ಸುದ್ದಿ ಸಂಕ್ಷೇಪ
ಅನಧಿಕೃತ ವಿದ್ಯುತ್ ಸಂಪರ್ಕ ಪತ್ತೆ
ಸುಳ್ಯ: ಮಂಗಳೂರಿನ ಮೆಸ್ಕಾಂ ಜಾಗೃತಿ ದಳ ಅಧಿಕಾರಿಗಳು ಸುಳ್ಯದಲ್ಲಿ ದಾಳಿ ನಡೆಸಿ ಎರಡು ಕಟ್ಟಡಗಳಲ್ಲಿ ಅನಧಿಕೃತ ಸಂಪರ್ಕವನ್ನು ಪತ್ತೆ ಹಚ್ಚಿದ್ದಾರೆ. ಮೆಸ್ಕಾಂ ಜಾಗೃತ ದಳ ತಂಡ ಸುಳ್ಯದ ಖಾಸಗಿ ಬಸ್ ನಿಲ್ದಾಣದ ಸಮೀಪದಲ್ಲಿರುವ ಡಿ.ಎಂ. ಕಾಂಪ್ಲೆಕ್ಸ್ ಮೇಲೆ ದಾಳಿ ನಡೆಸಿತು. ಕಾಂಪ್ಲೆಕ್ಸ್ನ ಎರಡನೇ ಮತ್ತು ಮೂರನೇ ಮಹಡಿಗೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿರುವುದು ಪತ್ತೆಯಾಯಿತು. ಪ್ರಕರಣ ದಾಖಲಿಸಿದ ಜಾಗೃತ ದಳ ಅಧಿಕಾರಿಗಳು ಕಟ್ಟಡ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅದೇ ರೀತಿ, ಸಮೀಪದ ಶಿವ ಕೃಪಾ ಕಲ್ಯಾಣ ಮಂಟಪಕ್ಕೆ ಸಂಬಂಧಿಸಿದ ಎರಡು ಮಹಡಿಗೂ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿರುವುದು ಕಂಡು ಬಂದಿದ್ದು, ಅವರಿಗೂ ನೋಟಿಸ್ ಜಾರಿ ಮಾಡಲಾಗಿದೆ.
ಜಿಲ್ಲಾ ಯುವ ಕಾಂಗ್ರೆಸ್ ಮುಖಂಡಗೆ ಜೀವ ಬೆದರಿಕೆ
ಮಂಗಳೂರು: ನಗರದ ಎಂ.ಜಿ.ರಸ್ತೆಯ ಎಂಪೈರ್ ಮಾಲ್ನ 3ನೇ ಮಹಡಿಯಲ್ಲಿರುವ ಫ್ಯಾಮಿಲಿ ರೆಸ್ಟೋರೆಂಟ್ ಮಾಲಕ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಗೆ 20 ಮಂದಿ ತಂಡ ಜೀವಬೆದರಿಕೆ ಒಡ್ಡಿದ ಘಟನೆ ಗುರುವಾರ ವರದಿಯಾಗಿದೆ. ಬುಧವಾರ ರಾತ್ರಿ ರೆಸ್ಟೋರೆಂಟ್ ಬಳಿ ಬಂದ ತಂಡ ನಿಂದಿಸಿ ಜೀವ ಬೆದರಿಕೆ ಹಾಕಿದೆ ಎಂದು ಅವರು ಬರ್ಕೆ ಪೊಲೀಸರಿಗೆ ದೂರು ನೀಡಿದ್ದಾರೆ. ರೆಸ್ಟೋರೆಂಟ್ನಲ್ಲಿ ಡಿಜೆ ಹಾಕಿ ಪಾರ್ಟಿ ನಡೆಸುತ್ತಿದ್ದರು ಎಂಬ ಆರೋಪದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ದಾಳಿಗೆ ಮುಂದಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪಿಯುಸಿ ಪರೀಕ್ಷೆ: 210 ಮಂದಿ ಗೈರು
ಮಂಗಳೂರು: ಜಿಲ್ಲೆಯಲ್ಲಿ ಗುರುವಾರ ನಡೆದ ದ್ವಿತೀಯ ಪಿಯುಸಿ ರಾಜ್ಯಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ಪರೀಕ್ಷೆಯಲ್ಲಿ ಒಟ್ಟು 210 ಮಂದಿ ವಿದ್ಯಾರ್ಥಿಗಳು ಗೈರಾಗಿದ್ದಾರೆ. ರಾಜ್ಯಶಾಸ್ತ್ರ ಪರೀಕ್ಷೆಗೆ ಒಟ್ಟು 6986 ಮಂದಿಯಲ್ಲಿ ಹಾಜರಾಗಿದ್ದು 6794, 192 ಮಂದಿ ಗೈರಾಗಿದ್ದರು.
