ಸುದ್ದಿ ಸಂಕ್ಷೇಪ
24ರಂದು ಹಿಂದೂ ಸಮಾಜೋತ್ಸವ
ಸುಳ್ಯ: ಹಿಂದೂ ಸಮಾಜೋತ್ಸವ ಸಮಿತಿ ದ.ಕ. ಸಂಪಾಜೆ (ಕಲ್ಲುಗುಂಡಿ) ಇದರ ವತಿಯಿಂದ ಚೆಂಬು, ಕೊಡಗು, ಸಂಪಾಜೆ ಗ್ರಾಮಗಳ ಸಹಯೋಗದಲ್ಲಿ ಮಾ.24 ರಂದು ಕಲ್ಲುಗುಂಡಿ ಒತ್ತೆಕೋಲ ಗದ್ದೆಯಲ್ಲಿ ಹಿಂದೂ ಸಮಾಜೋತ್ಸವ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಸಂಯೋಜಕ ಸುಬ್ರಹ್ಮಣ್ಯ ಉಪಾಧ್ಯಾಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸಭೆಯಲ್ಲಿ ವಜ್ರದೇಹಿ ಗುರುಪುರ ಮಠದ ರಾಜಶೇಖರ ನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಭಾಷಣಗಾರರಾಗಿ ದ.ಕ. ಪ್ರಾಂತ ಹಿಂದೂ ಜಾಗೃತಾ ಸಮಿತಿಯ ಜಗದೀಶ ಕಾರಂತ ಭಾಗವಹಿಸಲಿದ್ದಾರೆ. ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಗೌರವಾರ್ಥರಾಗಿ ಕೀಲಾರು ರಾಜಾರಾಮರನ್ನು ಆಯ್ಕೆ ಮಾಡಲಾಗಿದೆ ಎಂದು ಸುಬ್ರಹ್ಮಣ್ಯ ಉಪಾಧ್ಯಾಯ ಹೇಳಿದರು.
ಪ್ರತಿ ಮನೆಗೆ ಹೋಗಿ ಭಗಧ್ವಜ ಕೊಟ್ಟು ಮನೆ- ಮನೆಗಳಲ್ಲೂ ಹಾರಾಡುವಂತೆ ಮಾಡಿ ಹಿಂದೂಗಳ ಸಂಸ್ಕೃತಿಯನ್ನು ಉಳಿಸುವಲ್ಲಿ ಮಾರ್ಗದರ್ಶನ ನೀಡಿದ್ದೇವೆ ಎಂದು ಸಮಿತಿ ಅಧ್ಯಕ್ಷ ಡಾ. ಲೀಲಾಧರ್ ಹೇಳಿದರು. ಉಪಾಧ್ಯಕ್ಷ ನಡುಬೆಟ್ಟು ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಎಸ್.ಪಿ. ಮೋಹನ, ಖಜಾಂಜಿ ಬಾಲಚಂದ್ರ ಕಳಗಿ, ಸಹ ಕಾರ್ಯದರ್ಶಿ ಚರಿಯಪ್ಪ, ಸಮಿತಿಯ ಧನಪಾಲ, ಕಿಶೋರ್ ಉಪಸ್ಥಿತರಿದ್ದರು.
