ಕರಾವಳಿ ಜಿಲ್ಲೆ: ಬಿಜೆಪಿಗೆ ಸಂಘ ಪರಿವಾರ ಸೂಚನೆಯೇ ಅಂತಿಮ!
ಆತ್ಮಭೂಷಣ್
ಮಂಗಳೂರು: 'ಯಾರಿಗೆ ಟಿಕೆಟ್ ಕೊಟ್ಟರೂ ಗೆಲವು ಶತಸಿದ್ಧ'.
ಇದು ಬಿಜೆಪಿ ಬಗ್ಗೆ ಇದುವರೆಗೆ ಕರಾವಳಿ ಜಿಲ್ಲೆಯಲ್ಲಿ ಕೇಳಿಬರುತ್ತಿದ್ದ ಮಾತು. ಆದರೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಬಿಜೆಪಿ, ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮರಳಿ ಫಾರ್ಮಿಗೆ ಬರಲು ಈ ಮಾತು ನೆರವಾಗುವುದೇ? ಜಿಲ್ಲೆಯ ಬಿಜೆಪಿ ಅಭಿಮಾನಿಗಳನ್ನು ಕಾಡುವ ಪ್ರಶ್ನೆ ಇದು. ಯಾಕೆಂದರೆ ಬಿಜೆಪಿ ಅಭ್ಯರ್ಥಿ ಯಾರಾಗಬಹುದು ಎಂದು ಸೂಚಿಸುವುದು ಸಂಘಪರಿವಾರದ ಶಕ್ತಿ ಕೇಂದ್ರ. ಸಂಘಪರಿವಾರ ಗರಡಿಯಲ್ಲಿ ಪಳಗಿದವರಿಗೆ ಮೊದಲ ಪ್ರಾಶಸ್ತ್ಯ, ನಂತರ ಏನಿದ್ದರೂ ಪರಿವಾರಕ್ಕೆ ಒಪ್ಪಿಗೆಯಾದವರಿಗೆ ಮಾತ್ರ ಎಂಬುದು ಮಾತು.
ಮೊದಲ ಬಿಜೆಪಿ ಶಾಸಕರು: 1967ರಲ್ಲಿ ಜನಸಂಘದ ಪ್ರಥಮ ಶಾಸಕ ಕಾರ್ಕಳದ ಬೋಳ ರಘುರಾಮ ಶೆಟ್ಟಿ. ಜಿಲ್ಲೆಯಲ್ಲಿ ಜನಸಂಘ-ಜನತಾಪಾರ್ಟಿ ವಿಲೀನಗೊಂಡಾಗ ಮೊದಲ ಶಾಸಕರಾದ್ದು ಉರಿಮಜಲು ರಾಮಭಟ್. 1978ರಲ್ಲಿ ಪುತ್ತೂರಿನಲ್ಲಿ ಶಾಸಕರಾಗಿ ಆಯ್ಕೆಯಾದರು. ನಂತರ ಸುಳ್ಯದಲ್ಲಿ ರಾಮಚಂದ್ರ, ಬಾಕಿಲ ಹುಕ್ರಪ್ಪ, ಮಂಗಳೂರಲ್ಲಿ ಧನಂಜಯ ಕುಮಾರ್, ವಸಂತ ಬಂಗೇರ ಆಯ್ಕೆಯಾದರು. ಲೋಕಸಭೆಯಲ್ಲಿ ಬಿಜೆಪಿ ಮೊದಲ ಖಾತೆ ತೆರೆದಿದ್ದು 1991ರಲ್ಲಿ ಮಂಗಳೂರಲ್ಲಿ ಧನಂಜಯ ಕುಮಾರ್ ಗೆಲವಿನ ಮೂಲಕ.
ಸಂಘಪರಿವಾರದ್ದೇ ಅಂತಿಮ: 1985ರಲ್ಲಿ ವಿಟ್ಲದಲ್ಲಿ ರುಕ್ಮಯ ಪೂಜಾರಿ ಗೆದ್ದ ಬಳಿಕ ಟಿಕೆಟ್ ಹಂಚಿಕೆಯಲ್ಲಿ ಸಂಘಪರಿವಾರ ಹೆಸರು ಕೇಳಿಬಂತು. ಇದನ್ನು ಸಂಘಪರಿವಾರ ನಿರಾಕರಿಸುತ್ತದಾದರೂ, ಸಂಘಪರಿವಾರದ ಲಕ್ಷ್ಮಣರೇಖೆಯನ್ನು ಯಾರೂ ಮೀರುವುದಿಲ್ಲ ಎನ್ನುವುದು ಅಷ್ಟೇ ಸತ್ಯ.
1994ರಲ್ಲಿ ಸಂಘಪರಿವಾರ ಪ್ರಯತ್ನದಿಂದ ಚೇತರಿಸಿದ ಬಿಜೆಪಿ ಅವಿಭಜಿತ ಜಿಲ್ಲೆಯಲ್ಲಿ 7 ಸ್ಥಾನ ಗೆದ್ದುಕೊಂಡಿತು. 99ರಲ್ಲಿ 5 ಸ್ಥಾನ, 2004ರಲ್ಲಿ 11 ಸ್ಥಾನಕ್ಕೆ ಜಿಗಿಯಿತು. 2008ರಲ್ಲಿ 8 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಮುಖ್ಯವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸುಳ್ಯದಿಂದ ಕುಂದಾಪುರ ವರೆಗೆ ಬಿಜೆಪಿ ಹಾಗೂ ಸಂಘಪರಿವಾರದ ಅಭ್ಯರ್ಥಿ ಆಯ್ಕೆಯಲ್ಲಿ ಹೊಂದಾಣಿಕೆ ಇದುವರೆಗೆ ನಡೆದುಕೊಂಡು ಬಂದಿದೆ.
ವ್ಯಕ್ತಿಗಿಂತ ಪಕ್ಷ ನೋಡ್ತಾರೆ: ಬಿಜೆಪಿ-ಸಂಘಪರಿವಾರ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಾಗ ಜಾತಿ ಲೆಕ್ಕಾಚಾರ ಇಲ್ಲಿಯೂ ಹೊರತಾಗಿಲ್ಲ.
ಹಾಗಾದರೂ ಜಾತೀಯತೆಗೆ ಒತ್ತು ಕೊಡದ ಸಂದರ್ಭಗಳಲ್ಲಿ ಬಿಜೆಪಿ ಅಭ್ಯರ್ಥಿ ಗೆಲವು ಸಾಧಿಸಿದ್ದಿದೆ. ಇಲ್ಲಿ ಸರ್ವಸಮ್ಮತ ಅಭ್ಯರ್ಥಿ ಎನ್ನವುದಕ್ಕಿಂತಲೂ ಪರಿವಾರದ ಸೂಚನೆಗೆ ಜೈ ಎನ್ನುವುದು ವಿಶೇಷ. ಹಾಗಾಗಿಯೇ ಇಲ್ಲಿ ಇದುವರೆಗೆ ಮತದಾರರು ವ್ಯಕ್ತಿಗಿಂತ ಪಕ್ಷವನ್ನು ನೋಡುತ್ತಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರಿನಿಂದ ಮಲ್ಲಿಕಾ ಪ್ರಸಾದ್, ಮಂಗಳೂರು ಉತ್ತರದಿಂದ ಕೃಷ್ಣಪಾಲೇಮಾರ್, ಸಂಸತ್ ಸ್ಥಾನಕ್ಕೆ ನಳಿನ್ ಕುಮಾರ್ ಕಟೀಲ್ರನ್ನು ಕಣಕ್ಕಿಳಿಸಿ ಗೆಲ್ಲಿಸಿದ್ದೇ ಸಾಕ್ಷಿ.