ಸಹೋದ್ಯೋಗಿ ಜತೆ ಸರಸಬಯಲು: ಯುವತಿ ಆತ್ಮಹತ್ಯೆಗೆ ಕಾರಣ
ಮಂಗಳೂರು: ಕದ್ರಿ ಪಾರ್ಕ್ನಲ್ಲಿ ಆತ್ಮಹತ್ಯೆಗೈದ ಯುವತಿ ಪ್ರಮಿಳಾಳ ಸಾವಿಗೆ ಕಾರಣ ಸಹದ್ಯೋಗಿ ಜತೆ ಸರಸ ಬಯಲಾಗಿದ್ದೇ ಕಾರಣ ಎಂದು ತಿಳಿದು ಬಂದಿದೆ.
ಪುತ್ತೂರಿನ ಪ್ರಮಿಳಾ ಕದ್ರಿಯ ಲೇಡಿಸ್ ಹಾಸ್ಟೆಲ್ನಲ್ಲಿ ಇದ್ದು, ಬೆಳಿಗ್ಗೆ ಸಂಗೀತ ಮತ್ತು ಕಂಪ್ಯೂಟರ್ ಕ್ಲಾಸ್ಗೆ ಹೋಗಿಬಂದು ಬಳಿಕ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ತನಗೆ ಕಷ್ಟ ಇದೆ ಎಂದು ಹೇಳಿಕೊಂಡಿದ್ದ ತನ್ನ ಸಹದ್ಯೋಗಿಯೋಬ್ಬರಿಗೆ ತನ್ನಲ್ಲಿದ್ದ ಚಿನ್ನದ ಸರವನ್ನು ಈ ಹಿಂದೆ ನೀಡಿದ್ದಳು. ಆದರೆ ಬಳಿಕ ಸರ ಪಡೆದ ಸಹೋದ್ಯೋಗಿ ನಾಪತ್ತೆಯಾಗಿದ್ದ.
ಆಕೆಗೆ 22 ರಂದು ಪುತ್ತೂರಿನಲ್ಲಿ ಪರಿಚಯದವರ ಮದುವೆಗೆ ಹೋಗಲೇ ಬೇಕಿತ್ತು. ಚಿನ್ನದ ಸರ ಇಲ್ಲದೇ ಮನೆಗೆ ಹೋಗಲು ಹೆದರಿಕೆ ಆಗುತ್ತದೆ ಎಂದು ಸಹೋದ್ಯೋಗಿಗಳೊಂದಿಗೆ ತಿಳಿಸಿದ್ದಳು. ಬಟ್ಟೆ ಅಂಗಡಿ ಇನ್ನೋರ್ವ ಸಹೋದ್ಯೋಗಿ ಪ್ರದೀಪ್ ಚಿನ್ನದ ಸರ ಪಡೆಯಲು ಸಾಲ ನೀಡುವ ಭರವಸೆ ನೀಡಿದ್ದ. ಆದರೆ ಅದಕ್ಕೆ ಲಾಡ್ಜ್ನಲ್ಲಿ ತನ್ನ ಜೊತೆ ಒಂದು ದಿನ ಕಳೆಯಬೇಕು ಎಂದು ಶರತ್ತು ಹಾಕಿದ್ದ. ಅದರಂತೆ ಭಾನುವಾರ ಬಲ್ಮಠದ ಲಾಡ್ಜ್ನಲ್ಲಿ ಆತನ ಜೊತೆ ಕಳೆದಿದ್ದಾಳೆ.
ಬಳಿಕ ಆತ ಚಿನ್ನದ ಸರ ಸಾಲ ಮಾಫಿ ಮಾಡಿದ್ದ. ಸೋಮವಾರ ಬೆಳಿಗ್ಗೆ ಲಾಡ್ಜ್ನಿಂದ ಹೊರಗೆ ಬರುವಾಗ ಬಟ್ಟೆ ಅಂಗಡಿಯ ಇತರ ಸಹದ್ಯೋಗಿಗಳು ಇವರಿಬ್ಬರನ್ನು ನೋಡಿದ್ದರು. ತಾವು ಲಾಡ್ಜ್ನಲ್ಲಿ ಉಳಿದಿದ್ದು, ಊರೆಲ್ಲಾ ಗೊತ್ತಾಗುತ್ತದೆ ಎಂದು ಮರ್ಯಾದೆಗೆ ಹೆದರಿದ್ದಳು.
ಸೋಮವಾರ ಬೆಳಿಗ್ಗೆ ಬಟ್ಟೆ ಅಂಗಡಿಗೆ ಬರುವುದಾಗಿ ತಿಳಿಸಿದ್ದಳಾದರೂ, 11 ಗಂಟೆ ಹೊತ್ತಿಗೆ ಮತ್ತೆ ಕರೆ ಮಾಡಿ, ತನ್ನ ಮನಸ್ಸು ಸರಿಯಿಲ್ಲ, ತಾನು ಇಂದು ಕೆಲಸಕ್ಕೆ ಬರುವುದಿಲ್ಲ ಎಂದು ತಿಳಿಸಿದ್ದಳು. ಆ ಬಳಿಕ ಅವಳ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಚಿನ್ನದ ಸರದ ವಿಷಯವನ್ನು ಶರತ್ ಎಂಬ ತನ್ನ ಪ್ರಿಯಕರನಲ್ಲಿಯೂ ಆಕೆ ದೂರವಾಣಿಯಲ್ಲಿ ತಿಳಿಸಿ, ಆತ್ಮಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಕದ್ರಿ ಪೊಲೀಸರು ಪ್ರಕರಣ ಕುರಿತು ಇನ್ನಷ್ಟು ವಿಚಾರಣೆ ನಡೆಸುತ್ತಿದ್ದಾರೆ.