ಕನ್ಯಾಡಿ: ಏ. 12ರಿಂದ ರಾಮತಾರಕ ನಾಮ ಸಪ್ತಾಹ, ಬ್ರಹ್ಮರಥೋತ್ಸವ
ಬೆಳ್ತಂಗಡಿ: ಧರ್ಮಸ್ಥಳ ಸನಿಹದ ನಿತ್ಯಾನಂದ ನಗರದಲ್ಲಿರುವ ಕನ್ಯಾಡಿ ಶ್ರೀ ರಾಮ ಮಂದಿರದಲ್ಲಿ ಏ. 12 ರಿಂದ ರಾಮತಾರಕ ನಾಮ ಸಪ್ತಾಹ, ಬ್ರಹ್ಮರಥೋತ್ಸವ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಏ. 19 ರಂದು ಶ್ರೀ ದೇವರ ಪಾಲಕಿ ಉತ್ಸವ ಹಾಗೂ ಮಹಾ ಬ್ರಹ್ಮರಥೋತ್ಸವ ನಡೆಯಲಿದೆ. 12 ರಂದು 53 ನೇ ವರ್ಷದ ರಾಮತಾರಕ ನಾಮ ಸಪ್ತಾಹದ ಉದ್ಘಾಟನೆಯನ್ನು ಜಿ.ಪಂ. ಅಧ್ಯಕ್ಷ ಕೊರಗಪ್ಪ ನಾಯ್ಕ ನೆರವೇರಿಸಲಿದ್ದಾರೆ.
ಶಾಸಕ ಕೆ. ವಸಂತ ಬಂಗೇರ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಸಂಸದ ವಿನಯಕುಮಾರ್ ಸೊರಕೆ, ಶಾಸಕರಾದ ಬಿ. ರಮಾನಾಥ ರೈ, ಗೋಪಾಲಕೃಷ್ಣ ಬೇಲೂರು, ಜೆ.ಡಿ. ನಾಯ್ಕ, ಮಾಜಿ ಶಾಸಕರಾದ ಬಿ.ನಾಗರಾಜ ಶೆಟ್ಟಿ, ರುಕ್ಮಯ ಪೂಜಾರಿ, ಪ್ರಭಾಕರ ಬಂಗೇರ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಏ. 14 ರಂದು ರಜತಪಾಲಕಿ ಉತ್ಸವ, 15ರಂದು ಪುಷ್ಪ ರಥೋತ್ಸವ,16 ರಂದು ಚಂದ್ರಮಂಡಲ ರಥೋತ್ಸವ, 17 ರಂದು ರಜತ ರಥೋತ್ಸವ, 18 ರಂದು ಹನುಮಾನ್ ರಥೋತ್ಸವ, ಕಟ್ಟೆ ಪೂಜೆ, ಕೆರೆ ದೀಪೋತ್ಸವ, 19 ರಂದು ಮಹಾ ಬ್ರಹ್ಮರಥೋತ್ಸವ, ನೇಮೋತ್ಸವ ನಡೆಯಲಿದೆ. ರಥೋತ್ಸವದ ಬಳಿಕ ಮೂಲ್ಕಿ ಯುವವಾಹಿನಿ ಕಲಾವಿದರಿಂದ ತುಳುನಾಡ ವೈಭವ ಪ್ರದರ್ಶನಗೊಳ್ಳಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗುರುದೇವ ಮಠದ ಟ್ರಸ್ಟಿಗಳಾದ ಚಿತ್ತರಂಜನ್, ಜೆ.ಎನ್. ನಾಯ್ಕ ಭಟ್ಕಳ,ಪರಶುರಾಮಪ್ಪ ಈಡೂರು, ಮೋಹನ ಉಜ್ಜೋಡಿ, ಬೆಳ್ತಂಗಡಿ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ಪಿ.ಕೆ. ರಾಜು ಪೂಜಾರಿ, ಮಾಜಿ ಅಧ್ಯಕ್ಷ ಪೀತಾಂಬರ ಹೇರಾಜೆ, ವಸಂತ ಸಾಲಿಯಾನ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ವಸಂತ ಪುದುವೆಟ್ಟು, ಜಿ.ಪಂ. ಸದಸ್ಯ ಶೈಲೇಶ್ ಕುಮಾರ್, ವಿಟ್ಲ ಮಾಜಿ ಶಾಸಕ ರುಕ್ಮಯ ಪೂಜಾರಿ, ದ.ಕ. ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಟ್ರಸ್ಟಿ ತುಕಾರಾಮ ಪೂಜಾರಿ ಇದ್ದರು.