ಅನಾರೋಗ್ಯ ಪೀಡಿತ ಬಾಲಕನ ನೆರವಿಗಾಗಿ ಇಂದು ಹಿರೇಬಂಡಾಡಿಯಲ್ಲಿ ಕ್ರಿಕೆಟ್
ಪುತ್ತೂರು: ಕೃತಿಕ್ ಎಂಬ ಬಾಲಕನ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ನೆರವು ನೀಡುವ ಉದ್ದೇಶದಿಂದ ಜಯಕರ್ನಾಟಕ ಹಿರೇಬಂಡಾಡಿ ಘಟಕದ ವತಿಯಿಂದ ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಶುಕ್ರವಾರ ಹಿರೇಬಂಡಾಡಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯಲಿದೆ ಎಂದು ಘಟಕದ ಅಧ್ಯಕ್ಷ ಲೋಕೇಶ ಗೌಡ ಪಾಲೆತ್ತಾಡಿ ತಿಳಿಸಿದ್ದಾರೆ.
ಅವರು ಮಂಗಳವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ನೂಜಿಯ ತುಳಸಿ ಎಂಬವರ 4 ವರ್ಷದ ಕೃತಿಕ್ ಎನ್ನುವ ಬಾಲಕ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾನೆ.
ಆತನ ಶಸ್ತ್ರ ಚಿಕಿತ್ಸೆಗೆ ಸುಮಾರು ರು. 4 ಲಕ್ಷದ ಅಗತ್ಯವಿದ್ದು, ಆತನ ಕುಟುಂಬ ಈ ಮೊತ್ತವನ್ನು ಭರಿಸುವ ಸ್ಥಿತಿಯಲ್ಲಿ ಇಲ್ಲ.
ಈತನಿಗೆ ಏನಾದರೂ ನೆರವು ನೀಡಬೇಕೆನ್ನುವ ಸದುದ್ದೇಶದಿಂದ ಸರ್ವರ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಜಯಕರ್ನಾಟಕ ಪುತ್ತೂರು ವಲಯದ ಅಧ್ಯಕ್ಷ ಪ್ರಕಾಶ್ ಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕ್ರಿಕೆಟ್ ಪಂದ್ಯಾಟವನ್ನು ಭಾರತೀಯ ರಿಸರ್ವ್ ಬ್ಯಾಂಕಿನ ಉತ್ತರ ವಲಯದ ನಿರ್ದೇಶಕ ನವೀನ್ ಭಂಡಾರಿ ಉದ್ಘಾಟಿಸಲಿದ್ದಾರೆ.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಜಯಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಸುರೇಂದ್ರನಾಥ್ ಆಳ್ವ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಲೋಕೇಶ್ ಹೆಗ್ಡೆ, ಪುತ್ತೂರು ಘಟಕದ ಕಾರ್ಯಾಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಬಜತ್ತೂರು ಘಟಕದ ಅಧ್ಯಕ್ಷ ಉಮ್ಮರ್ ಕೆಮ್ಮಾರ, ಪುತ್ತೂರು ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ತಾ.ಪಂ. ಸದಸ್ಯೆ ಜೋಹರಾ ನಿಸಾರ್ ಅಹಮ್ಮದ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಘಟಕದ ಪದಾಧಿಕಾರಿಗಳಾದ ನಿಸಾರ್ ಮುರ, ಸೋಮನಾಥ್, ಇಬ್ರಾಹಿಂ ಮತ್ತು ಸಮೀರ್ ಮುರ ಉಪಸ್ಥಿತರಿದ್ದರು.