ಇಂದಿನಿಂದ ಸುರ್ಯ ದೇವಸ್ಥಾನ ಜಾತ್ರೆ
ಬೆಳ್ತಂಗಡಿ: ನಡ ಗ್ರಾಮದ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ಜಾತ್ರೆ 22ರಿಂದ 26 ರವರೆಗೆ ನಡೆಯಲಿದೆ.
ಶುಕ್ರವಾರ ಬೆಳಗ್ಗೆ ವೈದಿಕ ಕಾರ್ಯಕ್ರಮಗಳು, ರಾತ್ರಿ ಮಹಾಪೂಜೆ, ಶನಿವಾರ ಸುರ್ಯಗುತ್ತು ಮನೆಯಿಂದ ದೈವಗಳ ಭಂಡಾರ ಹೊರಡಲಿದೆ. ರಾತ್ರಿ ಉತ್ಸವ ಹೊರಟು, ವಸಂತ ಕಟ್ಟೆ ಪೂಜೆ, ನಿತ್ಯಬಲಿ ನಡೆಯಲಿದೆ. ಈ ಸಂದರ್ಭ ದೇವದಾಸ್ ಕಾಪಿಕಾಡ್ ಅವರ ಬದ್ಕದ್ ಒರಿಂಡಾ ನಾಟಕ ನಡೆಯಲಿದೆ. 24 ರಂದು ಪೂರ್ವಾಹ್ನ ಸೊಡರಬಲಿ ಉತ್ಸವ ರಾತ್ರಿ ಕರಿಕಟ್ಟೆ ಉತ್ಸವ ನಡೆಯಲಿದೆ. ಇದೇ ಸಂದರ್ಭ ಹಲವಾರು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಗಳಿಸಿದ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಖ್ಯಾತಿಯ ಮಂಗಳೂರಿನ ಜ್ಞಾನಾ ಐತಾಳ್ ನೇತೃತ್ವದ ಹೆಜ್ಜೆನಾದ ತಂಡದವರಿಂದ ಸಂಗೀತ ಮತ್ತು ನೃತ್ಯ ವೈಭವ ನಡೆಯಲಿದೆ. 25 ರಂದು ಬೆಳಗ್ಗೆ ದರ್ಶನ ಬಲಿ, ರಾತ್ರಿ ನೃತ್ಯ ಬಲಿ ಉತ್ಸವ, ರಥಕಟ್ಟೆ ಪೂಜೆ, ಭೂತಬಲಿ, ಶಯನೋತ್ಸವ ನಡೆಯಲಿದೆ. ಪೂರ್ವಾಹ್ನ ಮತ್ತು ಸಂಜೆ ಕಲ್ಲಿಕೋಟೆಯ ಮಹಿಳಾ ತಂಡದವರಿಂದ ಕೇರಳದ ಶಾಸ್ತ್ರೀಯ ನೃತ್ಯ ಚಂಡೆ ವಾದನ ಸಿಂಗಾರಿ ಮೇಳ ನಡೆಯಲಿದೆ.
26 ರಂದು ಪೂರ್ವಾಹ್ನ ಕವಾಟೋದ್ಘಾಟನೆ, ಕಲಷಾಭಿಷೇಕ, ಸಂಜೆ ಯಾತ್ರಾ ಹೋಮ, ಅವಭೃತ ಸ್ನಾನಕ್ಕೆ ಹೊರಡುವುದು, ರಾತ್ರಿ ಧ್ವಜಾವರೋಹಣ ನಡೆಯಲಿದೆ. ಬಳಿಕ ದೈವಗಳ ನೇಮ ನಡೆಯಲಿದೆ. ಈ ಎಲ್ಲಾ ದಿನಗಳಲ್ಲಿ ಮಧ್ಯಾಹ್ನ ಅನ್ನ ಸಂತರ್ಪಣೆ, ಮಧ್ಯಾಹ್ನ ಹಾಗೂ ರಾತ್ರಿ ಪೂಜೆ ನಡೆಯಲಿದೆ ಎಂದು ಆಡಳಿತ ಮೊಕ್ತೇಸರ ಸುಭಾಶ್ಚಂದ್ರ ಸುರ್ಯಗುತ್ತು ಹಾಗೂ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ. ರಾಜಶೇಖರ ಅಜ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.