ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಚುನಾವಣಾ ವೆಚ್ಚ: ಆಯೋಗ ಕಟ್ಟುನಿಟ್ಟು

Lingaraj Badiger
Updated On : 25 Mar 2013, 10:47 am

ಮಂಗಳೂರು: ಪ್ರತ್ಯಕ್ಷ ಹಾಗೂ ಪರೋಕ್ಷ ಚುನಾವಣಾ ವೆಚ್ಚದ ಕುರಿತು ಹೆಚ್ಚಿನ ನಿಗಾ ಇರಿಸಲು ಭಾರತ ಚುನಾವಣಾ ಆಯೋಗ ಪ್ರತ್ಯೇಕ ಖರ್ಚು ವೆಚ್ಚ ವಿಭಾಗ ರಚಿಸಿದ್ದು, ವಿಶೇಷ ಫ್ಲೈಯಿಂಗ್ ಸ್ಕ್ವಾಡ್ ಮೂಲಕ ನಿಗಾ ಇರಿಸಲಿದೆ ಎಂದು ಖರ್ಚು ವೆಚ್ಚ ವೀಕ್ಷಣಾ ಸಮಿತಿ ಅಧ್ಯಕ್ಷ ಪಿ.ಕೆ. ದಾಸ್ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭಾನುವಾರ ವಿಡಿಯೋ ಕಾನ್ಫರೆನ್ಸ್ ಮುಖಾಂತರ ರಾಜ್ಯದ ಜಿಲ್ಲಾಧಿಕಾರಿಗಳೊಂದಿಗೆ ಈ ಕುರಿತು ತೆಗೆದುಕೊಳ್ಳಬೇಕಾದ ಕ್ರಮಗಳ ಮಾಹಿತಿ ನೀಡಿದರು.
ಖರ್ಚು ವೆಚ್ಚಗಳ ಬಗ್ಗೆ ಮಾಹಿತಿ ಪಡೆದು ನಂತರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಸಾರ್ವಜನಿಕರ ಆರೋಪಕ್ಕೆ ಈ ಬಾರಿ ಚುನಾವಣೆಯಲ್ಲಿ ಉತ್ತರಿಸಬೇಕಾಗಿದೆ. ಆದ್ದರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಆಯೋಗ ಪೂರ್ವಭಾವಿ ಸಿದ್ಧತೆ ನಡೆಸಿದೆ. ಅಧಿಕಾರಿಗಳು ಪರಿಣಾಮಕಾರಿ ಕಾರ್ಯೊನ್ಮುಖರಾಗಬೇಕೆಂದು ಸೂಚಿಸಿದರು.
ವಾಣಿಜ್ಯ ತೆರಿಗೆ ಇಲಾಖೆ, ಆದಾಯ ತೆರಿಗೆ ಇಲಾಖೆ, ಜಿಲ್ಲಾಧಿಕಾರಿ ಕಚೇರಿ, ಪೊಲೀಸ್ ಇಲಾಖೆ ಸಹಕಾರದಿಂದ ಸೂಕ್ಷ್ಮವಾಗಿ ಬೆಳವಣಿಗೆಯನ್ನು ಗಮನಿಸಬೇಕಾಗಿದೆ ಎಂದರು.
ಚುನಾವಣೆ ಅಧಿಕಾರಿಗಳಿಗೆ ಅನುಭವವಿದ್ದರೂ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವ ಸಂದರ್ಭ ಅಕ್ರಮ ತಡೆಯಲು ಕ್ರಮ ಕೈಗೊಳ್ಳುವ ಕುರಿತು ಚಿಂತನೆ ನಡೆಸಬೇಕಾಗಿದೆ. ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷೆ ವಿಧಿಸುವ ಕುರಿತು ಪ್ರಚಾರ ನೀಡುವ ಕಾರ್ಯವಾಗಬೇಕು. ಎಲ್ಲರಿಗೂ ಮಾಹಿತಿ ತಲುಪಿಸಿ ಎಂದು ಜಿಲ್ಲಾಧಿಕಾರಿ ಎನ್. ಪ್ರಕಾಶ್ ತಿಳಿಸಿದರು.
ಹಣಕಾಸು ವ್ಯವಹಾರಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಹಾಗೂ 50 ಸಾವಿರಕ್ಕೂ ಹೆಚ್ಚು ನಗದು ವ್ಯವಹಾರಗಳನ್ನು ದಾಖಲಿಸಬೇಕು. ಅಭ್ಯರ್ಥಿಗಳ ಆಸ್ತಿ ವಿವರದ ಅಫಿದವಿತ್ ಜತೆಗೆ ಕ್ರಿಮಿನಲ್ ವಿವರಗಳ ಮಾಹಿತಿ ಇದ್ದರೆ ಎರಡು ಅಫಿದಾವಿತ್ ಸಲ್ಲಿಸಬೇಕು. ಇದನ್ನು 24 ಗಂಟೆಯೊಳಗೆ ವೈಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವ ಬಗ್ಗೆ ಕ್ರಮ ಜರುಗಿಸಬೇಕು. ಖರ್ಚು ವೆಚ್ಚದ ಕುರಿತು ಯಾವುದೇ ಸಂದೇಹಗಳಿದ್ದರೂ ತನ್ನ ಗಮನಕ್ಕೆ ತರಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು.
