ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಇಂದು ರಂಗ ಶಿಬಿರ ಸಮಾರೋಪ

Lingaraj Badiger
Updated On : 26 Mar 2013, 10:53 am

ಬಂಟ್ವಾಳ: ಕರ್ನಾಟಕ ನಾಟಕ ಅಕಾಡೆಮಿಯ ವಿಶೇಷ ಘಟಕ ಯೋಜನೆಯಡಿ, ಅರಿವು ಬಂಟ್ವಾಳ ಸಹಯೋಗದೊಂದಿಗೆ ಆಟ-ಕೂಟ ತುಳುನಾಡ್ ಪದ್ಮುಂಜ ಕಲಾವಿದರ ರಂಗ ಶಿಬಿರದ ಸಮಾರೋಪ ಸಮಾರಂಭ ಮಾ.26ರಂದು ಸಂಜೆ ಬಿ.ಸಿ.ರೋಡ್ ತಾಲೂಕು ಕಚೇರಿ ಮುಂಭಾಗ ನಡೆಯಲಿದೆ. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್ ಟಿ.ನರಸಿಂಹ ಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳ ಎಂ. ನಾಯ್ಕ್, ಆಟಕೂಟದ ಸಹನಿರ್ದೇಶಕಿ ಅತ್ರಾಡಿ ಅಮೃತಾ ಶೆಟ್ಟಿ, ಸಂಚಾಲಕ ಸಿರಿನಾತ್, ಪಿ.ಚೆನ್ನಪ್ಪ ಕಕ್ಕೆಪದವು ಮೊದಲಾದವರು ಭಾಗವಹಿಸುವರು. ಬಳಿಕ ಚೋರಚರಣ ದಾಸ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ನಿರ್ದೇಶಕ ಕೃಷ್ಣಪ್ಪ ಬಂಬಿಲ ತಿಳಿಸಿದ್ದಾರೆ.

ಡಿಎಡ್ ಪಠ್ಯಕ್ರಮ ಸಮಾಲೋಚನೆ
ಮಂಗಳೂರು: ಡಿಎಡ್ ಪಠ್ಯಕ್ರಮ ಪರಿಷ್ಕರಣೆಗೊಂಡಿದ್ದು ಈ ಬಗ್ಗೆ ಸಮಾಲೋಚನೆ ಸಭೆ ಮಾ.26ರಂದು ಬೆಳಗ್ಗೆ ಡಯಟ್ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ಆರ್‌ಟಿಇ ಕಾಯಿದೆ ಪ್ರಕಾರ ಗುಣಮಟ್ಟದ ಶಿಕ್ಷಣ ನೀಡುವುದು ಖಾತರಿಗೊಳಿಸುವುದಕ್ಕೆ, ಗುಣಮಟ್ಟದ ಶಿಕ್ಷಕರನ್ನು ರೂಪಿಸುವ ನಿಟ್ಟಿನಲ್ಲಿ ಡಿಎಡ್ ಪಠ್ಯಕ್ರಮ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಪಠ್ಯಕ್ರಮ ಬಗ್ಗೆ ಚರ್ಚಿಸುವ ಮತ್ತು ಅನುಷ್ಠಾನದಲ್ಲಿರುವ ಸವಾಲುಗಳನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ಶಿಕ್ಷಣಾಸಕ್ತರಿಗೆ ಸಭೆ ಆಯೋಜಿಸಲಾಗಿದೆ ಎಂದು ಸಂಯೋಜಕ ರೆನ್ನಿ ಡಿಸೋಜ ತಿಳಿಸಿದ್ದಾರೆ.

