ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

2020ರ ವೇಳೆಗೆ ಶೇ.30 ಮಂದಿ ಉನ್ನತ ಶಿಕ್ಷಣ ಪಡೆಯಲು ಕ್ರಮ: ಪಲ್ಲಂ ರಾಜು

Rashmi Kasaragodu
Updated On : 27 Mar 2013, 11:01 am

ಮಣಿಪಾಲ: ಪ್ರಸ್ತುತ ಭಾರತದಲ್ಲಿ ಕೇವಲ ಶೇ.18.8 ಮಂದಿ ಮಾತ್ರ ಉನ್ನತ ಶಿಕ್ಷಣ ಪಡೆಯುವ ಅವಕಾಶ ಹೊಂದಿದ್ದಾರೆ. ಇದು ಅತ್ಯಂತ ಕಡಿಮೆಯಾಗಿದ್ದು, 2020ರ ಹೊತ್ತಿಗೆ ಶೇ.30 ಮಂದಿ ಉನ್ನತ ಶಿಕ್ಷಣ ಪಡೆಯುವ ಅವಕಾಶವನ್ನು ಹೊಂದುವುದಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪಲ್ಲಂ ರಾಜು ತಿಳಿಸಿದ್ದಾರೆ.
 ಅವರು ಮಂಗಳವಾರ ಮಣಿಪಾಲ ವಿವಿಯ 'ಮರೆನಾ' ಕ್ರೀಡಾ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದರು. ಉನ್ನತ ಶಿಕ್ಷಣದ ಅವಕಾಶವನ್ನು ಹೆಚ್ಚಿಸುವುದಕ್ಕಾಗಿ 12ನೇ ಹಣಕಾಸು ಯೋಜನೆಯಲ್ಲಿ ದೇಶಾದ್ಯಂತ ಕೇಂದ್ರೀಯ ವಿಶ್ವವಿದ್ಯಾನಿಲಯ, ಎನ್.ಐ.ಟಿ, ಐ.ಐ.ಟಿ. ಶಿಕ್ಷಣ ಸಂಸ್ಥೆಗಳನ್ನು ತೆರೆಯಲಾಗುವುದು ಎಂದವರು ಹೇಳಿದರು.
 ಬಡತನ ಇತ್ಯಾದಿ ಕಾರಣಗಳಿಂದಾಗಿ ಅವಕಾಶ ವಂಚಿತರು ಕೂಡ ಉನ್ನತ ಶಿಕ್ಷಣ ಪಡೆಯುವುದಕ್ಕೆ ಅವಕಾಶವಾಗುವಂತೆ ಕೇಂದ್ರ ಸರ್ಕಾರ ಶೈಕ್ಷಣಿಕ ಸಾಲ ನೀಡಲು ಸಿದ್ಧವಿದೆ. ಈಗಾಗಲೇ 1000 ಕೋಟಿ ಸಾಲವನ್ನು ನೀಡಲಾಗುತ್ತಿದೆ, ಇನ್ನೂ ಹೆಚ್ಚಿನ ಸಾಲವನ್ನು ವ್ಯವಸ್ಥೆ ಮಾಡುವುದಕ್ಕೆ ಸರ್ಕಾರ ಸಿದ್ಧವಾಗಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಮಣಿಪಾಲ ವಿವಿಯ ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದರು.
 ಇನ್ನೊಬ್ಬ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸುತ್ತಾ, ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಪಶ್ಚಿಮ ಬಂಗಾಳ, ಉತ್ತಾರಾಂಚಲ ಇತ್ಯಾದಿ ರಾಜ್ಯಗಳಲ್ಲಿ ವಿರೋಧ ಇದೆ. ಕಾರಣ ಶಿಕ್ಷಕರ ಕೊರತೆ ಎಂದ ಸಚಿವರು, ದೇಶದಲ್ಲಿ 20 ಲಕ್ಷ ಶಿಕ್ಷಕರ ಅವಶ್ಯಕತೆ ಇದೆ, ಆದರೆ 12 ಲಕ್ಷ ಶಿಕ್ಷಕರಷ್ಟೇ ನೇಮಕವಾಗಿದ್ದಾರೆ. ಉಳಿದ 8 ಲಕ್ಷ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
 ಸಮಾರಂಭದಲ್ಲಿ ಮಣಿಪಾಲ ಎಜ್ಯುಕೇಶನ್ ಆ್ಯಂಡ್ ಮೆಡಿಕಲ್ ಗ್ರೂಪ್‌ನ ಸಿಇಒ ಡಾ. ರಂಜನ್ ಪೈ, ಮಣಿಪಾಲ ವಿವಿಯ ಕುಲಪತಿ ಡಾ.ಎಚ್.ಎಸ್. ಬಲ್ಲಾಳ್, ಸಹ ಕುಲಪತಿ ಡಾ. ರಾಮನಾರಾಯಣನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement