ಪುತ್ತೂರು, ಬೆಳ್ತಂಗಡಿಯಲ್ಲಿ ಗೌಡ ಅಭ್ಯರ್ಥಿ ನಿಲ್ಲಿಸಿ: ಆಗ್ರಹ
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಒಕ್ಕಲಿಗ ಗೌಡ ಸಮುದಾಯಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸುವಂತೆ ಜಿಲ್ಲಾ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ರಾಜಕೀಯ ಪಕ್ಷಗಳನ್ನು ಆಗ್ರಹಿಸಿದೆ.
ಶನಿವಾರ ಸುದ್ದಿಗೋಷ್ಠಿ ನಡೆಸಿದ ಸಂಘದ ನಿಕಟಪೂರ್ವ ಅಧ್ಯಕ್ಷ ಲೋಕಯ್ಯ ಗೌಡ, ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕುಗಳಲ್ಲಿ ಗೌಡ ಸಮುದಾಯ ಪ್ರಬಲವಾಗಿದೆ. ಸುಳ್ಯದಲ್ಲಿ ಶೇ.65, ಪುತ್ತೂರಲ್ಲಿ ಶೇ.50, ಬೆಳ್ತಂಗಡಿಯಲ್ಲಿ ಶೇ.45 ಹಾಗೂ ಬಂಟ್ವಾಳದಲ್ಲಿ ಶೇ.15ರಷ್ಟು ಗೌಡ ಜನಾಂಗದ ಮತದಾರರಿದ್ದಾರೆ. ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ 3 ಲಕ್ಷ ಗೌಡ ಮತದಾರರಿದ್ದಾರೆ. ಸುಳ್ಯದಲ್ಲಿ ಗೌಡ ಜನಾಂಗದವರಿದ್ದರೂ ಅದು ಮೀಸಲು ಕ್ಷೇತ್ರ, ಅಲ್ಲಿ ಬೇರೆಯವರಿಗೆ ಅವಕಾಶ ಸಿಗುವುದಿಲ್ಲ. ಮುಖ್ಯವಾಗಿ ಕಾಂಗ್ರೆಸ್, ಬಿಜೆಪಿ ಪಕ್ಷಗಳು ಪುತ್ತೂರು, ಬೆಳ್ತಂಗಡಿಯಲ್ಲಿ ಗೌಡ ಜನಾಂಗ ಅಭ್ಯರ್ಥಿಗಳಿಗೆ ಸ್ಪರ್ಧೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ತಪ್ಪಿದಲ್ಲಿ ಮತದಾನ ಮೂಲಕವೇ ರಾಜಕೀಯ ಪಕ್ಷಗಳಿಗೆ ಸೂಕ್ತ ಉತ್ತರ ನೀಡುವುದಾಗಿ ಹೇಳಿದರು.
ಒಕ್ಕಲಿಗರ ಗೌಡ ಸೇವಾ ಸಂಘ ಪುತ್ತೂರು ಇದರ ಅಧ್ಯಕ್ಷ ಚಿದಾನಂದ ಬೈಲಾಡಿ, ಕಾರ್ಯದರ್ಶಿ ಕಿಶೋರ್ ಕುಮಾರ್ ನೆಲ್ಲಿಕಟ್ಟೆ, ಬಂಟ್ವಾಳ ಸಂಘ ಅಧ್ಯಕ್ಷ ಲಿಂಗಪ್ಪ ಗೌಡ, ಸುಳ್ಯ ಸಂಘ ಸಂಚಾಲಕ ಕೂಜುಗೋಡು ಸತೀಶ್, ನಿರ್ದೇಶಕ ಮಾಧವ ಗೌಡ ಬೆಳ್ಳಾರೆ ಹಾಜರಿದ್ದರು.