ಗಡಾಯಿಕಲ್ಲಿಗೆ ಪ್ರಾರ್ಥನೆ ಸಲ್ಲಿಸಲು ತೆರಳಿದವರ ಮೇಲೆ ಹೆಜ್ಜೇನು ದಾಳಿ
ಬೆಳ್ತಂಗಡಿ: ಕಪ್ಪು ತಿಂಗಳ ಪ್ರಯುಕ್ತ ಇಲ್ಲಿಗೆ ಸಮೀಪದ ಐತಿಹಾಸಿಕ ಗಡಾಯಿಕಲ್ಲು ಗುಡ್ಡದ ಮೇಲೆ ಪ್ರಾರ್ಥನೆ ಸಲ್ಲಿಸಲು ಹೋದ 80ಕ್ಕೂ ಹೆಚ್ಚು ಮಂದಿಗೆ ಭಾನುವಾರ ಸಂಜೆ ಹೆಜ್ಜೇನು ಕಡಿದಿದ್ದು, 8ಕ್ಕೂ ಅಧಿಕ ಮಂದಿ ಗಂಭೀರವಾಗಿ ಅಸ್ವಸ್ಥರಾಗಿದ್ದಾರೆ. ಇದರಿಂದಾಗಿ ಸುಮಾರು ನಾಲ್ಕು ಗಂಟೆಗೂ ಅಧಿಕ ಕಾಲ ಗುಡ್ಡದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಪ್ರತಿ ವರ್ಷದಂತೆ ಭಾನುವಾರ ಮಧ್ಯಾಹ್ನ 2.30ಕ್ಕೆ ಬೆಳ್ತಂಗಡಿಯ ಹೋಲಿ ರಿಡೀಮರ್ ಚರ್ಚ್ಗೆ ಸಂಬಂಧಪಟ್ಟ 500 ಮಂದಿ ಕ್ರೈಸ್ತರು ಧರ್ಮಗುರು ಫಾ. ಜೇಮ್ಸ್ ಡಿಸೋಜ ಹಾಗೂ ಸಹಾಯಕ ಧರ್ಮಗುರು ಮೆಲ್ವಿನ್ ನೊರೊನ್ಹಾ ನೇತೃತ್ವದಲ್ಲಿ ಕಪ್ಪು ತಿಂಗಳ ಪ್ರಯುಕ್ತ ಪ್ರಾರ್ಥನೆ ಸಲ್ಲಿಸಲು ಗಡಾಯಿಕಲ್ಲಿಗೆ ಹೋಗಿದ್ದರು. ಪ್ರಾರ್ಥನೆ ಮುಗಿಸಿದ ಬಳಿಕ ಧರ್ಮಗುರುಗಳು ಮಾತನಾಡಿ, 'ಕಳೆದ ವರ್ಷವೂ ಗುಡ್ಡದಲ್ಲಿ ಹೆಜ್ಜೇನು ಕಡಿದು ಹಲವರು ಅಸ್ವಸ್ಥರಾಗಿದ್ದರು, ಹಾಗಾಗಿ ಈ ಬಾರಿ ಯಾರೂ ಅಂಥ ದುಸ್ಸಾಹಸಕ್ಕೆ ಕೈಹಾಕಬೇಡಿ' ಎಂದು ಎಚ್ಚರಿಸಿದ್ದರು ಎನ್ನಲಾಗಿದೆ.
ಆದರೂ, ಉಜಿರೆ ಭಾಗದ ಕೆಲವರ ತಂಡ ಪ್ರಾರ್ಥನೆ ನಡೆದ ಜಾಗದಿಂದ ಮೇಲೆ ಹತ್ತತೊಡಗಿದರು. ಆಗ ದಿಢೀರನೆ ಹೆಜ್ಜೇನು ದಾಳಿ ಆರಂಭವಾಯಿತು. ಇಕ್ಕಟ್ಟಾದ ಹಾದಿ, ದಿಕ್ಕಾಪಾಲಾಗಿ ಓಡುವಂತಿಲ್ಲ, ಮಹಿಳೆಯರು, ಮಕ್ಕಳು, ವೃದ್ಧರೂ ತಂಡದಲ್ಲಿ ಇದ್ದುದರಿಂದ ಆತಂಕದ ಪರಿಸ್ಥಿತಿ ತಲೆದೋರಿತು. ಹೆಜ್ಜೇನುಗಳು ಅಲ್ಲೇ ಓಡಾಡುತ್ತಿದ್ದುದರಿಂದ ಕೆಳಗಿದ್ದವರು ಮೇಲೆ ತೆರಳುವಂತಿರಲಿಲ್ಲ, ಮೇಲಿದ್ದವರು ಕೆಳಗೆ ಬರುವಂತಿರಲಿಲ್ಲ. ಸುಮಾರು ನಾಲ್ಕು ಗಂಟೆ ಕಾಲ ಆತಂಕದ ಸ್ಥಿತಿ ತಲೆದೋರಿತು.
ಪ್ರಥಮ ಚಿಕಿತ್ಸೆ: ಬಳಿಕ, ಹೆಜ್ಜೇನು ಕಡಿತದಿಂದ ಅಸ್ವಸ್ಥರಾದ ಎಲ್ಲರಿಗೂ ಗುಡ್ಡದ ಬುಡದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಏಳೆಂಟು ಮಂದಿಯನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸಲಾಯಿತು. ಇತರ ಖಾಸಗಿ ವಾಹನಗಳಲ್ಲಿಯೂ ಅಸ್ವಸ್ಥರನ್ನು ಕರೆತರಲಾಯಿತು. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಮಂದಿ ಸ್ಥಳಕ್ಕೆ ತೆರಳಿದರು. ಸ್ಥಳೀಯರು, ಸ್ವಯಂ ಸೇವಕರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು.