ಅಲೋಶಿಯಸ್ ವಸ್ತು ಸಂಗ್ರಹಾಲಯಕ್ಕೆ ಹೊಸ ನೋಟ
ಮಂಗಳೂರು: ಜಟಕಾ ಬಂಡಿ, ದೊಡ್ಡ ಗಡಿಯಾರ, ವಿವಿಧ ನಮೂನೆಯ 100ಕ್ಕಿಂತಲೂ ಹೆಚ್ಚು ಕ್ಯಾಮರಗಳು, ಹಳೆಯ ಪಿಯಾನೋಗಳು, ಬೃಹದಾಕಾರದ ಆನೆಯ ತಲೆ ಬುರುಡೆ, ಮಂಗ, ಕುರಿ, ಬೆರು ಇತ್ಯಾದಿಗಳ ಅಸ್ಥಿಪಂಜರಗಳು, ಹಳೆಯ ಕಾಲದ ಗಿಟಾರ್, ವಾಯಲಿನ್, ಗ್ರಾಮಫೋನ್, ರೇಡಿಯೋ, ಜನರೇಟರ್ ಇವುಗಳೆಲ್ಲಾ ಸಂತ ಅಲೋಶಿಯಸ್ ಕಾಲೇಜಿನ ಮ್ಯೂಸಿಯಂನಲ್ಲಿ ಕಂಡುಬಂದ ವಸ್ತುಗಳು.
ಸುಮಾರು 3ಸಾವಿರಕ್ಕೂ ವಿವಿಧ ನಮೂನೆಯ ವಸ್ತು ಸಂಗ್ರಹವಿರುವ 'ಅಲೋಸಿಯಂ' ಸಂಗ್ರಹಾಲಯವನ್ನು ಶನಿವಾರ ಸಂತ ಅಲೋಶಿಯಸ್ ಕಾಲೇಜಿನಲ್ಲಿ ರೆಕ್ಟರ್ ಫಾ. ಜೋಸೆಫ್ ರೋಡಿಗ್ರಸ್ ಉದ್ಘಾಟಿಸಿದರು.
ಸುಮಾರು ರು. 80 ಲಕ್ಷ ವೆಚ್ಚದಲ್ಲಿ ನವೀಕರಣಗೊಳಿಸಿ ನಿರ್ಮಿಸಲಾದ ಕಟ್ಟಡದಲ್ಲಿ ಎಲ್ಲಾ ವಸ್ತುಗಳನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿದೆ. ಸರ್ಕಾರದಿಂದ ಸುಮಾರು ರು. 25ಲಕ್ಷ ಅನುದಾನ ಸಿಕ್ಕಿದೆ. ಇಲ್ಲಿರುವ ಹೆಚ್ಚಿನ ಸಂಗ್ರಹಗಳು ದಾನಿಗಳ ಕೊಡುಗೆಯಾಗಿದೆ. ಕೆಲವೊಂದು ಪರಊರಿಗೆ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಅಲ್ಲಿ ಪಡೆದುಕೊಂಡ ವಸ್ತುಗಳು ಇಲ್ಲಿವೆ.
ಶಾಲಾ ವಿದ್ಯಾರ್ಥಿಗಳಿಗೆ ನೋಡಲು ಅವಕಾಶವಿದ್ದು, 2 ರಿಂದ 5 ಶುಲ್ಕವನ್ನು ವಿಧಿಸಲಾಗಿದೆ. ಮುಕ್ಕಾಲು ಗಂಟೆ ಮ್ಯೂಸಿಯಂನಲ್ಲಿರುವ ವಸ್ತು ಸಂಗ್ರಹವನ್ನು ನೋಡಲು ಅವಕಾಶವಿದ್ದು, ಇವುಗಳ ಬಗ್ಗೆ ಗೋಪಾಲ್ ಗೌಡ ಅವರು ಮಾಹಿತಿ ನೀಡುತ್ತಾರೆ. ಇದಲ್ಲದೆ ಸಂಗ್ರಹಾಲಯದ ಫೋಟೋ ತೆಗೆಯುವ ಅವಕಾಶವು ಕಲ್ಪಿಸಲಾಗಿದೆ. ರಜಾ ದಿನಗಳನ್ನು ಹೊರತು ಪಡಿಸಿ ಉಳಿದ ದಿನಗಳಲ್ಲಿ ಬೆಳಗ್ಗೆ 9.30 ರಿಂದ ಸಂಜೆ 4.30ವರೆಗೆ ವೀಕ್ಷಿಸಬಹುದು.
ಕುಡ್ಲದ ಮೊದಲ ಕಾರು: ಮ್ಯೂಸಿಯಂನಲ್ಲಿ ಮಂಗಳೂರಿಗೆ ಬಂದ ಪ್ರಥಮ ಕಾರು ವಿಶೇಷ ಆಕರ್ಷಣೆಯಾಗಿದೆ. 1906ರಲ್ಲಿ ಪಿ.ಇ.ಎಕ್ಸ್. ಸಲ್ಡಾನ್ಹಾ ಅವರು ಖರೀದಿಸಿದ ಕಾರು ಇಲ್ಲಿನ ವಿಶೇಷತೆಯಾಗಿದೆ. ಸುಮಾರು 20 ಅಡಿ ಉದ್ದದ ತಿಮಿಂಗಿಲದ ಅಸ್ಥಿಪಂಜರ, ಡಾಲ್ಫಿನ್ ಅಸ್ಥಿಪಂಜರ ಆಕರ್ಷಣೀಯವಾಗಿದೆ.
ಇದಲ್ಲದೆ ವಿವಿಧ ರಾಷ್ಟ್ರದ ಪದಕಗಳು, ಬಿಲ್ಲುಬಾಣ, ಹಳೆಯ ಎಕೊರ್ಡಿಯನ್, ವಿವಿಧ ದೇಶದ ಒಣ ಹಣ್ಣುಗಳು, ಹೂವು, ಜರ್ಮನಿಯ ಪುರಾತನ ಗೋಡೆ ಗಡಿಯಾರ, ಮೇಣದ ಬತ್ತಿಯ ಲೋಹದ ಸ್ಟಾಂಡ್, ಚಿಮಣಿ ದೀಪಗಳು, ಹಳೆಯ ಗಣಕ ಯಂತ್ರ, ನೀರು ಹಾಯಿಸುವ ದಂಬೆ, ಅಕ್ಕಿ ಅಳತೆ ಮಾಡುವ ಕಳಸೆ, ಚೆನ್ನೆಮಣೆ ಇನ್ನೂ ಅನೇಕ ವಸ್ತುಗಳು ಸಂಗ್ರಹಾಲಯದಲ್ಲಿದೆ. ಕಾಲೇಜಿನ ಪ್ರಾಂಶುಪಾಲ ಸ್ವೀಬರ್ಟ್ ಡಿಸಿಲ್ವಾ ಮತ್ತಿತ್ತರರು ಹಾಜರಿದ್ದರು.