ಪೊಲೀಸ್ ಠಾಣೆ ಎಸಿ, ಸಿಸಿ ಕ್ಯಾಮೆರಾಕ್ಕೆ ಖಾಸಗಿ ದೇಣಿಗೆ!
ಜಿತೇಂದ್ರ ಕುಂದೇಶ್ವರ
ಮಂಗಳೂರು: ಪೊಲೀಸ್ ಠಾಣೆ ನವೀಕರಣಕ್ಕೆ ದೇಣಿಗೆ ಕೇಳುವುದು ಅಕ್ರಮ. ಆದರೆ ಕದ್ರಿ ಪೊಲೀಸ್ ಠಾಣೆ ನವೀಕರಣಕ್ಕೆ ದೇಣಿಗೆ ಪಡೆದರು, ಇದೇ ಭರವಸೆಯಲ್ಲಿ ಗುತ್ತಿಗೆದಾರರು ಎಸಿ, ಸಿಸಿ ಕ್ಯಾಮೆರಾ ಅಳವಡಿಸಿದರು. ವಿಚಿತ್ರ ಮತ್ತು ವಿಷಾದ ಏನೆಂದರೆ ವಂತಿಗೆ ಎತ್ತಿದರೂ ಗುತ್ತಿಗೆದಾರರಿಗೆ ಹಣ ಮಾತ್ರ ತಲುಪಿಲ್ಲ! ದೇಣಿಗೆ ಪಡೆದವರು ಗುಳುಂ ಮಾಡಿ, ಗುತ್ತಿಗೆದಾರರು ಬಂದಾಗ ಕೈ ಎತ್ತಿದ್ದಾರೆ.
ಈ ಪವಾಡ ಕದ್ರಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಠಾಣೆ ದುರಸ್ತಿ ಮಾಡಿದ ರೂವಾರಿ ಇನ್ಸ್ಪೆಕ್ಟರ್, ಮಸಾಜ್ಪಾರ್ಲರ್ ಒಳಗೆ ಕಾಂಡೋಮ್ ಇಟ್ಟು ದಾಳಿ ಮಾಡಿದ ಪ್ರಕರಣದಲ್ಲಿ ಇನ್ಸ್ಪೆಕ್ಟರ್ ಅಮಾನತುಗೊಂಡವರು !
ಕದ್ರಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಿ. ಕಿರಣ್ ಠಾಣೆಯಲ್ಲಿ ಉತ್ತಮ ವ್ಯವಸ್ಥೆ ಏನೋ ಮಾಡಿದ್ದರು. ಇನ್ಸ್ಪೆಕ್ಟರ್ ಕೋಣೆಗೆ ಎಸಿ ಅಳವಡಿಸಿದ್ದರು. ಕೋಣೆ ಯಾವುದೇ ಐಷಾರಾಮಿ ಹೊಟೇಲ್ ರೂಮ್ಗೆ ಕಡಿಮೆ ಇಲ್ಲದಂತೆ ನಿರ್ಮಿಸಿದ್ದರು. ಸಾರ್ವಜನಿಕರು ಬಂದು ದೂರು ನೀಡುವ ಎಫ್ಐಆರ್ ಮಾಡುವಲ್ಲಿ ಸಹಿತ ಅನೇಕ ಆಯಕಟ್ಟಿನ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದರು. ಉತ್ತಮ ಪೀಠೋಪಕರಣಗಳನ್ನು ಹಾಕಿಸಿದ್ದರು. ಇದನ್ನು ಸರ್ಕಾರಿ ಅನುದಾನದಲ್ಲಿ ಮಾಡಿಸಿರಲಿಲ್ಲ. ಗಣೇಶ್ ಎಂಬ ಗುತ್ತಿಗೆದಾರರಿಗೆ ಸೂಚಿಸಿದ್ದರು. ಅವರು ಕೆಲಸ ಸರಿಯಾಗಿ ಮಾಡಿಕೊಟ್ಟಿದ್ದಾರೆ. ನವೀಕರಿಸಿದ 6 ತಿಂಗಳ ಒಳಗೆ ಕದ್ರಿ ಠಾಣೆ ವ್ಯಾಪ್ತಿಯಲ್ಲಿ ಕಾಂಡೋಮ್ ಇಟ್ಟು ದಾಳಿ ನಡೆಸಿದ ಪೊಲೀಸರು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿ ಇನ್ಸ್ಪೆಕ್ಟರ್ ಪೊಲೀಸರು ಸಹಿತ ಅಮಾನತುಗೊಂಡು ವರ್ಗವಾದರು.
