ಸದ್ದಿಲ್ಲದೆ ಹರಿಯುತಿದೆ ಶುದ್ಧಗಂಗೆ
ಕನ್ನಡಪ್ರಭ ವಾರ್ತೆ ಮಂಗಳೂರು ಮಾ.21
ಕುಡಿಯಲು ಶುದ್ಧನೀರು ನೀಡುವುದಾಗಿ ಭರವಸೆ ನೀಡಿ, ಅದನ್ನು ವಿತರಿಸುವಲ್ಲಿ ಸರ್ಕಾರಗಳು ವಿಫಲರಾಗಿರಬಹುದು. ಆದರೆ ಖಾಸಗಿ ಸಂಸ್ಥೆಗಳು ಜನರಿಗೆ ಶುದ್ಧನೀರು ವಿತರಿಸುವಲ್ಲಿ ಹಿಂದೆ ಬಿದ್ದಿಲ್ಲ. ಗದಗದ ಹುಲಕೋಟಿಯಲ್ಲಿ ಕೆ. ಎಚ್. ಪಾಟೀಲ್ ಫೌಂಡೇಷನ್ ಶುದ್ಧನೀರಿನ ವ್ಯವಸ್ಥೆ ಮಾಡಿದರೆ, ರಾಜ್ಯದ ನೀರಿಲ್ಲದ ನಾಡಿಗೆ ಧರ್ಮಸ್ಥಳದಿಂದ ಶುದ್ಧಗಂಗೆ ವಿತರಿಸುವ ಯೋಜನೆ ನಾಲ್ಕು ವರ್ಷಗಳಿಂದಲೂ ಜಾರಿಯಲ್ಲಿದೆ.
ಹೌದು. ಗಡಸು ನೀರು, ಫ್ಲೋರೈಡ್ಯುಕ್ತ ನೀರಿನ ಸಮಸ್ಯೆಯಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 'ಧರ್ಮದ ಗಂಗೆ' ಹರಿಸುತ್ತಿದೆ. ಕೇವಲ ನಾಮಕಾವಾಸ್ತೆ ಹಣ ನಿಗದಿ ಪಡಿಸಿ ಜನರಿಗೆ ನೀರನ್ನು ಶುದ್ಧೀಕರಿಸಿ ವಿತರಿಸಲಾಗುತ್ತಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್ಕೆಆರ್ಡಿಪಿ)ಯ ಸಮುದಾಯ ಅಭಿವೃದ್ಧಿ ವಿಭಾಗ ಈ ಯೋಜನೆ ಕೈಗೆತ್ತಿಕೊಂಡಿದೆ.
2 ಗೆ 20 ಲೀಟರ್!: ಶುದ್ಧಗಂಗಾ ನೀರಿನ ಬೆಲೆ ಪ್ರತಿ ಲೀಟರ್ಗೆ ಕೇವಲ 10 ಪೈಸೆ. 20 ಲೀಟರ್ ಕ್ಯಾನ್ನ ಬೆಲೆ ರು. 2. ಈ ಬೆಲೆಯಲ್ಲಿ ಪ್ರತಿದಿನ 19,500 ಕುಟುಂಬಗಳಿಗೆ 4 ಲಕ್ಷ ಲೀಟರ್ ಶುದ್ಧಗಂಗಾ ನೀರನ್ನು ವಿತರಿಸಲಾಗುತ್ತಿದೆ. ಒಬ್ಬ ಬಳಕೆದಾರನಿಗೆ ವರ್ಷದ 360 ದಿನ ಪ್ರತಿನಿತ್ಯ 20 ಲೀಟರ್ ನೀರು ಪೂರೈಸಲಾಗುತ್ತಿದೆ. ಪ್ರಸ್ತುತ ಚಿಕ್ಕಮಗಳೂರು, ಗದಗ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳ 15 ತಾಲೂಕುಗಳ 120 ಗ್ರಾಮಗಳಲ್ಲಿ 50 ಘಟಕಗಳು ಕಾರ್ಯಾಚರಿಸುತ್ತಿವೆ.