ಇಲಾಖೇತರ ನೌಕರರ ಕಾಯಂ ಮಾಡಿ
ಮಂಗಳೂರು: ಅಂಚೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಇಲಾಖೇತರ ನೌಕರರನ್ನು ಇಲಾಖಾ ನೌಕರರೆಂದು ಪರಿಗಣಿಸದಿದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುವುದಾಗಿ ಡಾ.ಅಂಬೇಡ್ಕರ್ ಪ್ರತಿಷ್ಠಾನ ರಾಜ್ಯ ಸಮಿತಿ ಎಚ್ಚರಿಕೆ ನೀಡಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ರಾಜ್ಯಾಧ್ಯಕ್ಷ ಶಿವಪ್ಪ ರೆಂಕೆದಗುತ್ತು, ಈ ನೌಕರರನ್ನು ಜೀತದಾಳಿನಂತೆ ದುಡಿಸಲಾಗುತ್ತಿದೆ. ಅವರಿಗೆ ವೇತನವನ್ನೂ ಸರಿಯಾಗಿ ನೀಡುತ್ತಿಲ್ಲ. ಆದ್ದರಿಂದ ಲೋಕಸಭಾ ಚುನಾವಣೆಗೆ ಮುನ್ನ ಇಲಾಖೇತರ ನೌಕರರನ್ನು ಇಲಾಖೆ ನೌಕರರೆಂದು ಪರಿಗಣಿಸಬೇಕು. ತಪ್ಪಿದಲ್ಲಿ ಕೇಂದ್ರ ಸರ್ಕಾರ ವಿರುದ್ಧ ಹಾಗೂ ಎಲ್ಲ ಅಂಚೆ ಕಚೇರಿಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ನಾಳೆ 'ಯೋಗ ತರಬೇತಿ '
ಮಂಗಳೂರು: ಶ್ರೀ ಮಂಜುನಾಥೇಶ್ವರ ಕಾನೂನು ಮತ್ತು ಉದ್ಯಮಾಡಳಿತ ಕಾಲೇಜು ವತಿಯಿಂದ ಮಾ. 27 ರಂದು ಕಾಲೇಜಿನ ಸಭಾಂಗಣದಲ್ಲಿ 'ಉಚಿತ ಯೋಗ ತರಬೇತಿ ಶಿಬಿರ' ನಡೆಯಲಿದೆ. ಶಿಬಿರವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ನಡೆಸಿಕೊಡುವರು. 15 ವರ್ಷ ಮೇಲ್ಪಟ್ಟ ಪ್ರಥಮ ಯೋಗ ಕಲಿಯುವವರಿಗೆ ಆದ್ಯತೆ. ಒಟ್ಟು 20 ತರಗತಿಗಳಿದ್ದು, ಬೆಳಗ್ಗೆ 6.45 ರಿಂದ 7.45ರವರೆಗೆ ನಡೆಯಲಿದೆ.  ಮೊದಲ 50 ಮಂದಿಗೆ ಆದ್ಯತೆ. ಮಾಹಿತಿಗೆ ಶೇಖರ್ ಮಡಿವಾಳ್ 0824-2494186 ಸಂಪರ್ಕಿಸಬಹುದು.

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಜಿಲ್ಲಾಡಳಿತ ಸಿದ್ಧ
ಮಂಗಳೂರು: 2013ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಏ.1 ರಿಂದ 10ರವರೆಗೆ ನಡೆಯಲಿದ್ದು, ಜಿಲ್ಲಾಡಳಿತ ಹಾಗೂ ವಿದ್ಯಾಂಗ ಇಲಾಖೆ ಸುಸೂತ್ರವಾಗಿ ನಡೆಯಲು ಪೂರ್ವಭಾವಿ ತಯಾರಿ ನಡೆಸಿದೆ ಎಂದು ಅಪರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಹೇಳಿದ್ದಾರೆ. ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪರೀಕ್ಷೆಗಳನ್ನು ನಡೆಸಲು ಹಾಗೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು, ನಕಲು ತಡೆಗೆ ಎಲ್ಲಾ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾ ಕೇಂದ್ರದಿಂದ ತಾಲೂಕು ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಸಾಗಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು. ಜಿಲ್ಲಾ ವಿಭಾಗ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸ್ಕ್ವಾಡ್ ರಚಿಸಲಾಗಿದ್ದು, ತಂಡ ಪರೀಕ್ಷಾ ಕೇಂದ್ರಗಳಿಗಂ ಭೇಟಿ ನೀಡುವಾಗ ವಿದ್ಯಾರ್ಥಿಗಳು ಗಾಬರಿಯಾಗದಂತೆ ವರ್ತಿಸಬೇಕು. ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಾಗ ಅವರ ಬರವಣಿಗೆಗೆ ತೊಂದರೆಯಾಗದಂತೆ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶಿಸಬೇಕು ಎಂದು ಸೂಚನೆ ನೀಡಿದರು. ಪರೀಕ್ಷೆ ಬೆಳಗ್ಗೆ 9.30ಕ್ಕೆ ಪ್ರಾರಂಭವಾಗಲಿದ್ದು, ಪರೀಕ್ಷೆ ಮುಗಿಯುವವರೆಗೆ ವಿದ್ಯಾರ್ಥಿಗಳನ್ನು ಹೊರಗೆ ಬಿಡಬಾರದು ಎಂದರು. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಇರುವ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವ ವ್ಯವಸ್ಥೆ ಮಾಡಲಾಗುವುದು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೌಲ್ಯ ಮಾಪನ ಏ. 15 ರಿಂದ 20ರೊಳಗೆ ಮುಗಿಸಲು ಕ್ರಮ ಕೈಗೊಳ್ಳಲಾಗುವುದು. ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಸೆಸ್ ಜಯಶೇಖರ್, ಶಿಕ್ಷಣ ಇಲಾಖೆಯ ಪ್ರಾಂಶುಪಾಲರು, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತಿತರರು ಇದ್ದರು.

