ಸರ ದೋಚುವ ನಕಲಿ ಸಿಬಿಐ ಸಿಸಿ ಕ್ಯಾಮೆರದಲ್ಲಿ ಸೆರೆ
ಮಂಗಳೂರು: ಗಮನ ಬೇರೆಡೆ ಸೆಳೆದು ಕಳವು ಮಾಡುವುದು, ಪೊಲೀಸರು ಎಂದು ಹೇಳಿ ಚಿನ್ನದ ಸರ ಬ್ಯಾಗ್‌ನಲ್ಲಿಟ್ಟುಕೊಳ್ಳುವಂತೆ ಸೂಚಿಸಿ ಚಿನ್ನಾಭರಣ ದೋಚುವ ಖದೀಮರ ತಂಡದ ಶಂಕಿತ ಸದಸ್ಯನ ಫೋಟೊ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೊಟ್ಟಾರ ಬಳಿ ತಾನು ಸಿಬಿಐ ಎಂದು ಹೇಳಿಕೊಂಡ ದಢೂತಿ ವ್ಯಕ್ತಿಯನ್ನು ಮಹಿಳೆ ಗುರುತಿಸಿದ್ದಾರೆ. ವೃದ್ಧ ಮಹಿಳೆಯರನ್ನೇ ವಂಚನೆ ಬಲೆಗೆ ಕೆಡವಿ ಚೋರರ ತಂಡ ಕ್ಷಿಪ್ರವಾಗಿ ಕಳವು ಮಾಡಿ ಪರಾರಿಯಾಗುತ್ತಿದೆ. ಬೆಂಗಳೂರಲ್ಲಿ ಇಂಥ ಸರಣಿ ಪ್ರಕರಣ ನಡೆದಿತ್ತು. ಇದೀಗ ಮಂಗಳೂರಲ್ಲಿ ನಡೆದಿದೆ. ನಿಮ್ಮ ಹಣ ಬಿದ್ದಿದೆ ಎಂದು ಹೇಳಿ ಕಾರುಗಳಲ್ಲಿದ್ದ ಚಿನ್ನಾಭರಣ ದೋಚುವ ತಂಡವೂ ನಗರಕ್ಕೆ ದಾಂಗುಡಿ ಇಟ್ಟಿದೆ. ಕಂಕನಾಡಿಯಲ್ಲಿ ಯುರೋ ಗೋಲ್ಡ್ ಜುವೆಲ್ಲರಿ ಬಳಿ ಶನಿವಾರ ಸಂಜೆ ಖದೀಮರ ತಂಡ ಹತ್ತರ ನೋಟ್‌ಗಳನ್ನು ಚೆಲ್ಲಿ ನಿಮ್ಮ ನೋಟುಗಳು ಬಿದ್ದಿವೆ ಎಂದು ಮಹಿಳೆಗೆ ಮಂಕು ಬೂದಿ ಎರಚಿ ಕಾರ್ ಒಳಗೆ ಇದ್ದ ಚಿನ್ನಾಭರಣ 2.5 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿತ್ತು. ಇಂಥ ಪ್ರಕರಣ ತಡೆಯಲು ಪೊಲೀಸರು ಗಸ್ತು ಹೆಚ್ಚಿಸುವ ಜತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ.