ಹೀಗಿದೆ ಯೋಜನೆ: ಫ್ಲೋರೈಡ್ಯುಕ್ತ ನೀರಿನ ಸಮಸ್ಯೆಯಿರುವಲ್ಲಿ ಶುದ್ಧಗಂಗಾ ನೀರಿನ ಘಟಕ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ಥಾಪನೆಯಾಗುತ್ತಿದೆ. ಘಟಕ ಸ್ಥಾಪನೆಗೆ 10 ಲಕ್ಷ ವೆಚ್ಚ. ನಿವೇಶನ, ಶಾಶ್ವತ ಕಚ್ಚಾ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆಯನ್ನು ಸ್ಥಳೀಯ ಗ್ರಾಪಂ ಮಾಡಬೇಕು. ಒಟ್ಟು 50 ಘಟಕಗಳಿಗೆ 5 ಕೋಟಿ ವೆಚ್ಚ ತಗುಲಿದೆ. ಎಸ್ಕೆಆರ್ಡಿಪಿಯಿಂದ 3.50 ಕೋಟಿ, ಸ್ಥಳೀಯ ಗ್ರಾಪಂ, ಜಿಪಂ, ಮಲೆನಾಡು ಅಭಿವೃದ್ಧಿ ಮಂಡಳಿ, ಶಾಸಕರ ನಿಧಿ, ವಿಧಾನ ಪರಿಷತ್ ಸದಸ್ಯರ ನಿಧಿ ಹೀಗೆ 1.50 ಕೋಟಿ ಅನುದಾನ ಬಳಸಿ ಘಟಕ ಸ್ಥಾಪಿಸಲಾಗಿದೆ. ಘಟದಲ್ಲಿ ಇಬ್ಬರು ಪ್ರೇರಕರು ನೀರು ನಿರ್ವಹಣೆ ನೋಡಿಕೊಳ್ಳುತ್ತಾರೆ.
ವಿದೇಶಿ ತಾಂತ್ರಿಕತೆ: ಶುದ್ಧೀಕರಣ ಘಟಕಕ್ಕೆ ಬೇಕಾಗುವ ಯಂತ್ರೋಪಕರಣಗಳನ್ನು ನಾರ್ವೆಯ ಮಾಲ್ತೆವಿಂಜೆ ಡಿಡಬ್ಲುಎಸ್ ಮತ್ತು ಅಮೆರಿಕದ ಎಚ್ಟುಒ ಫಾರ್ ಹ್ಯುಮ್ಯಾನಿಟಿಯಿಂದ ತರಿಸಿಕೊಳ್ಳಲಾಗಿದೆ. ಈ ಸಂಸ್ಥೆಗಳು ಯಂತ್ರೋಪಕರಣಗಳ ಪೂರೈಕೆ ಹಾಗೂ ನಿರ್ವಹಣೆಯನ್ನು ನೋಡಿಕೊಳ್ಳುತ್ತಿವೆ. ಪ್ರತಿ ಗಂಟೆಗೆ ಸಾವಿರ ಲೀಟರ್ ನೀರನ್ನು ಶುದ್ಧೀಕರಿಸುವ ಸಾಮರ್ಥ್ಯ ಈ ಯಂತ್ರಗಳಿಗಿದ್ದು, ಒಂದು ಘಟಕದಿಂದ ಪ್ರತಿನಿತ್ಯ 7 ರಿಂದ 12 ಸಾವಿರ ಲೀ. ಶುದ್ಧ ನೀರು ವಿತರಿಸಲಾಗುತ್ತಿದೆ.
ರಾಜ್ಯ ಸರ್ಕಾರದಿಂದಲೂ ಬೇಡಿಕೆ: ಶುದ್ಧಗಂಗಾ ಘಟಕಗಳ ಕಾರ್ಯನಿರ್ವಹಣೆ ನೋಡಿ ರಾಜ್ಯ ಸರ್ಕಾರವೂ ತುಮಕೂರಿನಲ್ಲಿ ಘಟಕ ತೆರೆಯುವಂತೆ ಬೇಡಿಕೆ ಸಲ್ಲಿಸಿದ್ದು, ಈ ವರ್ಷ ಘಟಕ ಸ್ಥಾಪಿಸಲಾಗುತ್ತಿದೆ. ಇದಲ್ಲದೇ ಹಲವು ಸಂಘ ಸಂಸ್ಥೆಗಳು ತಮ್ಮ ಜಿಲ್ಲೆಯಲ್ಲಿ ಘಟಕ ಆರಂಭಿಸುವಂತೆ ಮನವಿ ಸಲ್ಲಿಸುತ್ತಿವೆ. (ಫ್ಲೊರೈಡ್ ಸಮಸ್ಯೆ ಇರುವಲ್ಲಿ ಘಟಕದ ಕುರಿತು ಮಾಹಿತಿಗೆ ಯೋಜನಾಧಿಕಾರಿ 9449762633, ಯೋಜನಾ ನಿರ್ದೇಶಕರು 9448622805 ಸಂಪರ್ಕಿಸಬಹುದು)
- ರಾಘವೇಂದ್ರ ಅಗ್ನಿಹೋತ್ರಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.