ಕಾರು ಡಿಕ್ಕಿ: ರಸ್ತೆ ದಾಟುತ್ತಿದ್ದ ಯುವಕ ಸಾವು
ಮಂಗಳೂರು: ಹೆದ್ದಾರಿ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು ಪಿಎಂಜಿ ಪ್ರೊಡಕ್ಷನ್ ಮಾರಾಟ ಪ್ರತಿನಿಧಿ ಕುಂಜತ್ ಬೈಲ್ ಶಿವರಾಮ ಗೌಡ (24) ಮೃತಪಟ್ಟಿದ್ದಾರೆ. ಸುರತ್ಕಲ್ ಅಂಚೆ ಕಚೇರಿ ಬಳಿಯ ದೀನದಯಾಳ್ ಮೆಡಿಕಲ್ ಎದುರಗಡೆ ಮಂಗಳವಾರ ಅಪಘಾತ ಸಂಭವಿಸಿದೆ. ರಸ್ತೆ ದಾಟುತ್ತಿದ್ದ ಶಿವರಾಮ, ಡಿವೈಡರ್ ಹತ್ತಿ ಇಳಿಯುತ್ತಿರುವ ಹೊತ್ತಿಗೆ ವೇಗವಾಗಿ ಬಂದ ಮಾರುತಿ ಸ್ವಿಪ್ಟ್ ಕಾರು ಡಿಕ್ಕಿ ಹೊಡೆಯಿತು. ಕಾರು ಡಿಕ್ಕಿ ಹೊಡೆದ ಬಳಿಕೆ ಡಿವೈಡರ್ ಮೇಲೆ ಬಿದ್ದ ಶಿವರಾಮ ತಲೆಗೆ ಏಟಾಗಿದೆ. ಕಾರು ಚಾಲಕ ದಾವುದ್ ಅಲಿ ತನ್ನ ಕಾರಲ್ಲಿಯೇ ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿಂದ ಕುಂಟಿಕಾನ ಎ.ಜೆ.ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತ ಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಹೊಸಬೆಟ್ಟು ಪ್ರಶಾಂತ ಸುವರ್ಣ ನೀಡಿದ ದೂರಿನಂತೆ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.