ಪುತ್ತೂರಿನಿಂದ ಕಾಂಗ್ರೆಸ್ ಟಿಕೆಟ್ಗೆ ಸುಳ್ಯದ ಐವರ ಅರ್ಜಿ
ಮಂಗಳೂರು: ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿ ಸುಳ್ಯ ತಾಲೂಕಿನ ಐದು ಮಂದಿ ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್ಗೆ ಅರ್ಜಿ ಸಲ್ಲಿಸಿದ್ದಾರೆ. ಇವರೆಲ್ಲರೂ ಗೌಡ ಸಮುದಾಯದವರು. ನಮ್ಮಲ್ಲಿ ಯಾರಾದರೂ ಒಬ್ಬರಿಗೆ ಟಿಕೆಟ್ ನೀಡಿ, ನಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿ ಎಂದು ಒಕ್ಕೊರಲ ವಿನಂತಿ ಮಾಡಿದ್ದಾರೆ. ಈ ವಿಷಯವನ್ನು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಟಿಕೆಟ್ ಆಕಾಂಕ್ಷಿ ಧನಂಜಯ ಅಡ್ಪಂಗಾಯ, ಜಿಲ್ಲೆಯಲ್ಲಿ ಶೇ.60ಕ್ಕಿಂತ ಜಾಸ್ತಿ ಗೌಡ ಜನಾಂಗವಿದೆ. ಪುತ್ತೂರಲ್ಲಿ 40 ಸಾವಿರಕ್ಕಿಂತಲೂ ಅಧಿಕ ಮಂದಿ ಇದ್ದಾರೆ. ಸುಳ್ಯ ತಾಲೂಕಲ್ಲಿ ಹಲವು ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷ ಸಿದ್ಧಾಂತಗಳಿಗೆ ಬದ್ಧರಾಗಿ ವಿವಿಧ ಜವಾಬ್ದಾರಿ ನಿರ್ವಹಿಸಿದ್ದೇವೆ. ಆದ್ದರಿಂದ ಟಿಕೆಟ್ಗೆ ಅರ್ಜಿ ಸಲ್ಲಿಸಿದ್ದಾಗಿ ಐವರು ಹೇಳಿಕೊಂಡಿದ್ದಾರೆ. ನಮ್ಮಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಬೆಂಬಲವಿದೆ. ಇದಕ್ಕೆ ತಪ್ಪಿದಲ್ಲಿ ಮುಂದೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಇವರ ಜತೆಗಾರರಾದ ಭರತ್ ಮುಂಡೋಡಿ, ವೆಂಕಪ್ಪ ಗೌಡ, ದೇವರಾಜ್, ದಿವ್ಯಪ್ರಭಾ ಹಾಜರಿದ್ದರು.