ಮತದಾರ ಜಾಗೃತಿಗೆ ಯಕ್ಷಗಾನ, ಬೀದಿನಾಟಕ, ಮೈಮ್ಶೋ
ಮಂಗಳೂರು: ಜಿಲ್ಲೆಯಲ್ಲಿ ಸ್ವೀಪ್ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಮಂಗಳೂರು ವ್ಯಾಪ್ತಿಗೆ ಯೋಜನಾ ನಿರ್ದೇಶಕಿ ಸೀತಮ್ಮ, ಪುತ್ತೂರು ವ್ಯಾಪ್ತಿಗೆ ರಾಷ್ಟ್ರೀಯ ಶಿಕ್ಷಣ ಮಾಧ್ಯಮ ಅಧಿಕಾರಿ ಶಿವರಾಮಯ್ಯ ಇವರನ್ನು ನೋಡಲ್ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
ಸೋಮವಾರ ಜಿಲ್ಲಾಮಟ್ಟದ ಅಧಿಕಾರಿಗಳ ವಿಶೇಷ ಸಭೆ ಸ್ವೀಪ್ ಅಧ್ಯಕ್ಷ ಡಾ.ಕೆ.ಎನ್. ವಿಜಯಪ್ರಕಾಶ್ ನೇಮಕಗೊಳಿಸಿದರು.
ಮತದಾರರಲ್ಲಿ ಜಾಗೃತಿ ಮೂಡಿಸುವ ಹಾಗೂ ಮತದಾನಕ್ಕೆ ಪ್ರೇರಣೆ ನೀಡಲು ಎಲ್ಲಾ ಕಚೇರಿಗಳ ಎದುರು ಸಾರ್ವಜನಿಕರಿಗೆ ಕಾಣುವಂತೆ ಬ್ಯಾನರ್ಗಳನ್ನು ಹಾಕಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಯಕ್ಷಗಾನ, ಬೀದಿನಾಟಕ, ಮೈಮ್ಶೋ, ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು. ಸ್ಥಳೀಯ ಭಾಷೆಗಳಾದ ತುಳು, ಬ್ಯಾರಿ, ಕೊಂಕಣಿ, ಅರೆ ಭಾಷೆಗಳ ಮೂಲಕ ಮೈಕ್ನಲ್ಲಿ ಜನರಲ್ಲಿ ಅರಿವು ಮೂಡಿಸುವ ಕುರಿತು ಯುವಜನಸೇವಾ ಹಾಗೂ ಕ್ರೀಡಾ ಇಲಾಖೆ ಸಲಹೆ ಅಧಿಕಾರಿಗಳು ಸಲಹೆ ನೀಡಿದರು. ಸರ್ಕಾರೇತರ ಸಂಘಸಂಸ್ಥೆಗಳ ನೆರವು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ನಿಗದಿತ ಮಾದರಿಗಳನ್ನು ನೀಡಲಾಯಿತು. ಮುಖ್ಯ ಯೋಜನಾಧಿಕಾರಿ ನಝೀರ್, ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಹಿರಿಯ ಅಧಿಕಾರಿಗಳು ಹಾಜರಿದ್ದರು.
ಏ. 2ರಿಂದ 'ಈಜು ಶಿಬಿರ'
ಮಂಗಳೂರು: ಮಹಾನಗರ ಪಾಲಿಕೆ ವತಿಯಿಂದ ಲೇಡಿಹಿಲ್ನ ಈಜುಕೊಳದಲ್ಲಿ ಬೇಸಿಗೆ ರಜಾದಲ್ಲಿ ಏ. 2 ರಿಂದ ಮೇ 31ರವರೆಗೆ 'ಈಜು ಶಿಬಿರ' ನಡೆಯಲಿದೆ. ಶಿಬಿರವು ಬೆಳಗ್ಗೆ 7.30 ರಿಂದ 10.15ರ ತನಕ ಹುಡುಗರಿಗೆ ಮತ್ತು ಪುರುಷರಿಗೆ ಹಾಗೂ ಮಹಿಳೆಯರಿಗೆ ಮತ್ತು ಹುಡುಗಿಯರಿಗೆ ಸಂಜೆ 3.30 ರಿಂದ 5.15ರವರೆಗೆ ಎರಡು ವಿಭಾಗದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ರಮೇಶ್ 0824-2220320 ಸಂಪರ್ಕಿಸಬಹುದು.