ಕರ್ಣಾಟಕ ಬ್ಯಾಂಕ್ನಿಂದ 26 ಕಡೆ ಸಣ್ಣ ಶಾಖೆ
ಮಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಸಬಲೀಕರಣ ದಿಶೆಯಲ್ಲಿ ಕರ್ಣಾಟಕ ಬ್ಯಾಂಕ್ ದೇಶಾದ್ಯಂತ 26 ಸಣ್ಣ ಪ್ರಮಾಣದ ಶಾಖೆಗಳನ್ನು ತೆರೆಯಲು ಉದ್ದೇಶಿಸಿದೆ. ಮಾರ್ಚ್ ಅಂತ್ಯಕ್ಕೆ 18 ಶಾಖೆಗಳಲ್ಲದೆ, 8ಕ್ಕೂ ಅಧಿಕ ಸಣ್ಣ ಶಾಖೆ ತೆರೆಯಲಿದ್ದು, 2013-14ನೇ ವರ್ಷದಲ್ಲಿ ಇಂಥ 94 ಸಣ್ಣ ಶಾಖೆಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ. ಮುಂದಿನ ಮಾರ್ಚ್ಗೆ ಒಟ್ಟು ಶಾಖೆಗಳ ಸಂಖ್ಯೆ 120 ತಲುಪಲಿದೆ. ಗ್ರಾಮೀಣ ಜನತೆಯ ಅನುಕೂಲಕ್ಕೆ ಧಾರವಾಡದ ಕುಂದಗೋಳದಲ್ಲಿ ಎಫ್ಎಲ್ಸಿಸಿ(ಫೈನಾನ್ಸಿಯಲ್ ಲಿಟ್ರೆಸಿ ಅಂಡ್ ಕ್ರೆಡಿಟ್ ಕೌನ್ಸೆಲಿಂಗ್ ಸೆಂಟರ್) ಕೇಂದ್ರ ತೆರೆಯಲಿದೆ. ಈಗಾಗಲೇ 205 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬ್ಯಾಂಕ್ ಶಾಖೆಗಳಿದ್ದು, ಇದನ್ನು 1002 ಕಡೆಗಳಿಗೆ ವಿಸ್ತರಿಸಲಾಗುವುದು. ಮುಂದಿನ ವರ್ಷ ಬ್ಯಾಂಕ್ 2.10 ಲಕ್ಷ ಮನೆಗಳನ್ನು ತಲುಪುವ ಗುರಿ ಹೊಂದಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಮ ಭಟ್ ತಿಳಿಸಿದ್ದಾರೆ.
ವೇತನ ಪಾವತಿ ಆಗ್ರಹಿಸಿ ಇಂದು
ಅತಿಥಿ ಉಪನ್ಯಾಸಕರ ಧರಣಿ
ಮಂಗಳೂರು: ವೇತನ ವಿಳಂಬ ನೀತಿ ವಿರೋಧಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಮಂಗಳೂರಿನ ಕಾಲೇಜು ಶಿಕ್ಷಣ ಜಂಟಿ ನಿರ್ದೇಶಕ ಕಚೇರಿ ಎದುರು ಮಾ.21ರಂದು ಬೆಳಗ್ಗೆ 10ರಿಂದ ಧರಣಿ ನಡೆಸಲು ನಿರ್ಧರಿಸಿದ್ದಾರೆ. ಶೀಘ್ರ ವೇತನ ನೀಡುವಂತೆ ಹಲವು ಬಾರಿ ಉನ್ನತ ಶಿಕ್ಷಣ ಸಚಿವರು, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಮಾತುಕತೆ ಕೂಡ ನಡೆಸಲಾಗಿದೆ. 20 ದಿನದಲ್ಲಿ ವೇತನ ನೀಡುವುದಾಗಿ ಭರವಸೆ ನೀಡಿದರೂ ಕಳೆದ 8 ತಿಂಗಳಿಂದ ವೇತನ ನೀಡಿಲ್ಲ. ಇದರಿಂದ ಮುಂದೆ ನಡೆಯುವ ಮಂಗಳೂರು ವಿವಿ ಪರೀಕ್ಷಾ ಕರ್ತವ್ಯ ಹಾಗೂ ಮೌಲ್ಯಮಾಪನ ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ದ.ಕ., ಉಡುಪಿ, ಕೊಡಗು ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಪ್ರಕಟಣೆ ತಿಳಿಸಿದೆ.
