ಸುಳ್ಯ ಕಾಂಗ್ರೆಸ್ ಸಭೆಯಲ್ಲಿ ವಾಗ್ವಾದ
ಸುಳ್ಯ: ಸುಳ್ಯ ನಗರ ಪಂಚಾಯಿತಿ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿರುವ ಕಾಂಗ್ರೆಸ್, ಈ ನಿಟ್ಟಿನಲ್ಲಿ ಸುಳ್ಯದಲ್ಲಿ ಆಯೋಜಿಸಿದ ಆತ್ಮಾವಲೋಕನ ಸಭೆಯಲ್ಲಿ ವಾಗ್ವಾದ ನಡೆದಿದೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ವೆಂಕಪ್ಪ ಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖಂಡರಾದ ಧನಂಜಯ ಅಡ್ಪಂಗಾಯ, ಭರತ್ ಮಂಡೋಡಿ, ಕೆ.ಎಸ್. ದೇವರಾಜ್, ರಾಜೀವಿ ರೈ, ಎಸ್. ಸಂಶುದ್ದೀನ್, ಯತೀಶ್ ಗೌಡ, ಡಾ. ರಘು, ಸರಸ್ವತಿ ಕಾಮತ್, ಜಯಪ್ರಕಾಶ್ ರೈ ಮತ್ತಿತರರು ಇದ್ದರು.
ಕಾಂಗ್ರೆಸ್ ಪಕ್ಷದ 'ಸಾಂಪ್ರದಾಯಿಕ' ಮತಗಳು ಕೆಲವು ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಕ್ಷಕ್ಕೆ ಬಾರದ ಬಗ್ಗೆ ಕೆಲವು ಪರಾಜಿತ ಅಭ್ಯರ್ಥಿಗಳು ವಿಷಯ ಪ್ರಸ್ತಾಪಿಸಿದರು. ಆ ಸಂದರ್ಭದಲ್ಲಿ ಕೆಲವು ಅಲ್ಪಸಂಖ್ಯಾತ ವರ್ಗದ ಕಾರ್ಯಕರ್ತರ ವಿರೋಧವೂ ವ್ಯಕ್ತವಾಯಿತು.
ಸಭೆಯ ಕೊನೆಯಲ್ಲಿ ಸಂಘಟನೆಯ ವಿಚಾರ ಪ್ರಸ್ತಾಪವಾದಾಗ ಕೆಲವರು ತಮ್ಮ ಕ್ಷೇತ್ರ ವ್ಯಾಪ್ತಿಯ ಪ್ರಚಾರದ ಜವಾಬ್ದಾರಿಯನ್ನು ಪ್ರತ್ಯೇಕ ಸಮಿತಿ ರಚಿಸಿ ನೀಡುವಂತೆ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಾರೆಂದೂ ಕೆಲವರು ಆರೋಪಿಸಿದರು. ಇದರಿಂದ ಅಸಮಾಧಾನಗೊಂಡ ವೆಂಕಪ್ಪ ಗೌಡ ಸಭೆಯಿಂದ ಹೊರ ನಡೆದಾಗ ಸಭೆಯ ಹಿಂಬದಿಯಲ್ಲಿ ಕುಳಿತಿದ್ದ ಕಾರ್ಯಕರ್ತರು ತಡೆದು ಮತ್ತೆ ಕರೆತಂದು ವೇದಿಕೆಯಲ್ಲಿ ಕೂರಿಸಿದರು.
ಕೊನೆಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿ ವಿಧಾನ ಸಭಾ ಚುನಾವಣೆಯ ಚರ್ಚೆ ನಡೆಯಿತು ಎನ್ನಲಾಗಿದೆ.