ಕಾಮಗಾರಿ ನಡೆದು 2 ವರ್ಷ ಕಳೆದಿದೆ. ಬಿಲ್ಡರ್ ಠಾಣೆಗೆ ಒಂದೆರಡು ಬಾರಿ ಬಂದು ಹೊಸ ಇನ್ಸ್ಪೆಕ್ಟರ್ಗಳ ಬಳಿ ಕಾಮಗಾರಿ ಹಣ ಕೇಳಿದ್ದಾರೆ. ಸಿಗುವ ಸಾಧ್ಯತೆ ಇಲ್ಲ ಎಂದಾಗ ಹಣಕ್ಕೆ ಎಳ್ಳು ನೀರು ಬಿಟ್ಟಿದ್ದಾರೆ.
'2 ಲಕ್ಷ ವರೆಗೆ ಖರ್ಚಾಗಿದೆ. ಫ್ಲೈವುಡ್ ಹಣ ಎಂದು ಸ್ವಲ್ಪ ಕೊಟ್ಟಿದ್ದಾರೆ. ಬಾಕಿ ಉಳಿದ ಹಣ ಸಿಗಲೇ ಇಲ್ಲ. ಆದರ ಆಸೆಯೇ ಬಿಟ್ಟಿದ್ದೇನೆ. ಇತರ ಪೊಲೀಸ್ ಠಾಣೆಗಳಿಗೂ ಸಣ್ಣಪುಟ್ಟ ಕೆಲಸ ಮಾಡಿಕೊಟ್ಟಿದ್ದೇನೆ. ಇದು ಸ್ವಲ್ಪ ದೊಡ್ಡ ಮೊತ್ತ, ಆದರೂ ಪರ್ವಾಗಿಲ್ಲ ಬಿಡಿ' ಎನ್ನುತ್ತಾರೆ ಗುತ್ತಿಗೆದಾರ ಗಣೇಶ್.
ದೇಣಿಗೆ ನೀಡಿದ್ದು ಇವರು!
ಪೊಲೀಸ್ ಠಾಣೆಗೆ ದೇಣಿಗೆ ನೀಡಿದವರೂ ಕಡಿಮೆಯವರಲ್ಲ, ನಿತ್ಯ ಠಾಣೆ ಸಂಪರ್ಕ ಹೊಂದಿರುವವರೇ! ಸಿಸಿ ಕ್ಯಾಮೆರಾ ನೀಡಿದ್ದು ಬಾರ್ ಮಾಲೀಕ, ಪ್ಲ್ಯಾಟ್ ಟೀವಿ ನೀಡಿದ್ದು ಮಾಜಿ ರೌಡಿ, ಎಸಿ ಅಳವಡಿಸಿದ ಹಣ ಇಸ್ಪೀಟ್ ಕ್ಲಬ್ ಮಾಲೀಕರದ್ದು, ಟೇಬಲ್ ಕುರ್ಚಿಗಳನ್ನು ಲಾಡ್ಜ್ ಮಾಲೀಕ ಒದಗಿಸಿದ್ದು!
ಪೊಲೀಸ್ ಠಾಣೆಯವರು ದೇಣಿಗೆ ಪಡೆದು ಕಟ್ಟಡ ನಿರ್ಮಿಸುವಂತಿಲ್ಲ. ನವೀಕರಿಸಬೇಕಾದರೆ ಸರ್ಕಾರದ ಅನುಮತಿ ಬೇಕು, ಅದಕ್ಕೆ ಟೆಂಡರ್ ಪ್ರಕ್ರಿಯೆ ನಡೆಯುತ್ತದೆ, ಎಲ್ಲವೂ ಪಾರದರ್ಶಕವಾಗಿರಬೇಕು. ಆದರೆ ಠಾಣೆಗಳಲ್ಲಿ ದೇಣಿಗೆ, ದುರಸ್ತಿ ಕಾರ್ಯ ದಾಖಲೆ ಇಲ್ಲದೆ ನಡೆಯುತ್ತದೆ.
'ಖಾಸಗಿ ವ್ಯಕ್ತಿಗಳಿಂದ ದೇಣಿಗೆ ಪಡೆದು ಪೊಲೀಸ್ ಠಾಣೆ ನವೀಕರಿಸುವಂತಿಲ್ಲ. ಒಂದು ವೇಳೆ ಸರ್ಕಾರದಿಂದಲೇ ವರ್ಕ್ ಆರ್ಡರ್ ಪಡೆದು ಕಾಮಗಾರಿ ನಡೆಸಿದ್ದರೂ ಹಣ ಪಾವತಿಯಾಗದಿದ್ದರೆ ನನ್ನ ಬಳಿ ಬರಲಿ ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ' ಎಂದು ಪೊಲೀಸ್ ಕಮಿಷನರ್ ಮನೀಶ್ ಕರ್ಬಿಕರ್ ತಿಳಿಸಿದ್ದಾರೆ.
ಕಮಿಷನರೇಟ್ ಮೊತ್ತವೂ ಬಾಕಿ!
ಪೊಲೀಸ್ ಕಮಿಷನರೇಟ್ ಕಟ್ಟಡ ಉದ್ಘಾಟನೆಯಾಗಿ ಒಂದುವರೆ ವರ್ಷ ಕಳೆದಿದೆ. ಆದರೆ ಅದಕ್ಕೆ ಪೀಠೋಪಕರಣ ಅಳವಡಿಸಿದವರಿಗೆ ದುಡ್ಡು ಇನ್ನೂ ಸಿಕ್ಕಿಲ್ಲ. ಸಿಸಿಎಲ್ ಸಂಸ್ಥೆ ಸಂಪೂರ್ಣ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿತ್ತು.
'ಕಮಿಷನರೇಟ್ ಕಟ್ಟಡದ 3.5 ಲಕ್ಷ ಪೀಠೋಪಕರಣ ಅಳವಡಿಸಿದ ಹಣ ಇನ್ನೂ ಬಂದಿಲ್ಲ. ಅದು ಬಂದೇ ಬರುತ್ತದೆ. ಸಿಸಿಎಲ್ ಸಂಸ್ಥೆ ಮೂಲಕ ನಾವು ಕಾಮಗಾರಿ ಮಾಡಿದ್ದರಿಂದ ವಿಳಂಬವಾಗಿದೆ. ಸಿಸಿಎಲ್ ಸಂಸ್ಥೆಗೂ ಹಣ ಇತ್ತೀಚೆಗೆ ಬಂತು. ಬಾಕಿ ಮೊತ್ತ ಪಾವತಿಗೆ ಪತ್ರ ಬರೆಯಲು ಹೇಳಿದ್ದಾರೆ. ಕಮಿಷನರೇಟ್ ಕಟ್ಟಡ ಹಣ ತಡವಾಗುತ್ತಿರುವ ಬಗ್ಗೆ ಯಾವುದೇ ಬೇಸರವೂ ಇಲ್ಲ, ಆರೋಪವೂ ಇಲ್ಲ. ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗಿದೆ' ಎನ್ನುತ್ತಾರೆ ಗುತ್ತಿಗೆದಾರ ಗಣೇಶ್.