ಪತ್ನಿ, ತಾಯಿ ಕೊಲೆ ಯತ್ನ: ಆರೋಪಿಗೆ ಜಾಮೀನು
ಪುತ್ತೂರು: ಒಂದು ತಿಂಗಳ ಹಿಂದೆ ಪತ್ನಿ ಮತ್ತು ತಾಯಿಗೆ ಕತ್ತಿಯಿಂದ ಕಡಿದು ಕೊಲೆ ಯತ್ನ ನಡೆಸಿದ ಆರೋಪಿಗೆ ಪುತ್ತೂರಿನ ತ್ವರಿತಗತಿ ನ್ಯಾಯಾಲಯ ಬುಧವಾರ ನಿರೀಕ್ಷಣಾ ಜಾಮೀನು ನೀಡಿದೆ. ಪುತ್ತೂರು ತಾಲೂಕಿನ ಕೊಣಾಜೆ ಗ್ರಾಮದ ಪಿಲಿಗುಂಡ ನಿವಾಸಿ ದಿನೇಶ ಜಾಮೀನು ಪಡೆದ ಆರೋಪಿ. ಕಳೆದ ಫೆ.14ರಂದು ದಿನೇಶ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ತಡೆಯಲು ಬಂದ ಪತ್ನಿ ಸವಿತಾ ಮತ್ತು ತಾಯಿ ಕಮಲಾಕ್ಷಿ ಎಂಬವರಿಗೆ ಕತ್ತಿಯಿಂದ ಕಡಿದು ಕೊಲೆ ಯತ್ನ ನಡೆಸಿ ತಾನೂ ಸಾಯುವ ಪ್ರಯತ್ನ ನಡೆಸಿದ್ದರು. ಆರೋಪಿ ದಿನೇಶ ವಿರುದ್ಧ ಕೇಸು ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿದೆ.
ಜೀವ ಬೆದರಿಕೆ: ಆರೋಪಿ ಖುಲಾಸೆ
ಪುತ್ತೂರು: ಸುಮಾರು ಎರಡೂವರೆ ವರ್ಷಗಳ ಹಿಂದೆ ವ್ಯಕ್ತಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ ಆರೋಪ ಎದುರಿಸುತ್ತಿದ್ದ ಆರೋಪಿಯನ್ನು ನ್ಯಾಯಾಲಯ ಬುಧವಾರ ಖುಲಾಸೆಗೊಳಿಸಿದೆ. ಪುತ್ತೂರು ತಾಲೂಕಿನ 34 ನೆಕ್ಕಿಲಾಡಿ ಗ್ರಾಮದ ಶಾಂತಿಯಡಿ ನಿವಾಸಿ ಗಣೇಶ್ ಆರೋಪ ಮುಕ್ತಗೊಂಡವರು. ಕಳೆದ 2010 ಅ.4ರಂದು ಸ್ಥಳೀಯರಾದ ಪುಷ್ಪಕರ ಎಂಬವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆ ಒಡ್ಡಿರುವುದಾಗಿ ಆರೋಪಿಸಲಾಗಿತ್ತು. ಈ ಬಗ್ಗೆ ಕೇಸು ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ದೋಷಮುಕ್ತಗೊಳಿಸಿದೆ.
ಹಲ್ಲೆ ಆರೋಪಿಗಳ ಖುಲಾಸೆ
ಪುತ್ತೂರು: ಬಸ್ ಚಾಲಕರೊಬ್ಬರಿಗೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದ ಇಬ್ಬರನ್ನು ನ್ಯಾಯಾಲಯವು ಬುಧವಾರ ಖುಲಾಸೆಗೊಳಿಸಿದೆ. 2012 ಜು.30ರಂದು ಉಪ್ಪಿನಂಗಡಿ ಬಸ್ಸು ನಿಲ್ದಾಣದಲ್ಲಿ ಖಾಸಗಿ ಬಸ್ಸು ಚಾಲಕ ಅಬ್ದುಲ್ ಗಫೂರ್ ಎಂಬವರು ಪ್ರಯಾಣಿಕರನ್ನು ಹತ್ತಿಳಿಸುತ್ತಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ಇನ್ನೊಂದು ಬಸ್ಸಿನ ಚಾಲಕ ಜಮಾಲುದ್ದೀನ್ ಮತ್ತು ಅಪ್ಪು ಯಾನೆ ಆಶ್ರಫ್ ಎಂಬವರು ಹಲ್ಲೆ ನಡೆಸಿರುವ ಬಗ್ಗೆ ಆರೋಪಿಸಲಾಗಿತ್ತು. ಉಪ್ಪಿನಂಗಡಿ ಪೊಲೀಸರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲವು ಆರೋಪಿಗಳಿಬ್ಬರನ್ನು ಖುಲಾಸೆಗೊಳಿಸಿದೆ.