ಸುದ್ದಿ ಸಂಕ್ಷೇಪ
24ರಂದು ಭರತ್ ಕುಮಾರ್ಗೆ ಸುವರ್ಣ ರಂಗ ಸಮ್ಮಾನ್ ಪ್ರದಾನ
ಮಂಗಳೂರು: ಖ್ಯಾತ ರಂಗಕರ್ಮಿ ಸದಾನಂದ ಸುವರ್ಣ ಹೆಸರಿನಲ್ಲಿ ಕಾಂತಾವರ ಕನ್ನಡ ಸಂಘ ಕೊಡಮಾಡುತ್ತಿರುವ ಪ್ರತಿಷ್ಠಿತ 'ಸುವರ್ಣ ರಂಗ ಸಮ್ಮಾನ್ ಪ್ರಶಸ್ತಿ-2013' ಪ್ರದಾನ ಸಮಾರಂಭ ಕಾಂತಾವರದಲ್ಲಿ 24ರಂದು ಸಂಜೆ 3 ಗಂಟೆಗೆ ನಡೆಯಲಿದೆ.
ಕಾಂತಾವರ ಕನ್ನಡ ಸಂಘದ ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನದ ಪಂಪ ಮಹಾಕವಿ ಸಭಾ ಭವನದಲ್ಲಿ ಪ್ರಸಿದ್ಧ ರಂಗಕರ್ಮಿ ಡಾ. ಭರತ್ ಕುಮಾರ್ ಪೊಲಿಪು ಅವರಿಗೆ ರು. 10,000 ನಗದು, ಪ್ರಶಸ್ತಿಪತ್ರ, ಸನ್ಮಾನಸಹಿತ ಸುವರ್ಣರಂಗ ಸಮ್ಮಾನ್ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಡಾ. ಬಿ.ಎ.ಸನದಿ ಪ್ರದಾನಿಸಲಿದ್ದಾರೆ. ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕಾಂತಾವರ ಕನ್ನಡ ಸಂಘದ ಕಾರ್ಯಾಧ್ಯಕ್ಷ ಡಾ. ನಾ. ಮೊಗಸಾಲೆ ಅಧ್ಯಕ್ಷತೆ ವಹಿಸುವರು. ಮೂಡುಬಿದಿರೆ ವರ್ಧಮಾನ ಪ್ರಶಸ್ತಿ ಪೀಠದ ಅಧ್ಯಕ್ಷ ಸಿ.ಕೆ.ಪಡಿವಾಳ್ ಉಪಸ್ಥಿತರಿರುತ್ತಾರೆ.
ಕನ್ನಡ ರಂಗಭೂಮಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತ ಬಂದಿರುವ ರಂಗ ದಿಗ್ದರ್ಶಕ ಸದಾನಂದ ಸುವರ್ಣ ಅವರ ಅನುಸರಣೀಯ ರಂಗ ಕಾಳಜಿ, ಬದ್ಧತೆ, ಅನನ್ಯ ಪ್ರತಿಭೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ನಿಟ್ಟಿನಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಈ ಪ್ರಶಸ್ತಿಯನ್ನು 2008ರಿಂದ ಕೊಡಮಾಡಲಾಗುತ್ತಿದೆ.
2008ರಲ್ಲಿ ಮೊದಲ ಪ್ರಶಸ್ತಿಯನ್ನು ನಟಿ, ರಂಗ ಗಾಯಕಿ ಕಲ್ಪನಾ ನಾಗಾನಾಥ್ ಬೆಂಗಳೂರು, 2009ರಲ್ಲಿ ಡಾ. ಶ್ರೀಪಾದ ಭಟ್, 2010ರಲ್ಲಿ ಪ್ರಸಾದ್ ರಕ್ಷಿದಿ, 2011ರಲ್ಲಿ ಜೀವನರಾಂ ಸುಳ್ಯ, 2012ರಲ್ಲಿ ಕೋಟಿಗಾನ ಹಳ್ಳಿ ರಾಮಯ್ಯಗೆ ನೀಡಲಾಗಿದೆ.
ಈ ಬಾರಿ ಹೊರನಾಡಿನಲ್ಲಿದ್ದುಕೊಂಡು ಕನ್ನಡ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಡಾ. ಭರತ್ ಕುಮಾರ್ ಹೆಸರನ್ನು ಪ್ರಶಸ್ತಿಯ ಆಯ್ಕೆ ಸಮಿತಿ ಘೋಷಿಸಿದೆ.
