಅಷ್ಟು ಸುಲಭವಲ್ಲ. ವೆಚ್ಚ ಬಹಳಷ್ಟು ಭರಿಸಬೇಕಿದೆ. ಅಂತಹ ಶಕ್ತಿ ಪ್ರಸ್ತುತ ಸ್ಥಿತಿಯಲ್ಲಿ ಕೃಷಿಕರಿಂದ ಸಾಧ್ಯವಿಲ್ಲ. ಒಮ್ಮತ ಕೂಡ ಮೂಡುವುದು ಕಷ್ಟ. ಆದರೆ ಇಲ್ಲಿಯ ಗ್ರಾಮಸ್ಥರು ಮಾತ್ರ ಒಮ್ಮತದಿಂದ ಈ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಸರ್ಕಾರ, ಅರಣ್ಯ ಇಲಾಖೆ ಆರ್ಥಿಕ ಸಹಾಯ ಒದಗಿಸಿದಲ್ಲಿ ಆನೆಬಾಧಿತ ಎಲ್ಲ ಭಾಗಗಳಿಗೂ ಈ ಪ್ರಯೋಗವನ್ನು ವಿಸ್ತರಿಸಿ ಸ್ವಲ್ಪಮಟ್ಟಿನ ಪ್ರಯೋಜನ ಕಂಡುಕೊಳ್ಳಬಹುದೆಂಬ ಅಭಿಪ್ರಾಯ ಕೂಡ ಕೇಳಿಬಂದಿದೆ. ಫಲವತ್ತಾದ ಭೂಮಿಯ ರಕ್ಷಣೆ ನಮ್ಮ ಕರ್ತವ್ಯ. ಕಾಡಾನೆಗಳಿಂದ ನಮ್ಮ ಭೂಮಿಯನ್ನು ಸಂರಕ್ಷಿಸಲು ನಾವು ಈ ಯೋಜನೆ ಹಾಕಿಕೊಂಡಿದ್ದೇವೆ. ಅರಣ್ಯ ಇಲಾಖೆಯ ಸಲಹೆಯನ್ನು ಪಡೆದುಕೊಂಡಿದ್ದೇವೆ. ಅರಣ್ಯ ಇಲಾಖೆಗೆ ಯಾವುದೇ ತೊಂದರೆ ಮಾಡುವುದಿಲ್ಲ.