ವಿದ್ಯುತ್ ವ್ಯತ್ಯಯ; ರಾಜಕೀಯ ಪ್ರಹಸನ
ಉಡುಪಿ: ರಾಜ್ಯದ ವಿದ್ಯುತ್ ಕಂಪೆನಿಗಳು ಮತ್ತು ರಾಜ್ಯ ಸರ್ಕಾರಗಳು ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದ ಅಪವಿತ್ರ ಮೈತ್ರಿಯ ಪರಿಣಾಮವಾಗಿ ಇಂದು ರಾಜ್ಯಾದ್ಯಂತ ಲೋಡ್ ಶೆಡ್ಡಿಂಗ್ ಆರಂಭವಾಗಿದೆ. ಸರ್ಕಾರದಿಂದ ಬಾಕಿ ವಸೂಲಿಗಿಳಿದ ಕಂಪೆನಿಗಳು, ಕಲ್ಲಿದ್ದಲು ಕೊರತೆಯ ನೆಪ ಮುಂದಿರಿಸಿ ಸರ್ಕಾರವನ್ನು ಬೆದರಿಸಿದರೆ, ಸರ್ಕಾರ ವಿತರಣೆಯಲ್ಲಿ ವ್ಯತ್ಯಾಸವಾಗುತ್ತಿದೆ ಎಂದು ತಿಪ್ಪೆ ಸಾರಿಸಿ ಜನರಿಂದ ಮುಖ ತಪ್ಪಿಸಿಕೊಳ್ಳುತ್ತಿವೆ ಎಂದು ಗ್ರಾಪಂ ಒಕ್ಕೂಟದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಆರೋಪಿಸಿದ್ದಾರೆ.
ಪ್ರಸ್ತುತ ಏನಿಲ್ಲವೆಂದರೂ 800 ಮೆ.ವಾ. ವಿದ್ಯುತ್ ಉತ್ಪಾದಿಸುತ್ತಿರುವ ಉಡುಪಿಯ ಯುಪಿಸಿಎಲ್ ಕಂಪೆನಿ ಉತ್ಪಾದಿತ ವಿದ್ಯುತ್ತನ್ನು ಹಾಸನದ ಶಾಂತಿಗ್ರಾಮದವರೆಗೆ ಸಾಗಿಸಿ ಅಲ್ಲಿಂದ ಅನ್ಯ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದರೂ ನಮ್ಮ ರಾಜ್ಯ ಸರ್ಕಾರವೇಕೆ ಚಕಾರವೆತ್ತುತ್ತಿಲ್ಲ, ಪಾದೂರು ಕಚ್ಚಾ ತೈಲ ಯೋಜನಾ ಪ್ರದೇಶಕ್ಕೆ ದಿನವಿಡೀ ವಿದ್ಯುತ್ ನೀಡಲು ಕಂಪೆನಿ ಸಿದ್ಧತೆ ನಡೆಸುತ್ತಿರುವುದು ಸಂದೇಹಾಸ್ಪದ ವರ್ತನೆಯಲ್ಲವೆ ಎಂದೂ ಪ್ರಶ್ನಿಸಿದ್ದಾರೆ.