ಪಾಸ್ಪೋರ್ಟ್ ಅರ್ಜಿದಾರರಿಗೆ ಪೊಲೀಸರ ಕಿರುಕುಳ : ಖಾದರ್
ಮಂಗಳೂರು: ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಿದವರಿಗೆ ಪೊಲೀಸರು ವಿಚಾರಣೆ ನೆಪದಲ್ಲಿ ಅನಗತ್ಯ ಹೊರೆ ಹೊರಿಸುತ್ತಿದ್ದಾರೆ ಎಂದು ಶಾಸಕ ಯು.ಟಿ.ಖಾದರ್ ಆರೋಪಿಸಿದ್ದಾರೆ. ಪಾಸ್ಪಾರ್ಟ್ ಕಚೇರಿಗೆ ಅರ್ಜಿ ಸಲ್ಲಿಸಿದಾಗ ವ್ಯಕ್ತಿಯ ವಿಳಾಸ ಪರಿಶೀಲನೆಗೆ ಪೊಲೀಸರು ಅರ್ಜಿದಾರನ ಮನೆಗೆ ತೆರಳಿ ಅಲ್ಲಿ ಸಾಕ್ಷಿಗಳಿಂದ ಸಹಿ ಹಾಕಿಸಿ ಬರಬೇಕು. ಆದರೆ ಪೊಲೀಸರು ಸಾಕ್ಷಿಗಳನ್ನು ಪೊಲೀಸ್ ಠಾಣೆಗೆ ಕರೆಸುತ್ತಿದ್ದಾರೆ. ಅರ್ಜಿದಾರರು ತನ್ನ ಮನೆ ಎದುರು ನಿಲ್ಲಿಸಿದ ಫೋಟೋ ತಂದುಕೊಡುವಂತೆ ಕೇಳುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಈ ಬಗ್ಗೆ ಮಂಗಳೂರಿನ ಪಾಸ್ಪೋರ್ಟ್ ಅಧಿಕಾರಿಗಳ ಬಳಿ ಈ ಬಗ್ಗೆ ವಿಚಾರಿಸಿದಾಗ ಅರ್ಜಿದಾರ ಪರವಾಗಿ ಸಾಕ್ಷಿಗಳು ಠಾಣೆಗೆ ಹೋಗಬೇಕೆಂದಿಲ್ಲ, ಮನೆ ಮುಂದೆ ಫೋಟೊ ತೆಗೆಸಿಕೊಳ್ಳುವ ಅಗತ್ಯ ಇಲ್ಲ. ಪೊಲೀಸರು ಅರ್ಜಿದಾರರ ಮನೆಗೆ ಹೋಗಿ ವಿಚಾರಣೆ ನಡೆಸಿ, ಸಾಕ್ಷಿಗಳಿಂದ ಸಹಿ ಹಾಕಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಇದು ಕೇವಲ ಉಳ್ಳಾಲ ಪರಿಸರದವರ ಸಮಸ್ಯೆಯಲ್ಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರು ಸಮಸ್ಯೆ ಹುಟ್ಟು ಹಾಕಿದ್ದಾರೆ. ಈ ಬಗ್ಗೆ ಪೊಲೀಸ್ ಕಮಿಷನರ್ ಮನೀಶ್ ಕರ್ಬೀಕರ್ ಜತೆ ಮಾತುಕತೆ ನಡೆಸಿದ್ದೇನೆ. ಅವರು ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದರು.