ಸುದ್ದಿ ಸಂಕ್ಷೇಪ
ಬೇಸಿಗೆ ಶಿಬಿರಕ್ಕೆ ಅರ್ಜಿ ಆಹ್ವಾನ
ಮಂಗಳೂರು: ರಾಮಕೃಷ್ಣ ಮಠದ ವತಿಯಿಂದ ಏ. 12 ರಿಂದ 18ರವರೆಗೆ ಮಠದಲ್ಲಿ ಮಕ್ಕಳಿಗಾಗಿ ಬೇಸಿಗೆ ಶಿಬಿರ 'ವಿಜಯ ವಿಹಾರ' ನಡೆಯಲಿದೆ. ಶಿಬಿರದಲ್ಲಿ ಮಕ್ಕಳಿಗೆ ವನ್ಯ ಜೀವಿಗಳ ಕುರಿತು ಮಾಹಿತಿ ನೀಡಲಾಗುವುದು. ಆವೆ ಮಣ್ಣಿನಿಂದ ಕಲಾಕೃತಿ ಸಿದ್ಧಪಡಿಸುವ ವಿಧಾನ, ಕರಕುಶಲ ಕಲೆ, ವ್ಯಂಗ್ಯ ಚಿತ್ರಗಳ ರಚನೆ, ಮುಖವಾಡ ತಯಾರಿಸುವ ಬಗೆಯನ್ನು ತಿಳಿಸಿಕೊಡಲಾಗುವುದು. ಇದಲ್ಲದೆ ಮೂಕಾಭಿನಯ, ಮಿಮಿಕ್ರಿ, ಭಜನೆ, ಜಾದೂ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.ಶಿಬಿರವು ಬೆಳಗ್ಗೆ 8.30 ರಿಂದ ಮಧ್ಯಾಹ್ನ 12.30ರ ವರೆಗೆ ಇರುತ್ತದೆ. 8 ರಿಂದ 15ನೇ ವಯಸ್ಸಿನ ಮಕ್ಕಳು ಪಾಲ್ಗೊಳ್ಳಬಹುದು. ಪ್ರವೇಶಕ್ಕೆ ಏ. 10 ಕೊನೆ ದಿನ. ಹೆಚ್ಚಿನ ಮಾಹಿತಿಗೆ 0824-2414412 ಸಂಪರ್ಕಿಸಬಹುದು.
ನ.ಪಂ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕ್ರಿಯೆ ವಿಳಂಬ ಸಾಧ್ಯತೆ
ಸುಳ್ಯ: ನಗರ ಪಂಚಾಯಿತಿ ಚುನಾವಣೆ ನಡೆದು ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಶೇ.50 ಮಹಿಳಾ ಮೀಸಲಾತಿ ನಿಗದಿಪಡಿಸಬೇಕೆಂಬ ಹೈಕೋರ್ಟ್ ಸೂಚನೆಯಿಂದಾಗಿ ಮೀಸಲಾತಿ ನಿಗದಿ ವಿಳಂಬಗೊಳ್ಳುವ ಸಾಧ್ಯತೆ ಇದೆ. 2007ರ ಮೀಸಲಾತಿ ಪ್ರಕಾರವೇ ಚುನಾವಣೆ ನಡೆದಿರುವುದರಿಂದ ಅಧ್ಯಕ್ಷತೆ ಮೀಸಲಾತಿ ಕೂಡ ಹಿಂದಿನ ಬಾರಿಯದ್ದೇ ಬರಬಹುದೆಂಬ ನಿರೀಕ್ಷೆ ಹಲವರಿಗಿತ್ತು. ಆದರೆ ಶೇ.50 ಮೀಸಲಾತಿ ನಿಗದಿಪಡಿಸಿ ಕಾಯ್ದೆ ತಿದ್ದುಪಡಿಯಾಗಿರುವುದರಿಂದ, ಅದರಂತೆಯೇ ಮೀಸಲಾತಿ ನಿಗದಿಪಡಿಸಬೇಕೆಂದು ರಾಜ್ಯದ ಮಹಿಳಾ ಸದಸ್ಯೆಯೊಬ್ಬರು ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದು, ಈ ಪ್ರಸ್ತಾಪದಂತೆ ಮೀಸಲಾತಿ ನಿಗದಿಪಡಿಸಲು ಸಾಧ್ಯವಿಲ್ಲವೇ ಎಂದು ಸರ್ಕಾರವನ್ನು ಕೇಳಿದೆ. ಹೈಕೋಟ್ನ ಅಂತಿಮ ತೀರ್ಮಾನದ ನಂತರ ಮೀಸಲಾತಿ ನಿಗದಿಪಡಿಸಲು ಸರ್ಕಾರ ನಿರ್ಧರಿಸಿದರೆ, ಅಸೆಂಬ್ಲಿ ಚುನಾವಣೆ ನಂತರ ನಿಗದಿಯಾಗಬಹುದೆಂದು ಹೇಳಲಾಗುತ್ತಿದೆ.