24 ಗಂಟೆ ದೂರುಕೋಶ, ರು. 50ಸಾವಿರಕ್ಕಿಂತ ಹೆಚ್ಚು ನಗದು ವ್ಯವಹಾರಗಳ ಮಾಹಿತಿ ಸಂಬಂಧಪಟ್ಟವರಿಗೆ ತಲುಪಿಸುವ ಸೂಕ್ತ ಕ್ರಮ, ಬ್ಯಾಂಕ್ ಅಧಿಕಾರಿಗಳ ಸಭೆ ತಕ್ಷಣ ನಡೆಸಬೇಕು ಎಂದು ನಿರ್ದೇಶಿಸಿದರು.
ಚುನಾವಣೆ ಅಕ್ರಮ ತಡೆಗೆ ಅಬಕಾರಿ ಇಲಾಖೆಯಿಂದ ಪ್ರತ್ಯೇಕ ವ್ಯವಸ್ಥೆಯಿದ್ದರೂ, ಇನ್ನಿತರ ಅಧಿಕಾರಿಗಳೊಂದಿಗೆ ಸಮನ್ವಯ ಹಾಗೂ ಪತ್ತೆಯಾದ ಅಕ್ರಮವನ್ನು ಜನತೆಗೆ ತಿಳಿಸುವ ವ್ಯವಸ್ಥೆಯಾಗಬೇಕು. ಪ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ತಪಾಸಣೆ ವೇಳೆ ಶಾಂತಿ ಹಾಗೂ ಸಂಯಮದಿಂದ ವರ್ತಿಸುವ ಮೂಲಕ ಘರ್ಷಣೆಗೆ ಅವಕಾಶ ನೀಡಬಾರದು ಎಂದರು.
5 ವಿಶೇಷ ಚೆಕ್ ಪೋಸ್ಟ್: ಮಂಗಳೂರು ವಿಮಾನ ನಿಲ್ದಾಣ, ರೇಲ್ವೆ ನಿಲ್ದಾಣ ಹಾಗೂ ಎಲ್ಲಾ ಸಂವಹನಗಳ ಬಗ್ಗೆ ನಿಗಾ ವಹಿಸುವ ಜತೆ ವಿಶೇಷ ತಪಾಸಣೆಯ ಅಗತ್ಯವಿದೆ. ಕೇರಳದ ಗಡಿಪ್ರದೇಶದ ಸ್ಥಳಗಳಲ್ಲಿ ಚೆಕ್‌ಪೋಸ್ಟ್ ರಚಿಸಬೇಕಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಮನೀಷ್ ಕರ್ಬಿಕರ್, ಚುನಾವಣೆ ಹಿನ್ನಲೆಯಲ್ಲಿ 5 ವಿಶೇಷ ಚೆಕ್ ಪೋಸ್ಟ್‌ಗಳನ್ನು ರಚಿಸಲಾಗಿದೆ. ಕೋಸ್ಟಲ್ ಗಾರ್ಡ್‌ನವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕಳೆದ ಜನವರಿಯಿಂದ ಒಟ್ಟು 170 ಪ್ರಕರಣಗಳು ದಾಖಲಾಗಿದೆ. ಕ್ರಿಮಿನಲ್ಸ್ ವಿರುದ್ಧ ವಿಶೇಷ ನಿಗಾ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮತಪಟ್ಟಿಯಲ್ಲಿ ಹೆಸರು ಸೇರಿಸುವಾಗ ಅಕ್ರಮವಾಗದಂತೆ ಚುನಾವಣಾಧಿಕಾರಿಗಳು ಕರಡುಪಟ್ಟಿಯಲ್ಲಿ ಖುದ್ದು ಗಮನಿಸಬೇಕು. ಕರ್ನಾಟಕದಲ್ಲಿ ಚುನಾವಣಾ ಅಕ್ರಮ ನಡೆಯುತ್ತಿದೆ ಎಂದು ಕೇಂದ್ರ ಚುನಾವಣಾ ಆಯೋಗ ಗಗಮನಿಸಿದ್ದು, ನಿರ್ಲಕ್ಷ ವಹಿಸಿದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ಎನ್. ವಿಜಯಪ್ರಕಾಶ್, ಮನಾಪ ಆಯುಕ್ತ ಡಾ. ಹರೀಶ್ ಹಾಗೂ ಚುನಾವಣಾ ಖರ್ಚು ವೆಚ್ಚ ಸಮಿತಿ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement