ತಹಸೀಲ್ದಾರ್ ಕಚೇರಿ ಆಗಿಲ್ಲ ರಿಪೇರಿ
ಮಂಗಳೂರು: ಹೆಂಚುಗಳಿಂದ ಕೂಡಿದ ಹಳೆಯ ಕಟ್ಟಡ, ಮಹಡಿಗೆ ತೆರಳಲು ಮರದ ಮೆಟ್ಟಿಲು, ಇಲ್ಲಿ ಕಿತ್ತುಹೋಗಿರುವ ಕೆಲವು ಹಲಗೆಗಳು.. ಮಹಡಿಗೆ ಮರದ ಹಲಗೆಗಳೇ ಬೇಸ್‌ಮೆಂಟ್.. ತಲೆ ಎತ್ತಿ ನೋಡಿದರೆ ಮಾಡು ತುಂಬಾ ಹೆಣೆದಿರುವ ಜೇಡರ ಬಲೆ... ಗೋಡೆಯಲ್ಲಿ ನೇತಾಡುವ ಸ್ವಿಚ್‌ಬೋರ್ಡ್..
ಇದೆಲ್ಲಾ ಯಾವುದೋ ಭೂತ ಬಂಗಲೆಯ ಚಿತ್ರಣವಲ್ಲ. ಮಂಗಳೂರಿನ ತಾಲೂಕು ಕಚೇರಿಯ ದೃಶ್ಯ. ಜಿಲ್ಲಾಧಿಕಾರಿ ಕಚೇರಿ ಬಳಿಯಿರುವ ತಾಲೂಕು ಆಫೀಸಿಗೆ ದಿನನಿತ್ಯ ನೂರಾರು ಮಂದಿ ಆಗಮಿಸುತ್ತಾರೆ. ಮಹಡಿಯು ಕಿರಿದಾಗಿದ್ದು, ಹೆಚ್ಚು ಮಂದಿ ಆಗಮಿಸಿದರೆ ಕುಸಿದು ಬೀಳಬಹುದೆಂದು ಭಾಸವಾಗುತ್ತದೆ.
ಮಹಡಿಯಲ್ಲಿ ತಹಸೀಲ್ದಾರ್ ಕಚೇರಿ, ಚುನಾವಣೆ ಶಾಖಾ ಕಚೇರಿಯಿದೆ. ಜನಸಾಮಾನ್ಯರು ತಮ್ಮ ಸರ್ಕಾರಿ ಸಂಬಂಧಿತ ಕೆಲಸಗಳಿಗೆ ಮೆಟ್ಟಿಲು ಏರಿ ಹೋಗಬೇಕಾಗಿದೆ. ಮರದ ಮೆಟ್ಟಿಲುಗಳ ಕೆಳಗಡೆ ಹಳೆಯ ಕುರ್ಚಿ, ಕಾಗದ ಪತ್ರ, ನಿರುಪಯುಕ್ತ ವಸ್ತುಗಳನ್ನು ರಾಶಿ ಹಾಕಲಾಗಿದ್ದು, ಧೂಳು ತುಂಬಿದೆ. ನೆಲಗಳು ಒಡೆದು ಹೋಗಿದ್ದು, ಸಣ್ಣ ಸಣ್ಣ ಗುಂಡಿಗಳಾಗಿವೆ.
ತುಕ್ಕು ಹಿಡಿದ ಫಿಲ್ಟರ್: ಅಟಲ್‌ಜೀ ಪಹಣಿ ಪತ್ರ ದೊರಕುವ ಸ್ಥಳದಲ್ಲಿ 2006-07ರಲ್ಲಿ ಶಾಸಕ ಎನ್. ಯೋಗೀಶ್ ಭಟ್ ಅವರು ನೀಡಿರುವ ಕುಡಿಯುವ ತಂಪು ನೀರಿನ ಫಿಲ್ಟರ್ ಕಾರ್ಯನಿರ್ವಹಿಸದೆ ತುಕ್ಕು ಹಿಡಿಯುತ್ತಿದೆ. ಬಿಸಿಲ ಬೇಗೆಯಲ್ಲಿ ಬಾಯಾರಿ ಬಂದವರಿಗೆ ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲಿಲ್ಲ.
ಜನಸಾಮಾನ್ಯರು, ಹಿರಿಯ ನಾಗರಿಕರು, ಮಹಿಳೆಯರು ಸರ್ಕಾರಿ ಕೆಲಸದ ಸಂಬಂಧ ತಹಸೀಲ್ದಾರ್ ಕಚೇರಿಗೆ ಆಗಮಿಸುತ್ತಿದ್ದು, ಅಭದ್ರತೆಯಿಂದ ಕೂಡಿರುವ ಮೆಟ್ಟಿಲುಗಳನ್ನು ಸರಿಪಡಿಸದೇ ಇರುವುದು ದುರಂತ. ಇಲ್ಲಿ ದಣಿವಾರಿಸಿಕೊಳ್ಳಲು ಒಂದು ಬೇಂಚ್ ಬಿಟ್ಟರೆ ಬೇರೆ ಯಾವುದೇ ಆಸನವಿಲ್ಲ. ಉಳಿದವರು ಕಟ್ಟಡದ ಹೊರಗಿನ ದಂಡೆಯಲ್ಲಿ ಕುಳಿತುಕೊಳ್ಳಬೇಕಾಗಿದೆ.
ಸ್ವಚ್ಛ ನಗರ ನಿರ್ಮಾಣದಲ್ಲಿ ತೊಡಗಿರುವ ಸರ್ಕಾರ ಸಾರ್ವಜನಿಕರಿಗಾಗಿ ಕಾರ್ಯನಿರ್ವಹಿಸುವ ಸರ್ಕಾರಿ ಕಟ್ಟಡಗಳ ಅವ್ಯವಸ್ಥೆಯನ್ನು ಸರಿಪಡಿಸಿ, ಸ್ವಚ್ಛತೆ ಕಾಪಾಡಿಕೊಳ್ಳುವುದು ಉತ್ತಮ.
- ವಜ್ರಾಕ್ಷಿ ಬಂಟ್ವಾಳ