ಸಂಖ್ಯಾಶಾಸ್ತ್ರ ಪರೀಕ್ಷೆಗೆ ಒಟ್ಟು 4519 ಮಂದಿಯಲ್ಲಿ 4491 ಮಂದಿ ಹಾಜರಾಗಿದ್ದು, 28 ಮಂದಿ ಗೈರಾಗಿದ್ದಾರೆ ಎಂದು ಪಿಯು ಬೋರ್ಡ್ ಪ್ರಕಟಣೆ ತಿಳಿಸಿದೆ.
ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ಆರ್.ವಿ. ಜತ್ತನ್ನ ಅಮಾನತು
ಬಂಟ್ವಾಳ: ಇಲ್ಲಿನ ಪುರಸಭೆಯ ಮುಖ್ಯಾಧಿಕಾರಿ ಆರ್.ವಿ. ಜತ್ತನ್ನ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಇತ್ತೀಚೆಗೆ ನಡೆದ ಪುರಸಭಾ ಚುನಾವಣಾ ಸಂದರ್ಭದಲ್ಲಿ ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿ ಫಲಾನುಭವಿಗಳಿಗೆ ಕಪಾಟು ವಿತರಿಸಿದ ಆರೋಪ ಇವರ ಮೇಲಿತ್ತು. ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ತೆರವಾಗಿರುವ ಹುದ್ದೆಗೆ ಪಾಣೆಮಂಗಳೂರು ನಾಡಕಚೇರಿಯ ಉಪತಹಸೀಲ್ದಾರ್ ರೋಹಿನಾಥ್ ಅವರನ್ನು ಪ್ರಭಾರ ಹುದ್ದೆಯಲ್ಲಿ ಮುಂದುವರೆಸಲಾಗಿದೆ.
ವಾಹನ ಡಿಕ್ಕಿ: ಮಹಿಳೆ ಸಾವು
ಮಂಗಳೂರು: ಸುರತ್ಕಲ್ ಸಮೀಪದ ಹೊಸಬೆಟ್ಟು ಎಂಬಲ್ಲಿ ಪಿಕಅಪ್ ವಾಹನವೊಂದು ಡಿಕ್ಕಿಯಾಗಿ ಮಹಿಳೆಯೊಬ್ಬರು ಸಾವಿಗೀಡಾದ ಘಟನೆ ಗುರುವಾರ ರಾತ್ರಿ ನಡೆದಿದೆ. ಕುಳಾಯಿ ಬಾಡಿಗೆ ಮನೆ ನಿವಾಸಿ ದೇವಕಿ ಮೃತರು. ಡಿಕ್ಕಿ ಹೊಡೆದ ಪಿಕಅಪ್ ವಾಹನ ಕಣ್ಣೂರು ಕಡೆ ತೆರಳಿದೆ. ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇಂದಿನಿಂದ ವಸಂತ ವೇದ ಶಿಬಿರ
ಮೂಲ್ಕಿ: ಕಟೀಲಿನ ಶ್ರೀ ದುರ್ಗಾ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಮುಂಬೈನ ಸಂಜೀವಿನಿ ಟ್ರಸ್ಟ್ನ ಸಹಯೋಗದೊಂದಿಗೆ ಏ.22ರಿಂದ ಕಟೀಲಿನ ಅಧ್ಯಯನ ಕೇಂದ್ರದಲ್ಲಿ ಉಪನೀತ ವಟುಗಳಿಗೆ 21 ದಿನಗಳ ವಸಂತ ವೇದ ಶಿಬಿರವು ವೈಷ್ಣವ ಸಂಪ್ರದಾಯದಲ್ಲಿ ಜರುಗಲಿದೆ. ಆಸಕ್ತರು ಏ.10ರೊಳಗೆ ಪ್ರಾಂಶುಪಾಲರು, ಶ್ರೀ ದುರ್ಗಾ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ, ಕಟೀಲು- 574148 ಇಲ್ಲಿಗೆ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 0824- 2200467, ಮೊ. 9731142157ನ್ನು ಸಂಪರ್ಕಿಸಬಹುದು.
ಇಂದು ವಿಶ್ವ ಜಲ ದಿನಾಚರಣೆ
ಮಂಗಳೂರು: ಮುಕ್ಕ ಶ್ರೀನಿವಾಸ ಎಂಜಿನಿಯರಿಂಗ್ ಕಾಲೇಜಿನಲ್ಲಿ 'ವಿಶ್ವ ಜಲ ದಿನ-2013' ಆಯೋಜಿಸಲಾಗಿದೆ ಎಂದು ಕಾಲೇಜು ಪ್ರಾಂಶುಪಾಲ ಡಾ.ಶ್ರೀಪ್ರಕಾಶ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 22ರಂದು ಬೆಳಗ್ಗೆ 10ಕ್ಕೆ ವಿಶ್ವ ಜಲ ದಿನ ಸಮಾರಂಭದಲ್ಲಿ ಎಂಐಟಿ ಮಣಿಪಾಲ್ನ ಸಿವಿಲ್ ಎಂಜಿನಿಯರಿಂಗ್ ವಿಭಾಗ ಪ್ರೊಫೆಸರ್ ಡಾ.ಉದಯ ಶಂಕರ್ ಆಗಮಿಸುವರು. 23ರಂದು ಬೆಳಗ್ಗೆ 9.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, 23ರಂದು ಬೆಳಗ್ಗೆ 9.30ರಂದು ರಾಷ್ಟ್ರ ಮಟ್ಟದ ತಾಂತ್ರಿಕ ಸ್ಪರ್ಧೆ ಜರುಗಲಿದೆ. ಮಂಗಳೂರು ಆದಾಯ ತೆರಿಗೆ ಇಲಾಖಾ ಆಯುಕ್ತ ಲಕ್ಷ್ಮೀ ಹಂದೆ ಪುರಿ ಭಾಗವಹಿಸುವರು. ಗೋವಾ, ತಮಿಳ್ನಾಡು, ಕೇರಳ ರಾಜ್ಯಗಳಿಂದ ಸುಮಾರು 2 ಸಾವಿರ ಮಂದಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಇಂದು ವಿದ್ಯುತ್ ಇಲ್ಲ
ಮಂಗಳೂರು: 110/11 ಕೆವಿ ಕುಲಶೇಖರ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಅಶೋಕನಗರ, ನಂತೂರು, ಇಂಡಸ್ಟ್ರಿಯಲ್ ಏರಿಯಾ, ಶಕ್ತಿನಗರ, ಕುಡುಪು ಮತ್ತು ಕೆನರಾ ವರ್ಕ್ಸ್ಶಾಪ್ ಫೀಡರ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಮಾ.22ರಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಮರೋಳಿ, ಕುಲಶೇಖರ, ನಂತೂರು, ಇಂಡಸ್ಟ್ರಿಯಲ್ ಏರಿಯಾ, ಯೆಯ್ಯಾಡಿ, ಶಕ್ತಿನಗರ, ಕುಡುಪು, ಮಲ್ಲಿಕಟ್ಟೆ ವ್ಯಾಪ್ತಿಯ ಸರ್ಕ್ಯೂಟ್ ಹೌಸ್, ಕದ್ರಿ, ಶಿವಭಾಗ್, ತಾರೆತೋಟ ಹಾಗೂ ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.