ಅಬೂಬಕ್ಕರ್ ಗನ್ಮ್ಯಾನ್ ಮೇಲೆ ದಾಳಿ
ಕ.ಪ್ರ.ವಾರ್ತೆ ಮಂಗಳೂರು ಮಾ.22
ಬೈಕಂಪಾಡಿ ಅಂಗರಗುಂಡಿ ಮಸೀದಿ ಬಳಿ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರ ಗನ್ಮ್ಯಾನ್ ಮೇಲೆ ಉದ್ರಿಕ್ತ ಗುಂಪೊಂದು ದಾಳಿ ನಡೆಸಿದ್ದು, ರಕ್ಷಣೆಗೆ ಗನ್ಮ್ಯಾನ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ನಿಗಮದ ಮಾಜಿ ಅಧ್ಯಕ್ಷ ಎನ್.ಬಿ. ಅಬೂಬಕ್ಕರ್ ಶುಕ್ರವಾರ ಮಧ್ಯಾಹ್ನ ಎಂದಿನಂತೆಯೇ ಅಂಗರಗುಂಡಿ ಮಸೀದಿಗೆ ಪ್ರಾರ್ಥನೆಗೆ 1 ಗಂಟೆಗೆ ಹೋಗಿದ್ದರು.
ಅವರ ಇನ್ನೋವಾ ವಾಹನ ಮಸೀದಿ ಹೊರಭಾಗದಲ್ಲಿ ಪಾರ್ಕ್ ಮಾಡಿದ್ದು ಗನ್ ಮ್ಯಾನ್ ರಂಜಿತ್ ಅಲ್ಲಿಯೇ ನಿಂತಿದ್ದರು. ಇದೇ ವೇಳೆಗೆ ಸ್ಥಳೀಯ ಇಸ್ಮಾಯಿಲ್ ಬೈಕ್ನಲ್ಲಿ ಬಂದು ಇನ್ನೋವಾ ವಾಹಕ್ಕೆ ಗುದ್ದಿದ್ದಾನೆ. ಆಗ ಗನ್ಮ್ಯಾನ್ ಮತ್ತು ಇಸ್ಮಾಯಿಲ್ ನಡುವೆ ಮಾತಿನ ಚಕಮಕಿ ನಡೆದಿದೆ.
ಇದನ್ನು ಅಲ್ಲಿನ ಯುವಕರ ಗುಂಪು ಗಮನಿಸಿದೆ. ಇಸ್ಮಾಯಿಲ್ ನಮಾಜಿಗೆಂದು ಮಸೀದಿ ಒಳಗೆ ಹೋದಾಗ ಹೊರಗಡೆ 25ಕ್ಕೂ ಹೆಚ್ಚಿನ ಜನರಿದ್ದ ಗುಂಪು ಗನ್ಮ್ಯಾನ್ಗೆ ಮುತ್ತಿಗೆ ಹಾಕಿದೆ. 'ನಮ್ಮ ಮಸೀದಿ ಬಳಿ ನಿನಗೇನು ಕೆಲಸ, ನಮ್ಮವರಿಗೆ ಬೈಯಲು ನೀನ್ಯಾರು, ನಮ್ಮನ್ನು ಬೆದರಿಸುತ್ತೀಯಾ?' ಎಂದು ಮುಂದೊತ್ತಿ ಬಂದವರೇ ಗನ್ಮ್ಯಾನ್ ಮೇಲೆ ಕೈ ಮಾಡಿದ್ದಾರೆ.
ಆಗ ಆತ್ಮ ರಕ್ಷಣೆಗಾಗಿ ಗನ್ಮ್ಯಾನ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಗಲಾಟೆ ನೋಡಿದ ಅಬೂಬಕ್ಕರ್ ತನ್ನ ಬೆಂಬಲಿಗರನ್ನು ಕರೆದು ಗನ್ಮ್ಯಾನ್ ರಕ್ಷಣೆಗೆ ಕಳುಹಿಸುವಷ್ಟರಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಗಾಳಿಯಲ್ಲಿ ಗುಂಡು ಹಾರಿಸಿದ ತಕ್ಷಣ ಗಲಾಟೆ ಮಾಡುತ್ತಿದ್ದ ಜನರು ಕಾಲ್ಕಿತ್ತಿದ್ದಾರೆ. ಗನ್ಮ್ಯಾನ್ ರಂಜಿತ್ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದು, ಪಣಂಬೂರು ಪೊಲೀಸರಿಗೆ ದೂರು ನೀಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.