ದೈವಗುಡಿಗೆ ನುಗ್ಗಿ
ಚಿನ್ನಾಭರಣ ಕಳವು
ಮಂಗಳೂರು: ಬಿಜೈ ಕೆಎಸ್‌ಆರ್‌ಟಿಸಿ ಹಿಂಭಾಗದ ಚಾಮುಂಡೇಶ್ವರಿ ದೈವಸ್ಥಾನದ ಗುಡಿಗೆ ನುಗ್ಗಿದ ಕಳ್ಳರು ಚಿನ್ನದ ಕರಿಮಣಿ ಪೆಂಡೆಂಟ್, ಕಾಣಿಕೆಡಬ್ಬಿ ಕಳವು ಮಾಡಿದ್ದಾರೆ. 8 ಗ್ರಾಂ ಚಿನ್ನದ ಕರಿಮಣಿ, 1 ಗ್ರಾಂ ಪೆಂಡೆಂಟ್ ಮತ್ತು ಕಾಣಿಕೆ ಡಬ್ಬಿ ಕಳವಾಗಿದೆ. ಶನಿವಾರ ಬೆಳಗ್ಗಿನ ಜಾವ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಗುಡಿಯ ಅಕ್ಕಪಕ್ಕ ಮನೆಗಳಿದ್ದ ಕಾರಣ ಗುಡಿಗೆ ಬೀಗ ಹಾಕಿರಲಿಲ್ಲ ಎಂದು ದೈವಸ್ಥಾನದ ಮೊಕ್ತೇಸರ ನರಸಿಂಹ ಕೋಟ್ಯಾನ್ ಬರ್ಕೆ ಪೊಲೀಸರಿಗೆ ತಿಳಿಸಿದ್ದಾರೆ.
ಅಬೂಬಕರ್ ಗನ್‌ಮ್ಯಾನ್ ವಾಪಸ್
ಮಂಗಳೂರು: ಬೈಕಂಪಾಡಿ ಅಂಗರಗುಂಡಿಯಲ್ಲಿ ಗನ್‌ಮ್ಯಾನ್ ಮೇಲೆ ದಾಳಿ ಮತ್ತು ಗುಂಡು ಹಾರಿಸಿದ ಪ್ರಕರಣದ ಬಳಿ ಗನ್‌ಮ್ಯಾನ್ ರಂಜಿತ್‌ನ್ನು ನಗರ ಸಶಸ್ತ್ರ ಮೀಸಲು ಪಡೆ ಕೇಂದ್ರ ಕಚೇರಿಗೆ ಕರೆಸಿಕೊಳ್ಳಲಾಗಿದೆ. ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಎನ್.ಬಿ.ಅಬೂಬಕ್ಕರ್ ರಕ್ಷಣೆಗೆ ಗನ್‌ಮ್ಯಾನ್ ರಂಜಿತ್ ಕರ್ತವ್ಯ ವಹಿಸಲಾಗಿತ್ತು. ಶುಕ್ರವಾರ ಮಸೀದಿ ಪ್ರಾರ್ಥನೆ ಸಂದರ್ಭ ದುಷ್ಕರ್ಮಿಗಳ ಗುಂಪು ಗನ್‌ಮ್ಯಾನ್ ಮೇಲೆ ಏರಿಹೋಗಿತ್ತು. ಇದರಿಂದ ಆತ್ಮರಕ್ಷಣೆಗೆ ಗನ್‌ಮ್ಯಾನ್ ಗುಂಡು ಹಾರಿಸಿದ್ದರು. ಇದಾದ ಬಳಿಕ ಗನ್‌ಮ್ಯಾನ್ ಕರ್ತವ್ಯದಿಂದ ಮುಕ್ತಿಗೊಳಿಸಿ ಸಿಎಆರ್‌ಗೆ ವಾಪಸ್ ಕರೆಸಿಕೊಳ್ಳಲಾಗಿದೆ.
ಬಂಧನ ಇಲ್ಲ: ಗನ್‌ಮ್ಯಾನ್ ಮೇಲೆ ದಾಳಿ ನಡೆಸಿದ ಮಹಮ್ಮದ್ ಶರೀಫ್, ಅಬೂಬಕರ್, ಸಿದ್ದಿಕಿ, ಇಬ್ರಾಹಿಂ, ಸಿರಾಜ್ ವಿರುದ್ಧ ರಂಜಿತ್ ಪಣಂಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಆರೋಪಿಗಳನ್ನು ಇದುವರೆಗೆ ಬಂಧಿಸಲಾಗಿಲ್ಲ.
ಪ್ರತಿಭಟನೆ: ಗನ್‌ಮ್ಯಾನ್ ಅನಗತ್ಯವಾಗಿ ಗುಂಡುಹಾರಿಸಿದ್ದಾರೆ ಎಂದು ಆರೋಪಿಸಿ ಸ್ಥಳೀಯರ ಗುಂಪು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಆಯೋಜಿಸಿದೆ.