ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ರಸ್ತೆ ಬದಿ ಕಸ ರಾಶಿ, ಒಂಬುಡ್ಸ್‌ಮನ್ ನೋಟಿಸ್

Lingaraj Badiger
Updated On : 25 Mar 2013, 10:47 am

ಮಂಗಳೂರು: ದೇರಳಕಟ್ಟೆ ವೈದ್ಯಕೀಯ ಕಾಲೇಜು ಆಸ್ಪತ್ರೆ ಬಳಿಯ ಖಾಸಗಿ ಕಂಪೌಂಡ್ ಸೇರಿದಂತೆ ಸಮೀಪದ ಪರಿಸರದಲ್ಲಿ ರಸ್ತೆ ಬದಿ ರಾಶಿ ಬಿದ್ದು ಕೊಳೆಯುತ್ತಿರುವ ಘನತ್ಯಾಜ್ಯವನ್ನು ವಿಲೇವಾರಿ ಮಾಡುವಂತೆ ಒಂಬುಡ್ಸ್‌ಮನ್ ಕಾರ್ಯಾಲಯ ಮಂಗಳೂರು ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗೆ ಶನಿವಾರ ನೋಟಿಸ್ ಜಾರಿ ಮಾಡಿದೆ.
ಮಂಗಳೂರು ವಿವಿ ಮತ್ತು ದೇರಳಕಟ್ಟೆಯಲ್ಲಿರುವ ಎರಡು ವೈದ್ಯಕೀಯ ಕಾಲೇಜು ಆಸ್ಪತ್ರೆ, ಇನ್ಫೋಸಿಸ್, ಎರಡು ಎಂಜಿನಿಯರಿಂಗ್ ಕಾಲೇಜಿಗೆ ಹೋಗುವ ಮುಖ್ಯ ರಸ್ತೆ ಬದಿಗಳಲ್ಲಿ ಕೊಳೆಯುತ್ತಿರುವ ಘನತ್ಯಾಜ್ಯದಿಂದ ಪರಿಸರ ಮಾಲಿನ್ಯ ಉಂಟಾಗಿರುವ ಬಗ್ಗೆ ಸ್ಥಳೀಯರು ದೂರವಾಣಿ ಮುಖೇನ ಒಂಬುಡ್ಸ್‌ಮನ್‌ಗೆ ದೂರು ನೀಡಿದ್ದರು.
ಈ ಹಿನ್ನಲೆಯಲ್ಲಿ ಶುಕ್ರವಾರ ಬೆಳ್ಮ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿ ಜತೆ ಭೇಟಿ ನೀಡಿದಾಗ, ಘನತ್ಯಾಜ್ಯ ರಾಶಿಯಿಂದ ದುರ್ವಾಸನೆ ಬರುತ್ತಿತ್ತು.
ಇದಲ್ಲದೆ ದೇರಳಕಟ್ಟೆ ವೈದ್ಯಕೀಯ ಕಾಲೇಜಿನ ಎದುರು ಖಾಸಗಿ ಜಾಗದ ಕಂಪೌಂಡ್‌ನಲ್ಲಿ 3ರಿಂದ 4 ಲೋಡು ತ್ಯಾಜ್ಯ ಸಂಗ್ರಹ ಕೊಳೆಯುತ್ತಿದ್ದು, ದ್ರವ ತ್ಯಾಜ್ಯ ನಿಂತಿರುವುದನ್ನು ಗಮನಿಸಿದೆ. ಬೆಳ್ಮ ಗ್ರಾಮ ಪಂಚಾಯ್ತಿ ಕಚೇರಿ ಎದುರಿನ ರಸ್ತೆ ಬದಿ ಬಯಲಲ್ಲಿ ಕಸ ತುಂಬಿತ್ತು. ಕೋಟೆಕಾರು ಗ್ರಾಮ ಪಂಚಾಯ್ತಿಯ ಕಣಚೂರು ಶಾಲಾ ಬಳಿ ಜಲಾಲ್‌ಭಾಗ್‌ನಲ್ಲಿ ಬಯಲಲ್ಲೇ ಕಸ ಕಂಡುಬಂದರೆ, ಎಲ್ಲ ಕಡೆ ಪ್ಲಾಸ್ಟಿಕ್ ತ್ಯಾಜ್ಯ ಹರಡಿತ್ತು. ಅದೇ ರೀತಿ ಕೊಣಾಜೆ ಗ್ರಾಮ ಪಂಚಾಯ್ತಿಯ ನಾಟೆಕಲ್ ಬಳಿ ಮರದ ಮಿಲ್ಲಿನ ಎದುರು ರಸ್ತೆ ಬದಿ ಭಾರೀ ಕಸದ ರಾಶಿ ಕಂಡುಬಂತು.  ಅಸೈಗೋಳಿ ಕೇಂದ್ರ ಸ್ಥಾನದಲ್ಲಿರುವ ಪ್ಲಾಸ್ಟಿಕ್ ಸೌಧ ಮತ್ತು ಕಸದ ತೊಟ್ಟಿಯನ್ನು ಸರಿಯಾಗಿ ನಿರ್ವಹಿಸದಿರುವುದನ್ನು ಪತ್ತೆ ಮಾಡಲಾಯಿತು. ನಾಟೆಕಲ್-ಮಂಗಳಾಂತಿ ರಸ್ತೆ ಬದಿ ಕಸ ಹಾರಾಡುತ್ತಿದ್ದರೆ, ಅಲ್ಲಿನ ತೆಂಗಿನ ತೋಟದಲ್ಲಿ ಕಸವನ್ನು ಎಸೆಯಲಾಗಿದೆ.
ತುರ್ತು ಕ್ರಮಕ್ಕೆ ಸೂಚನೆ: ರಾಶಿ ಬಿದ್ದು ಕೊಳೆಯುತ್ತಿರುವ ಕಸಗಳನ್ನು ಶೀಘ್ರ ವಿಲೇವಾರಿ ಮಾಡಬೇಕು, ತ್ಯಾಜ್ಯ ಸಂಗ್ರಹ, ನಿರ್ವಹಣೆ, ವಿಲೇವಾರಿಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಶಾಶ್ವತ ಘನತ್ಯಾಜ್ಯ ನಿರ್ವಹಣಾ ಘಟಕಗಳನ್ನು ನಿರ್ಮಿಸಲು ಅಗತ್ಯ ಕ್ರಮ. ರಸ್ತೆ ಬದಿ ರಸ ಬಿಸಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ. ಗ್ರಾಮ ಪಂಚಾಯ್ತಿಯ ಎಲ್ಲ ಮನೆ, ಫ್ಲ್ಯಾಟ್, ಹೊಟೇಲ್, ಅಂಗಡಿ ಮಾಲಕರು ತಮ್ಮ ಕಸಗಳನ್ನು ತಾವೇ ವಿಲೇವಾರಿ ಮಾಡುವಂತಾಗಬೇಕು. ತ್ಯಾಜ್ಯ ಮುಕ್ತ ಗ್ರಾಮ ನಿರ್ಮಾಣಕ್ಕೆ ಸಿದ್ಧತೆ, ಆದ್ಯತೆ ನೀಡಬೇಕಾಗಿದ್ದು, ಶಿಕ್ಷಣ ಮತ್ತು ಜಾಗೃತಿ ಮೂಲಕ ಜನರ ಸಹಭಾಗಿತ್ವ ಇರಬೇಕು ಎಂದು ಒಂಬುಡ್ಸ್‌ಮನ್ ಶೀನ ಶೆಟ್ಟಿ ಸೂಚಿಸಿದ್ದಾರೆ.
ಈ ಕುರಿತು ಬೆಳ್ಮ, ಕೊಣಾಜೆ, ಕೋಟೆಕಾರು, ಮುನ್ನೂರು, ಮಂಜನಾಡಿ, ಮಂಗಳೂರು ತಾಲೂಕು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೂ ಒಂಬುಡ್ಸ್‌ಮನ್ ಪತ್ರ ರವಾನಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement