ಬೆಳ್ತಂಗಡಿಯಲ್ಲಿ ಸಮಸ್ಯೆಗಳದೇ ಮೂಟೆ
ಬೆಳ್ತಂಗಡಿ: ಇಲ್ಲಿನ ಪಟ್ಟಣ ಪಂಚಾಯಿತಿ 11 ವಾರ್ಡ್ ಹೊಂದಿದ್ದು 1972ರಲ್ಲಿ ಅಸ್ತಿತ್ವಕ್ಕೆ ಬಂತು. ಕಳೆದ 40 ವರ್ಷಗಳಲ್ಲಿ ಹಲವಾರು ಮುಖಂಡರ ಆಡಳಿತ ಕಂಡಿದ್ದು ಪಟ್ಟಣದ ಅಭಿವೃದ್ಧಿಯಲ್ಲಿ ಕೆಲಸ ಸಾಗಿದೆ.
ಸಮಾಜ ಆಧುನಿಕವಾದಂತೆ ಹಲವಾರು ಹೊಸ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತಾ ಪರಿಹಾರಗೊಳ್ಳುತ್ತಾ ಸಾಗಿದೆ. ಆದರೂ ಜನರ ಕೆಲ ಬೇಡಿಕೆಗಳು ಇನ್ನೂ ಈಡೇರಬೇಕಾಗಿದೆ.
ಏನೇನು ಆಗಬೇಕು?
ಕುಡಿಯುವ ನೀರಿನ ಸೌಲಭ್ಯ ಎಪಿಎಲ್ಗೆ ಮಾತ್ರ ಎಂಬ ನಿಯಮವಿದ್ದರೂ ಬಿಪಿಎಲ್ನವರಿಗೂ ನೀಡಲಾಗಿದೆ ಎಂಬ ಆರೋಪವಿದೆ. ರುದ್ರಭೂಮಿಯ ಅತಿ ಜರೂರಿದೆ.
ಬೆಳ್ತಂಗಡಿ ನಗರ ಮತ್ತು ಲಾಯಿಲದ ಗಡಿಯಲ್ಲಿ ಸುಮಾರು 40 ಅಡಿ ಡಾಂಬರೀಕರಣದ ಸಂಪರ್ಕ ರಸ್ತೆ ಆಗಬೇಕಾಗಿದೆ. ಒಳ ಚರಂಡಿ ವ್ಯವಸ್ಥೆ ಸಂಪೂರ್ಣಗೊಳಿಸಬೇಕಾಗಿದೆ.
ಬೊಟ್ಟು ಬಳಿ ಒಳಚರಂಡಿ ವ್ಯವಸ್ಥೆ ಸರಿಯಾಗಬೇಕು. ವಾರ್ಡ್ನ ಸಣ್ಣ ರಸ್ತೆಗಳು ಇನ್ನೂ ಕಚ್ಛಾ ರಸ್ತೆಗಳಾಗಿಯೇ ಇವೆ. ಅಮರ್ಡ್ರಗ್ ಹೌಸ್ ಎದುರಿನಿಂದ ಅಲ್ಲಾಟ ಬೈಲು ತನಕದ ರಸ್ತೆ ಹೊಂಡ ಗುಂಡಿಯಿಂದ ಸಂಚರಿಸಲು ಅಯೋಗ್ಯವಾಗಿದ್ದು ಇದನ್ನು ಡಾಂಬರೀಕರಣಗೊಳಿಸಬೇಕು. ರಸ್ತೆ ಬದಿ ಚರಂಡಿ ನಿರ್ಮಾಣವಾಗಬೇಕು. ಬೀದಿ ದೀಪಗಳ ದುರಸ್ತಿ ಅಗತ್ಯವಾಗಿದೆ. ರಸ್ತೆ ಚರಂಡಿಯೊಂದರಲ್ಲಿ ಸನಿಹದ ಕೈಗಾರಿಕಾ ತ್ಯಾಜ್ಯ ಹರಿಯುತ್ತಿದ್ದು ದುರ್ವಾಸನೆ ಹೊಡೆಯುವುದನ್ನು ತಡೆಯಬೇಕಾಗಿದೆ. ಮಾರಿಗುಡಿ ಪರಿಸರದಲ್ಲಿನ ಒಳ ಚರಂಡಿಯಲ್ಲಿ ಹೊಟೇಲ್ ತ್ಯಾಜ್ಯ ಹಾಗೂ ಮನೆಗಳ ತ್ಯಾಜ್ಯ ಹರಿಯುವುದನ್ನು ನಿಲ್ಲಿಸಿ ಜನರ ಆರೋಗ್ಯ ಕಾಪಾಡಬೇಕಾಗಿದೆ.
ಬಸ್ನಿಲ್ದಾಣ ಸುತ್ತಮುತ್ತಲಿನ ವ್ಯಾಪ್ತಿ ಹೊಂದಿದೆ. ಇಲ್ಲಿನ ಚರಂಡಿಗಳಲ್ಲಿ ಹೊಟೇಲ್ ತ್ಯಾಜ್ಯ ಹರಿಯದೆ ಅಲ್ಲಲ್ಲಿ ದುರ್ವಾಸನೆ ಬೀರುತ್ತಾ ಇರುತ್ತದೆ. ಪೇಟೆಯಲ್ಲಿನ ತ್ಯಾಜ್ಯವೆಲ್ಲ ಕೃಷಿ ಇಲಾಖೆ ಬಳಿ ಸಂಗ್ರಹವಾಗುತ್ತಿದ್ದು ಅದನ್ನು ತಡೆಯಬೇಕಾಗಿದೆ. ಶೌಚಾಲಯ ಇರದ ಹೊಟೇಲ್ಗಳೂ ಇಲ್ಲಿವೆ.
ಮಸೀದಿ ರಸ್ತೆಯ ಚರಂಡಿಯಲ್ಲಿ ಹೊಟೇಲ್ಗಳಿಂದ ಕೊಳಚೆ ನೀರು ಹರಿದು ತೊಂದರೆಯಾಗುತ್ತಿದೆ. ಸಂಜಯ ನಗರ ಮಸೀದಿ ರಸ್ತೆ ಕಾಂಕ್ರಿಟ್ಕರಣಗೊಳಿಸುವ ಅಗತ್ಯವಿದೆ. ಬಂಗೇರ ದೂಪೆಯಿಂದ ಸಂಜಯನಗರಕ್ಕೆ ಇರುವ ಕಾಲು ದಾರಿ ಅಗಲೀಕರಣಗೊಳಿಸಿ ರಸ್ತೆಯಾಗಿಸಬೇಕು. ಕೆಲವಡೆ ಒಳಚರಂಡಿಗೆ ಮುಚ್ಚಿಗೆ ಇಲ್ಲ. ಕುಡಿಯುವ ನೀರಿನ ಸಮಸ್ಯೆ ಇದೆ.
ಕುಡಿಯುವ ನೀರಿಗಾಗಿ ಟ್ಯಾಂಕ್ ನಿರ್ಮಿಸುವ ಅಗತ್ಯವಿದೆ. 40 ವರ್ಷಗಳಿಂದ ಮನೆ ಮಾಡಿಕೊಂಡಿರುವವರಿಗೆ ಪಹಣಿ ಪತ್ರ ಸಿಕ್ಕಿಲ್ಲ. ಒಳ ಚರಂಡಿ ವ್ಯವಸ್ಥೆ ವ್ಯವಸ್ಥಿತವಾಗಿಲ್ಲ.