ತುಟ್ಟಿಭತ್ಯೆ ನೀಡುವಂತೆ ಆಗ್ರಹ
ಮಂಗಳೂರು: ಬೀಡಿ ಕಾರ್ಮಿಕರಿಗೆ ಸರ್ಕಾರ ಹೆಚ್ಚಿಸಿದ ಹೆಚ್ಚುವರಿ ತುಟ್ಟಿಭತ್ತೆಯನ್ನು ಮಾಲಕರು ಏಪ್ರಿಲ್ ತಿಂಗಳ ಮೊದಲ ವಾರದಿಂದ ಪಾವತಿಸಬೇಕು ಎಂದು ಎಐಟಿಯುಸಿ ಆಗ್ರಹಿಸಿದೆ. ಬೀಡಿ ಕಾರ್ಮಿಕರ ಪ್ರತಿ ಸಾವಿರ ಬೀಡಿಗೆ ಒಟ್ಟು 129.73 ಮಜೂರಿ ಪಾವತಿಯಾಗಬೇಕಾಗಿದೆ. ಪಾವತಿಯಾದ ತುಟ್ಟಿಭತ್ತೆ 2 ತಿಂಗಳು ತಡವಾಗಿ ನೀಡದೆ ಮಜೂರಿ ಏಪ್ರಿಲ್ ಮೊದಲ ವಾರದಲ್ಲಿ ನೀಡಬೇಕು. ತುಟ್ಟಿಭತ್ತೆಯಲ್ಲಿ ಭವಿಷ್ಯನಿಧಿಗೆ ಶೇ. 10 ಕಡಿತಗೊಳಿಸಿ ಉಳಿದ 116.76 ನೀಡಬೇಕಾಗುತ್ತದೆ. ಅವುಗಳನ್ನು ಸಮಪರ್ಕವಾಗಿ ಕಾರ್ಮಿಕರಿಗೆ ತಲುಪುವಂತೆ ಮಾಲಕರು ಸಹಕರಿಸುವಂತೆ ಎಐಟಿಯುಸಿ ಅಧ್ಯಕ್ಷ ಪಿ. ಸಂಜೀವ ಒತ್ತಾಯಿಸಿದ್ದಾರೆ.

ಏ.1 ರಂದು 'ಪರಾಮರ್ಶೆ ಸಮಾವೇಶ'
ಮಂಗಳೂರು: ಶಿಕ್ಷಣ ಕಾಯ್ದೆ ಅನುಷ್ಠಾನ ಕುರಿತಂತೆ ಶಿಕ್ಷಣ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ ವತಿಯಿಂದ ಏ. 1 ರಂದು ರಾಜ್ಯ ಮಟ್ಟದ 'ಪರಾಮರ್ಶೆ ಸಮಾವೇಶ' ನಡೆಯಲಿದೆ. ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ ಜಾರಿಯಾಗಿ ಮೂರು ವರ್ಷವಾಗುತ್ತಿದೆ. ಕಾಯ್ದೆಯ ಅನುಷ್ಠಾನದಲ್ಲಿ ರಾಜ್ಯ ಕಂಡಿರುವ ಏಳು-ಬೀಳು ಅಂಶಗಳನ್ನು ಸಮಾವೇಶದಲ್ಲಿ ಪರಾಮರ್ಶಿಸಲಾಗುವುದು. ಇದಕ್ಕೆ ಪೂರ್ವಭಾವಿಯಾಗಿ ಸಮನ್ವಯದ ಸದಸ್ಯರು ಜಿಲ್ಲೆಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲಿಸಿ, ಸಮಾವೇಶದಲ್ಲಿ ಹಂಚಿಕೊಳ್ಳುವರು.  ಹೆಚ್ಚಿನ ಮಾಹಿತಿಗಾಗಿ ರಾಜ್ಯ ಸಂಚಾಲಕ ರೆನ್ನಿ ಡಿಸೋಜ-9448570956 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement