ಮದ್ಯ ಅಕ್ರಮ ಮಾರಾಟ: ಇಬ್ಬರ ಸೆರೆ
ಪುತ್ತೂರು: ಸಂಪ್ಯ ಠಾಣಾ ವ್ಯಾಪ್ತಿಯ ಪ್ರತ್ಯೇಕ ಎರಡು ಕಡೆಗಳಲ್ಲಿ ಶುಕ್ರವಾರ ಪತ್ತೆಯಾದ ಅಕ್ರಮ ಮದ್ಯ ಮಾರಾಟ ಪ್ರಕರಣಗಳಿಗೆ ಸಂಬಂಧಿಸಿ ಸಂಪ್ಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಪುತ್ತೂರು ತಾಲೂಕಿನ ನಿಡ್ಪಳ್ಳಿ ಎಂಬಲ್ಲಿ ರಸ್ತೆ ಬದಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ನಿಡ್ಪಳ್ಳಿ ಗ್ರಾಮದ ತಂಬುತ್ತಡ್ಕ ನಿವಾಸಿ ಐತ್ತಪ್ಪ ನಾಯ್ಕ ಎಂಬವರನ್ನು ಪೊಲೀಸರು ಬಂಧಿಸಿ ಆತನ ಬಳಿಯಿದ್ದ 48 ಬಾಟಲಿ ವಿಸ್ಕಿ ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಇರ್ದೆ ಎಂಬಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದ ಬಾಳೆಪ್ಪಾಡಿ ನಿವಾಸಿ ಮಹಾಬಲ ರೈ ಎಂಬಾತನನ್ನು ಬಂಧಿಸಿರುವ ಪೊಲೀಸರು 48 ಬಾಟಲಿ ಅಕ್ರಮ ಮದ್ಯ ವಶಪಡಿಸಿಕೊಂಡಿದ್ದಾರೆ.
ಸಂಪ್ಯ ಠಾಣಾ ಎಸ್.ಐ ಜಗದೀಶ್ ರೆಡ್ಡಿ ನೇತೃತ್ವದ ಪೊಲೀಸರು ಈ ಎರಡು ಪ್ರಕರಣ ಪತ್ತೆ ಮಾಡಿದ್ದಾರೆ. ಆರೋಪಿಗಳಿಬ್ಬರನ್ನು ಪೊಲೀಸರು ಶುಕ್ರವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.