ಈಶ್ವರಮಂಗಲ: ಸರಣಿ ಕಳ್ಳತನ
ಪುತ್ತೂರು: ಐದು ಅಂಗಡಿಗಳ ಬೀಗ ಮುರಿದು ಒಳನುಗ್ಗಿದ ಕಳ್ಳರು ಸರಣಿ ಕಳ್ಳತನ ನಡೆಸಿದ ಘಟನೆ ಪುತ್ತೂರು ತಾಲೂಕಿನ ಈಶ್ವರಮಂಗಲ ಪೇಟೆಯಲ್ಲಿ ಬುಧವಾರ ರಾತ್ರಿ ನಡೆದಿದೆ. ಈಶ್ವರಮಂಗಲ ಜಂಕ್ಷನ್ ಬಳಿಯಿರುವ ಆಶೀಸ್ ಸುಬ್ರಹ್ಮಣ್ಯ ಕುಂಜತ್ತಾಯ ಎಂಬವರಿಗೆ ಸೇರಿದ ಮೊಬೈಲ್ ಅಂಗಡಿಯಿಂದ ರು. 8500 ನಗದು, ಅಲ್ಲೇ ಪಕ್ಕದಲ್ಲಿರುವ ರವೀಂದ್ರ ಮಣಿಲತ್ತಾಯ ಎಂಬವರ ಅಂಗಡಿಯಿಂದ ಸುಮಾರು ರು. 2500 ನಗದು, ಜಯರಾಮ ರೈ ಎಂಬವರಿಗೆ ಸೇರಿದ ಗಜಾನನ ಸ್ಟೋರ್ನಿಂದ ಸುಮಾರು ರು. 5500 ನಗದು ಕಳವಾಗಿದೆ. ಸದಾನಂದ ಎಂಬವರಿಗೆ ಸೇರಿದ ಅಂಗಡಿಯಿಂದ ಮತ್ತು ಡಾ. ಉದನೇಶ್ವರ ಭಟ್ ಅವರ ಚಿಕಿತ್ಸಾಲಯದಿಂದ ಚಿಲ್ಲರೆ ಹಣವನ್ನು ಕಳ್ಳರು ದೋಚಿರುವುದಾಗಿ ತಿಳಿದು ಬಂದಿದೆ. ಈ ಐದು ಅಂಗಡಿಗಳ ಬೀಗ ಮುರಿದು ಒಳನುಗ್ಗಿದ ಕಳ್ಳರು ಹಣವನ್ನು ಮಾತ್ರ ಕಳವುಗೈದಿದ್ದು, ಉಳಿದ ಯಾವುದೇ ಸೊತ್ತುಗಳನ್ನು ದೋಚಿಲ್ಲ. ಮೊಬೈಲ್ ಅಂಗಡಿಯೊಳಗೆ ಬೆಲೆಬಾಳುವ ಮೊಬೈಲ್ ಸೆಟ್ಗಳಿದ್ದರೂ ಕಳ್ಳರು ಅದಾವುದನ್ನೂ ಕಳವುಗೈದಿಲ್ಲ. ಅಲ್ಲದೆ, 'ಅಕ್ಷಯ' ದಿನಸಿ ಅಂಗಡಿಯ ಶೆಟರ್ ಬೀಗ ಮುರಿದು ಕಳ್ಳರು ಕಳವಿಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ. ಮುರಿದ ಬೀಗಗಳನ್ನು ಅಂಗಡಿಯ ಪಕ್ಕದಲ್ಲೇ ಕಳ್ಳರು ಎಸೆದು ಹೋಗಿದ್ದಾರೆ.
ಬಸ್-ಟಿಪ್ಪರ್ ಡಿಕ್ಕಿ
ಸುಳ್ಯ: ಕನಕಮಜಲು ಗ್ರಾಮದ ಸುಣ್ಣಮೂಲೆ ಮಸೀದಿಯ ಬಳಿ ಸುಳ್ಯದಿಂದ ಪುತ್ತೂರಿಗೆ ಹೋಗುವ ಕೆ.ಎಸ್.ಆರ್.ಟಿ.ಸಿ. ಬಸ್ಮತ್ತು ಕೆ.ಎಂ.ಸಿ. ಟಿಪ್ಪರ್ ಮುಖಾಮುಖಿ ಡಿಕ್ಕಿಯಾದ ಘಟನೆ ವರದಿಯಾಗಿದೆ. ಈ ಘಟನೆಯಲ್ಲಿ ಹಾವೇರಿ ಮೂಲದವರಾದ ಮಂಜು, ಗಂಗಮ್ಮ, ರಾಣಿ, ಲಕ್ಷ್ಮಿ, ಬಸ್ ಚಾಲಕ ಮೊಹಿಯ್ಯುದ್ದೀನ್ ಸಾಬ್ ಗಾಯಗೊಂಡಿದ್ದಾರೆ. ಅವರನ್ನು 108 ಆ್ಯಂಬುಲೆನ್ಸ್ನಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾತು.
ಚಿನ್ನದ ಸರವೆಂದು ನಂಬಿಸಿ ವಂಚನೆ
ಸುಳ್ಯ: ಚಿನ್ನದ ಲೇಪನ ಹೊಂದಿದ ಸರ ಎಂದು ನಂಬಿಸಿ ಫ್ಯಾನ್ಸಿ ಸರವನ್ನು ನೀಡಿ ವಂಚಿಸಿದ ಪ್ರಕರಣ ಅಡ್ಕಾರಿನಿಂದ ವರದಿಯಾಗಿದೆ. ಅಡ್ಕಾರ್ ಜನತಾ ಕಾಲೋನಿ ನಿವಾಸಿ, ಗೇರುಬೀಜ ವ್ಯಾಪಾರ ಮಾಡುತ್ತಿರುವ ವ್ಯಕ್ತಿಯೊಬ್ಬರ ಮನೆಗೆ ಶುಕ್ರವಾರ ಮಹಿಳೆಯರು ಮಾತ್ರ ಮನೆಯಲ್ಲಿದ್ದ ಸಂದರ್ಭ ಆಗಮಿಸಿದ್ದ ವಂಚಕರ ತಂಡ ತಾವು ಮಡಿಕೇರಿಯಿಂದ ಬಂದಿರುವುದಾಗಿ ತಿಳಿಸಿ, ಚಿನ್ನದ ಲೇಪನವಿರುವ ಸರವನ್ನು ಕೇವಲ 1000ಕ್ಕೆ ನೀಡುತ್ತೇವೆ ಹಾಗೂ ತಿಂಗಳಿಗೆ 900 ಬಡ್ಡಿ ದರದಲ್ಲಿ 30,000ದವರೆಗೂ ಲೋನ್ ನೀಡುತ್ತೇವೆ ಎಂದು ಹೇಳಿ ಮನೆಯವರನ್ನು ನಂಬಿಸಿದ್ದಾರೆ. ಅಪರಿಚಿತರ ಮಾತನ್ನು ನಂಬಿದ ಮಹಿಳೆಯರು 1000ಕ್ಕೆ ಸರವನ್ನು ಖರೀದಿಸಿದ್ದು, ಅದಕ್ಕಾಗಿ ವಂಚಕರು ನಕಲಿ ರಸೀದಿ ಪತ್ರವನ್ನು ನೀಡಿದ್ದಾರೆ. ಆದರೆ ಸರವನ್ನು ಉಪಯೋಗಿಸದ ಎರಡು ದಿನದಲ್ಲೇ ಅದು ತನ್ನ ಬಣ್ಣ ಕಳೆದುಕೊಂಡಾಗಲೇ ಗೊತ್ತಾಗಿದ್ದು ಮೋಸ ಹೋಗಿದ್ದೇವೆಂದು. ಕೂಡಲೇ ಮನೆಯವರು ರಸೀದಿಯಲ್ಲಿ ನೀಡಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ಅದು ಸ್ವಿಚ್ ಆಫ್ ಆಗಿದೆ. ಲೋನ್ ಕೊಡುತ್ತೇವೆಂದು ಹೇಳಿ ಹೋದವರು ಮತ್ತೆ ಬಂದಿಲ್ಲ.
ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ
ಬೈಂದೂರು: ಇಲ್ಲಿನ ಯಡ್ತೆರೆ ಗ್ರಾಮದ ಬಾಳೆಹಿತ್ಲು ಎಂಬಲ್ಲಿ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಮೃತರು ರಾಧಾ (28), ಈಕೆಗೆ ವರ್ಷಗಳ ಹಿಂದೆ ನಾಯ್ಕನಕಟ್ಟೆ ಜನಾರ್ದನ ದೇವಾಡಿಗ ಎಂಬವರೊಂದಿಗೆ ಮದುವೆಯಾಗಿದ್ದು, ಯಾವುದೋ ಕಾಯಿಲೆಯಿಂದ ಬಳಲುತ್ತಿದ್ದರು. ಅದಕ್ಕೆ ಚಿಕಿತ್ಸೆ ಕೊಡಿಸಿದರೂ ಗುಣವಾಗದೆ ಇದ್ದದುರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ರಾತ್ರಿ 8.30 ಗಂಟೆಗೆ ವಿಷ ಪದಾರ್ಥ ಸೇವಿಸಿದ್ದರು. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದರು. ಈ ಬಗ್ಗೆ ಮೃತರ ಸೋದರ ಮಾವ ಕೃಷ್ಣ ದೇವಾಡಿಗ ಎಂಬವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕನಿಗೆ ಹಲ್ಲೆ
ಪುತ್ತೂರು: ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಎಂಬಲ್ಲಿ ಇಬ್ಬರು ಯುವಕ ನಡುವೆ ಹೊಡೆದಾಟ ಸಂಭವಿಸಿ ಓರ್ವ ಗಾಯಗೊಂಡ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ಬಡಗನ್ನೂರು ಗ್ರಾಮದ ಒಳತ್ತಡ್ಕ ನಿವಾಸಿ ಪ್ರಸಾದ್ (33) ಗಾಯಗೊಂಡಿದ್ದು, ಪುತ್ತೂರಿನ ಆದರ್ಶ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ತನಗೆ ನವೀನ್ ಕೈಕಾರ ಎಂಬವರು ಹಲ್ಲೆ ನಡೆಸಿರುವುದಾಗಿ ಗಾಯಾಳು ಆರೋಪಿಸಿದ್ದಾರೆ. ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.