ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಗಾಯಾಳು ಪುಟಾಣಿ ರಕ್ಷಿತ್ ವಿಧಿವಶ

Mainashree
Updated On : 23 Mar 2013, 11:19 am

ಉಪ್ಪಿನಂಗಡಿ: ಕಳೆದ ಗುರುವಾರ ಸಂಭವಿಸಿದ ವಾಹನ ಅಪಘಾತದಲ್ಲಿ ಗಾಯಗೊಂಡ ಪುಟಾಣಿ ವಿದ್ಯಾರ್ಥಿಗಳ ಪೈಕಿ ಗಂಭೀರ ಗಾಯಗೊಂಡಿದ್ದ ರಕ್ಷಿತ್(6) ಚಿಕಿತ್ಸೆಗೆ ಸ್ಪಂದಿಸದೇ ಶುಕ್ರವಾರ ನಸುಕಿನ ವೇಳೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಮನೆಯಿಂದ ಶಾಲೆಯಲ್ಲಿ ನಡೆಯಲಿರುವ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡು ಎಂದಿನಂತೆ ಅನ್ಯ ವಿದ್ಯಾರ್ಥಿಗಳ ಜೊತೆಗೂಡಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ರಕ್ಷಿತ್ ಇನ್ನೇನು ಶಾಲೆ ಸಮೀಪಿಸಿತು ಎನ್ನುವಷ್ಟರಲ್ಲಿ ಹೆದ್ದಾರಿ ಬದಿ ಕಾಯುತ್ತಿದ್ದ ವಿಧಿಯ ಕ್ರೂರತೆಗೆ ಬಲಿಯಾದಂತಾಗಿದೆ.
ಹರಿನಗರ ನಿವಾಸಿ ಸತೀಶ್ ಎಂಬವರ ಏಕೈಕ ಪುತ್ರನಾಗಿರುವ ಈತ ತಮ್ಮ ಬದುಕಿಗೆ ಆಶಾ ಕಿರಣವಾಗಿ ಬಾಳುತ್ತಾನೆಂಬ ನಿರೀಕ್ಷೆಯಲ್ಲಿ ಹೆತ್ತವರ ಮುದ್ದಿನ ಮಗನಾಗಿ ಉಪ್ಪಿನಂಗಡಿಯ ಸೇಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿದ್ದ. ತಾನು ಪ್ರಯಾಣಿಸುತ್ತಿದ್ದ ರಿಕ್ಷಾಕ್ಕೆ ಮಿನಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ರಕ್ಷಿತ್‌ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೇ ವಿಧಿವಶನಾಗಿದ್ದಾನೆ.
ರಕ್ಷಿತ್ ಪಾಥೀವ ಶರೀರ ಶುಕ್ರವಾರ ಮಧ್ಯಾಹ್ನದ ವೇಳೆಗೆ ಉಪ್ಪಿನಂಗಡಿಯ ಮನೆಗೆ ಬರುತ್ತಿದ್ದಂತೆಯೇ ಪರಿಸರದ ಬಹುತೇಕ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಆತನ ಮನೆಗೆ ತೆರಳಿ ಅಂತಿಮ ದರ್ಶನ ಪಡೆದರು. ವಿದ್ಯಾರ್ಥಿಯ ಅಕಾಲಿಕ ಮರಣಕ್ಕೆ ಸೈಂಟ್ ಮೇರೀಸ್ ಶಾಲೆ ಶೋಕಾಚರಣೆ ನಡೆಸಿತು.
ಮೃತ ಬಾಲಕನ ಮನೆಗೆ ಜಿಪಂ ಸದಸ್ಯ ಕೇಶವ ಗೌಡ ಬಜತ್ತೂರು, ತಾಪಂ ಸದಸ್ಯ ಉಮೇಶ್ ಶೆಣೈ, ಪಂಚಾಯಿತಿ ಉಪಾಧ್ಯಕ್ಷ ಗಂಗಾಧರ ಟೈಲರ್, ಸದಸ್ಯರಾದ ಹರೀಶ್ ನಾಯಕ್, ರಾಜಗೋಪಾಲ ಹೆಗ್ಡೆ, ಮಾಲತಿ ಮೊದಲಾದವರು ಭೇಟಿ ನೀಡಿ ದುಃಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement