ಪ್ರವಾಸೋದ್ಯಮ ಜಾಗ ಒತ್ತುವರಿ!
ಮಂಗಳೂರು: ಎರಡು ವರ್ಷ ಹಿಂದೆ ಇಲ್ಲಿ ಸಾಲು ಸಾಲು ನಿರ್ಮಿಸಿದ್ದ ಅಕ್ರಮ ನಿರ್ಮಾಣವನ್ನು ಕೆಡವಿದ್ದರು, ಈಗ ನೋಡಿದರೆ ಮತ್ತದೇ ಸ್ಥಳದಲ್ಲಿ ಅಕ್ರಮ ಗುಡಿಸಲು ತಲೆ ಎತ್ತಿದೆ.
ಇದು ಮಂಗಳೂರು ಸಮುದ್ರ ಕಿನಾರೆಯಲ್ಲಿರುವ ಬೆಂಗರೆ ಕಸಬಾದ ಚಿತ್ರಣ. ಸಮುದ್ರ ಬದಿಯಲ್ಲೇ ರಸ್ತೆ ಇದೆ. ಅದು ಇತ್ತೀಚೆಗಷ್ಟೇ ಡಾಂಬರು ಕಂಡಿದೆ. ನೀರು, ಮೂಲಸೌಕರ್ಯಕ್ಕೆ ಕೊರತೆ ಇಲ್ಲ. ಹಾಗಾಗಿಯೇ ಮನೆಗಳ ಸಾಲು ತಲೆ ಎತ್ತಿದೆ. ಇದರಲ್ಲಿ ಕ್ರಮಬದ್ಧವಾಗಿ ನಿರ್ಮಾಣವಾದ ಮನೆಗಳೆಷ್ಟು ಎಂದರೆ ಅಧಿಕಾರಿಗಳಲ್ಲೇ ಸ್ಪಷ್ಟ ಉತ್ತರವಿಲ್ಲ.
ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್)ನಿಯಮ ಪ್ರಕಾರ ಇದು ವಲಯ-2 ವ್ಯಾಪ್ತಿಯಲ್ಲಿದೆ. ಇಲ್ಲಿ ಹಳೆ ಮನೆ ದುರಸ್ತಿ ಹೊರತು ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿ ಇಲ್ಲ. ಇದು ಸಮುದ್ರ ತೀರದಲ್ಲಿ ಮರಳು ಶೇಖರಣೆ ಆಗಿ ನಿರ್ಮಾಣವಾದ ಹೊಸ ಭೂಮಿ. ಇದರ ತೀರದುದ್ದಕ್ಕೂ ಹೊಸ ಕಟ್ಟಡಗಳು, ನಿರ್ಮಾಣ ಹಂತದ ಕಟ್ಟಡಗಳೇ ಕಾಣುತ್ತವೆ. ಇದನ್ನೆಲ್ಲ ಸ್ವತಃ ವೀಕ್ಷಿಸಿ ಸಂಬಂಧಿತ ಅಧಿಕಾರಿಗಳು ತೆರಳಿದ್ದಾರೆ, ಆದರೆ ಅನಧಿಕೃತ ನಿರ್ಮಾಣ ವಿರುದ್ಧ ಕ್ರಮ ಜರುಗಿಸಲು ಮೀನಮೇಷ ಎಣಿಸುತ್ತಿದ್ದಾರೆ.
2 ವರ್ಷ ಹಿಂದೆ ಕೆಡವಿದ್ದರು: ಸಿಆರ್‌ಝಡ್ ವ್ಯಾಪ್ತಿಯಲ್ಲಿ ಪರಿಸರ ಮತ್ತು ಜೀವ ಶಾಸ್ತ್ರ ಇಲಾಖೆಯ ಅನುಮತಿ ಇಲ್ಲದೆ ಯಾವುದೇ ಶಾಶ್ವತ ರಚನೆ ಮಾಡುವಂತಿಲ್ಲ. ಈ ನಿಯಮ ಉಲ್ಲಂಘಿಸಿದ ಕಾರಣಕ್ಕೆ 2011 ಆಗಸ್ಟ್‌ನಲ್ಲಿ ಕಂದಾಯ, ಮಹಾನಗರ ಪಾಲಿಕೆ, ಪೊಲೀಸರ ಸಹಕಾರದಲ್ಲಿ ಪರಿಸರ, ಜೀವಶಾಸ್ತ್ರ ಇಲಾಖೆ 8 ಅಕ್ರಮ ರಚನೆಗಳನ್ನು ತೆರವುಗೊಳಿಸಿತ್ತು. ಈಗ ಮತ್ತೆ ಕಲ್ಲುಗೋಡೆ ಕಟ್ಟಿದ ಶೀಟು, ಹೆಂಚು ಹಾಕಿದ ಕಟ್ಟಡಗಳು ಮೇಲೇಳತೊಡಗಿದೆ. ಸುಮಾರು 700 ಮೀಟರ್ ಉದ್ದಕ್ಕೆ ಅನಧಿಕೃತ ರಚನೆಗಳಿದ್ದು, ಇದನ್ನು ಯಾರು ನಿರ್ಮಿಸುತ್ತಾರೆ, ಯಾರ ಹೆಸರಲ್ಲಿದೆ ಇತ್ಯಾದಿ ದಾಖಲೆಗಳು ಅಧಿಕಾರಿಗಳ ಬಳಿಯೂ ಇಲ್ಲ ಎನ್ನುವುದು ವಿಪರ್ಯಾಸ.
ಪ್ರವಾಸೋದ್ಯಮ ಜಾಗ ಒತ್ತುವರಿ: ಗಾಲ್ಫ್‌ಕೋರ್ಸ್ ಹಾಗೂ ಮರೈನ್ ಅಕ್ವೇರಿಯಂ ಬೆಂಗರೆ ಸುತ್ತಮುತ್ತ 100 ಎಕರೆ ಪ್ರದೇಶದಲ್ಲಿ ನಿರ್ಮಿಸಲು ಪ್ರವಾಸೋದ್ಯಮ ಇಲಾಖೆಗೆ ಕಾದಿರಿಸಲಾಗಿದೆ.
ಈ ಬಗ್ಗೆ ನಿರ್ದಿಷ್ಟ ಗುರುತು ಹಾಕದಿದ್ದರೂ ಅದಕ್ಕೆಂದೇ ಕಾದಿರಿಸಿದ ಜಾಗದ ಒತ್ತುವರಿಯೂ ಆಗಿದೆ.
ಸಿಆರ್‌ಝಡ್ ನಿಯಮ ಪ್ರಕಾರ, ಕಡಲ ತೀರದ ಪೂರ್ವ ಭಾಗದಲ್ಲಿ ಮನೆ ನಿರ್ಮಿಸಬಹುದು. ಆದರೆ ಕಾದಿರಿಸಿದ ಜಾಗದಲ್ಲಿ, ಸಿಆರ್‌ಝಡ್ ವಲಯ-2 ವ್ಯಾಪ್ತಿಯೊಳಗೆ ಯಾವುದೇ ನಿರ್ಮಾಣಕ್ಕೆ ಅವಕಾಶವಿಲ್ಲ. ಆದರೆ ಇಲ್ಲಿ ಎಲ್ಲೆಂದರಲ್ಲಿ ಅಕ್ರಮವಾಗಿ ಕಟ್ಟಡ ರಚಿಸಿ ನಿಯಮ ಉಲ್ಲಂಘಿಸಿರುವುದು ಅಧಿಕಾರಿಗಳಿಗೆ ತಿಳಿಯದ ಸಂಗತಿಯೇನಲ್ಲ.