ಬಾಲಕಾರ್ಮಿಕ ವಿರುದ್ಧ ಜನಜಾಗೃತಿ ರಥ ಚಾಲನೆ
ಮಂಗಳೂರು: ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯನ್ವಯ 14 ವರ್ಷದೊಳಗಿನ ಮಕ್ಕಳನ್ನು ದುಡಿಸುವುದು ಅಪರಾಧ. ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಲ್ಲಿ ಮಾಲಿಕರಿಗೆ ರು. 10 ಸಾವಿರದಿಂದ ರು. 20 ಸಾವಿರ ವರೆಗೆ ದಂಡ ಹಾಗೂ ಒಂದು ವರ್ಷ ವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು. ಈ ಬಗ್ಗೆ ಜನಜಾಗೃತಿ ಮೂಡಿಸಲು ಜಿಲ್ಲಾಡಳಿತ, ಜಿಲ್ಲಾ ಚೈಲ್ಡ್ ಲೇಬರ್ ಪ್ರಾಜೆಕ್ಟ್ ಸೊಸೈಟಿ, ಕಾರ್ಮಿಕ ಇಲಾಖೆ ಆಶ್ರಯದಲ್ಲಿ ಬುಧವಾರ ಜಿಲ್ಲಾಧಿಕಾರಿ ಆವರಣದಲ್ಲಿ ಜನಜಾಗೃತಿ ರಥಕ್ಕೆ ಜಿಲ್ಲಾಧಿಕಾರಿ ಪ್ರಕಾಶ್ ಚಾಲನೆ ನೀಡಿದರು.
ಜಿಲ್ಲೆಯಾದ್ಯಂತ 10 ದಿನ ಕಾಲ ಜನ ಜಾಗೃತ ರಥ ಸಂಚರಿಸಲಿದೆ. 21ರಂದು ಮೂಡುಬಿದಿರೆ ಗ್ರಾಮಾಂತರ, 22, 23ರಂದು ಬಂಟ್ವಾಳ, 24, 25ರಂದು ಪುತ್ತೂರು, 26, 27ರಂದು ಸುಳ್ಯ ಹಾಗೂ 28, 29ರಂದು ಬೆಳ್ತಂಗಡಿ ತಾಲೂಕಲ್ಲಿ ರಥ ಸಂಚರಿಸಲಿದೆ ಎಂದು ಸಹಾಯಕ ಕಾರ್ಮಿಕ ಆಯುಕ್ತ ನಾಗೇಶ್ ತಿಳಿಸಿದರು. ಜಿಲ್ಲಾ ಪಂಚಾಯ್ತಿ ಸಿಇಒ ಡಾ.ವಿಜಯ ಪ್ರಕಾಶ್, ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್, ಅಪರ ಜಿಲ್ಲಾಧಿಕಾರಿ ದಯಾನಂದ್, ಕಾರ್ಮಿಕ ಆಯುಕ್ತ ಡಾ.ಬಾಲಕೃಷ್ಣ, ಕಾರ್ಮಿಕ ಅಧಿಕಾರಿಗಳಾದ ಆನಂದಮೂರ್ತಿ, ಕುಮಾರ್ ಜ್ಞಾನೇಶ್, ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ಶ್ರೀನಿವಾಸ್ ಹಾಜರಿದ್ದರು.