ರಿಕ್ಷಾ-ಲಾರಿ ಡಿಕ್ಕಿ: 7 ಮಕ್ಕಳ ಸಹಿತ 8 ಮಂದಿಗೆ ಗಾಯ
ಉಪ್ಪಿನಂಗಡಿ: ಇಲ್ಲಿನ ಗಾಂಧಿಪಾರ್ಕ್ ಬಳಿ ರಾ.ಹೆ.ಯಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ರಿಕ್ಷಾ ಮತ್ತು ಮಿನಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿದ್ದ 7 ಮಕ್ಕಳ ಸಹಿತ 8 ಮಂದಿ ಗಾಯಗೊಂಡ ಘಟನೆ ಗುರುವಾರ ನಡೆದಿದೆ. ಇಬ್ಬರು ವಿದ್ಯಾರ್ಥಿನಿಯರು ಗಂಭೀರ ಸ್ಥಿತಿಯಲ್ಲಿದ್ದಾರೆ.
ಬೆಳಗ್ಗಿನ ವೇಳೆ ರಾಮನಗರ ಕಡೆಯ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಅಟೋ ರಿಕ್ಷಾ ಹೆದ್ದಾರಿ ಪ್ರವೇಶಿಸುತ್ತಿದ್ದಂತೆಯೇ ಅತಿ ವೇಗದಿಂದ ಬಂದ ಮಿನಿ ಲಾರಿಯು ರಿಕ್ಷಾಕ್ಕೆ ಡಿಕ್ಕಿ ಹೊಡೆಯಿತು. ಪರಿಣಾಮ ರಿಕ್ಷಾದಲ್ಲಿದ್ದ ರಾಮನಗರ ನಿವಾಸಿ ಸತೀಶ್ ಎಂಬವರ ಮಗಳು ರಕ್ಷಿತಾ ಗಂಭೀರವಾಗಿ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಈಕೆ ಉಪ್ಪಿನಂಗಡಿಯ ಸೈಂಟ್ ಮೇರಿಸ್ ಸ್ಕೂಲಿನ ಒಂದನೇ ತರಗತಿ ವಿದ್ಯಾರ್ಥಿನಿ. ಅಲ್ಲದೆ, ಉಪ್ಪಿನಂಗಡಿ ಇಂದ್ರಪ್ರಸ್ಥ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಫಾತಿಮಾ ಯಾನೆ ಷಿಫಾ ಎಂಬಾಕೆಯೂ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಈಕೆ ಹಕೀಮ್ ಎಂಬವರ ಪುತ್ರಿ.
ರಿಕ್ಷಾದಲ್ಲಿದ್ದ ಶ್ರೇಯಸ್ಸ್, ಶಮೀಜಾ, ರಝೀಯಾ, ಜಾಹೀರ್, ಜಹೀದಾ ಎಂಬವರೂ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಿಕ್ಷಾ ಚಾಲಕ ಖಾಸಿಂ ಕೂಡಾ ಗಾಯಗೊಂಡಿದ್ದು, ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.