ಟೆಂಪೊ- ಬೈಕ್ ಡಿಕ್ಕಿ: ಗಾಯ
ಮೂಲ್ಕಿ: ಪುನರೂರು ಬಳಿ ರಾಜ್ಯ ಹೆದ್ದಾರಿಯಲ್ಲಿ ಟೆಂಪೊ ಹಾಗೂ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ತೀವ್ರ ಗಾಯಗೊಂಡ ಘಟನೆ ಸೋಮವಾರ ಸಂಜೆ ನಡೆದಿದೆ. ಗಾಯಾಳು ನಿಡ್ಡೋಡಿಯ ಕೇಶವ ಎಂಬವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದ ಟೆಂಪೊ, ಮೂಲ್ಕಿ ಕಡೆಗೆ ಬರುತ್ತಿದ್ದ ಬೈಕ್ ಪರಸ್ಪರ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.
ಮನೆಗೆ ನುಗ್ಗಿ ನಗ-ನಗದು ಕಳವು
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಶಾಂತಿನಗರ ಎಂಬಲ್ಲಿ ಅಬೂಬಕ್ಕರ್ ಎಂಬವರ ಮನೆಗೆ ಕಳ್ಳರು ನುಗ್ಗಿ 3 ಪವನ್ ತೂಕದ ಚಿನ್ನಾಭರಣ ಹಾಗೂ ರು. 35 ಸಾವಿರ ನಗದು ಕಳವು ಮಾಡಿದ್ದಾರೆ. ಮನೆಯ ಹಿಂಬದಿಯ ಬಾಗಿಲ ಚಿಲಕ ಮುರಿದು ಒಳ ನುಗ್ಗಿದ್ದ ಕಳ್ಳರು ಮನೆಯೊಳಗೆ ಮನೆ ಮಂದಿ ನಿದ್ರಿಸುತ್ತಿದ್ದಂತೆಯೇ ಕಪಾಟುಗಳನ್ನು ಜಾಲಾಡಿ ಕಪಾಟಿನಲ್ಲಿದ್ದ ಮೂರು ಪವನ್ ತೂಕದ ಚಿನ್ನದ ಸರವನ್ನು ಹಾಗೂ ರು. 35 ಸಾವಿರ ನಗದು ದೋಚಿದ್ದಾರೆ. ಮಲಗುವ ಕೋಣೆಯಲ್ಲಿದ್ದ ಅಬೂಬಕ್ಕರ್ ಮಗಳ ಕುತ್ತಿಗೆಯಲ್ಲಿದ್ದ ಚಿನ್ನದ ಸರ ತೆಗೆಯುವ ಯತ್ನದಲ್ಲಿ ಮನೆ ಮಂದಿಗೆ ಎಚ್ಚರವಾದಾಗ ಕಳ್ಳರು ಓಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಇದೇ ಪರಿಸರದಲ್ಲಿನ ಉಮ್ಮರ್ ಎಂಬವರ ಮನೆಗೂ ಕಳ್ಳರು ನುಗ್ಗಿ ರು. 2 ಸಾವಿರ ನಗದು ದೋಚಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.