ಕಂಬಕ್ಕೆ ಡಿಕ್ಕಿ ಹೊಡೆದ ಲಾರಿ ಪರಾರಿ; ಬೆನ್ನಟ್ಟಿ ಹಿಡಿದ ಮೆಸ್ಕಾಂ ಸಿಬ್ಬಂದಿ
ವಿಟ್ಲ: ಭಾರೀ ಪ್ರಮಾಣದಲ್ಲಿ ಸರಕು ತುಂಬಿ ಕೇರಳಕ್ಕೆ ಹೋಗುತ್ತಿದ್ದ ಲಾರಿಯೊಂದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ತುಂಡಾಗಿ ನೆಲಕಚ್ಚಿದ್ದರೂ ಚಾಲಕ ಲಾರಿಯನ್ನು ನಿಲ್ಲಿಸದೇ ಪರಾರಿಯಾಗಿದ್ದನು.
ಸುದ್ದಿ ತಿಳಿದ ಮೆಸ್ಕಾಂ ಸಿಬ್ಬಂದಿ ಪರಾರಿಯಾಗುತ್ತಿದ್ದ ಲಾರಿಯನ್ನು ಬೆನ್ನಟ್ಟಿ ಹಿಡಿದಿದ್ದಾರೆ.
ವಿಟ್ಲದ ದೇವಸ್ಥಾನ ಹಿಂಬದಿಯ ಮಂಗಳೂರು ರಸ್ತೆಯಲ್ಲಿನ ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ ಹೊಡೆದು ಸಂಪೂರ್ಣವಾಗಿ ಹಾನಿಗೊಂಡಿದೆ.
ಸರಕಾರಿ ಬಸ್ಸಿಗೆ ಸೈಡ್ ಕೊಡುವ ಸಮಯ ಲಾರಿ ಚಾಲಕನ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣವೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಆದರೆ, ಡಿಕ್ಕಿ ಹೊಡೆದ ಲಾರಿ ಸ್ಥಳದಲ್ಲಿ ನಿಲ್ಲದೇ ಪರಾರಿಯಾಗಿದ್ದರೂ ಮೆಸ್ಕಾಂ ಸಿಬ್ಬಂದಿ ಉಕ್ಕುಡ ಸಮೀಪದ ಕಾಶಿಮಠ ಬಳಿ ಲಾರಿಯನ್ನು ಹಿಡಿದಿದ್ದಾರೆ.
ಅಪಘಾತ ನಡೆಸಿದ ಲಾರಿ ಹೊಸಪೇಟೆಯಿಂದ ಕಾಸರಗೋಡಿಗೆ ಕುರಿಗೊಬ್ಬರ ಸಾಗಾಟ ಮಾಡುತ್ತಿತ್ತು.