ಅಯ್ಯಪ್ಪ ಮಂದಿರದ ಬಳಿ ಒಳ ಚರಂಡಿ ವ್ಯವಸ್ಥೆಯಿಲ್ಲದೆ ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ನಿಂತು ತೊಂದರೆಯಾಗುತ್ತಿದೆ. ಜೂನಿಯರ್ ಕಾಲೇಜಿನ ಕೆಳಗಿನ ರಸ್ತೆಗೆ ಡಾಂಬರೀಕರಣ ಅಗತ್ಯವಿದೆ. ಈ ರಸ್ತೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದಲ್ಲಿ ನೂರಾರು ಮಕ್ಕಳಿಗೆ ಅನುಕೂಲವಾಗುತ್ತದೆ. ಖಾಸಗಿ ಮನೆಗಳ ಹಾಗೂ ಗ್ಯಾರೇಜ್ಗಳ ತ್ಯಾಜ್ಯ ಚರಂಡಿಗೆ ಬಿಡುವುದನ್ನು ನಿಲ್ಲಿಸಬೇಕು.
ಸಂಜಯ ನಗರ ಕಾರಂತ್ಯಾರು ಸುದೆಮುಗೇರು ರಸ್ತೆಗೆ ಖಾಯಂ ಸೇತುವೆ ಮತ್ತು ಈ ರಸ್ತೆಯ ಡಾಂಬರೀಕರಣ ಮಾಡಬೇಕು ಮತ್ತು ಬೀದಿ ದೀಪ ಅಳವಡಿಸಬೇಕು. ಚರಂಡಿ ದುರುಸ್ತಿಯೂ ಇದೆ.
ಹಲವರಿಗೆ ಹಕ್ಕುಪತ್ರ ಸಿಕ್ಕಿಲ್ಲ. ಉದ್ಯಾನವನ ಪಾಳು ಬಿದ್ದಿದೆ. ಮಲ್ಲೊಟ್ಟಿಗಿರುವ ಕಾಲುದಾರಿಯನ್ನು ರಸ್ತೆಯಾಗಿ ಪರಿವರ್ತಿಸಬೇಕು. ಹುಣ್ಸೆಕಟ್ಟಿಯ ಎಸ್ಸಿ/ಎಸ್ಟಿ ಮೀಸಲು ಜಾಗ ಹಂಚಿಕೆ ಮಾಡಬೇಕು. ಬಸ್ ಸೌಲಭ್ಯ, ನ್ಯಾಯಬೆಲೆ ಅಂಗಡಿ ಅಗತ್ಯ.
ಅನೇಕ ಮಂದಿಗೆ ಪಡಿತರ ಚೀಟಿ ಸಿಕ್ಕಿಲ್ಲ. ಬಡ ಕುಟುಂಬಗಳಿಗೆ ಎಪಿಎಲ್ ಕಾರ್ಡ್ಗಳು ಸಿಕ್ಕಿವೆ. ಶ್ರೀಮಂತರಲ್ಲಿ ಬಿಪಿಎಲ್ ಕಾರ್ಡ್ ಇದೆ.
ಅಕ್ಕಿ ಮಾಡುವ ಖಾಸಗಿ ಉದ್ಯಮದಿಂದ ಸುತ್ತಲಿನ ಮನೆ ಪರಿಸರದಲ್ಲಿ ವಾಯುಮಾಲಿನ್ಯವಾಗುತ್ತಿದೆ. ಮನೆಯಂಗಳ, ಕೃಷಿ ತೋಟ ಗಾಳಿಯಲ್ಲಿ ಬೂದಿ(ಕರಿ)ಹಾರಿ ಬರುತ್ತಿದ್ದು. ತೊಂದರೆಯಾಗುತ್ತಿದ್ದು ಇದನ್ನು ತಡೆಯಬೇಕು. ಬೊಟ್ಟು ಗುಡ್ಡೆಯಿಂದ ಜೈನ್ ಪೇಟೆಗೆ ಸಂಪರ್ಕ ರಸ್ತೆ ಇಲ್ಲ.
ತ್ಯಾಜ್ಯ ಸರ್ವಮಯ: ಇನ್ನು ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ಸಾರ್ವತ್ರಿಕವಾಗಿದೆ. ಇದಕ್ಕೊಂದು ಪರಿಹಾರ ಅಗತ್ಯವಿದೆ.
- ದೀಪಕ್ ಅಳದಂಗಡಿ