ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನೀರು, ತ್ಯಾಜ್ಯ ವಿಲೇವಾರಿಯಲ್ಲಿ ಸೋತ ಬಿಜೆಪಿ...'ಕೈ'ಗೆ ಸವಾಲು

Rashmi Kasaragodu
Updated On : 27 Mar 2013, 10:58 am

ಸಂಶುದ್ದೀನ್ ಸಂಪ್ಯ
ಪುತ್ತೂರು: ಪುತ್ತೂರು ಪುರಸಭೆ ವ್ಯಾಪ್ತಿಯಲ್ಲಿ 27 ವಾರ್ಡ್‌ಗಳಿದ್ದು, ಈ ಎಲ್ಲ ವಾರ್ಡ್‌ಗಳ ಸದಸ್ಯರಿಗೆ ನೀರು, ನೈರ್ಮಲ್ಯ ಸೇರಿದಂತೆ ಮೂಲ ಸೌಲಭ್ಯಗಳನ್ನು ಪೂರೈಸುವ ಕುರಿತು ಸಾಕಷ್ಟು ಸವಾಲುಗಳಿವೆ.
 ನೀರು ಮತ್ತು ತ್ಯಾಜ್ಯದ ಸಮಸ್ಯೆ ಪ್ರತಿ ಪುರಸಭಾ ವಾರ್ಡ್‌ಗಳಲ್ಲಿವೆ. ಎಲ್ಲ ಮನೆಗಳಿಗೂ ಕುಡಿಯುವ ನೀರನ್ನು ಪೂರೈಸಲೆಂದು ಎಡಿಬಿ ಮೂಲಕ ಲಕ್ಷಾಂತರ ರುಪಾಯಿ ವ್ಯಯಿಸಿ ಯೋಜನೆ ರೂಪಿಸಲಾಗಿತ್ತು. ಆದರೆ, ಇದರಿಂದ ಕೇವಲ ಶೇ. 30 ಯಶಸ್ಸು ಪಡೆಯಲು ಪುರಸಭೆಗೆ ಸಾಧ್ಯವಾಗಿಲ್ಲ. ಇದರೊಂದಿಗೆ ಸುಮಾರು 90ಕ್ಕೂ ಅಧಿಕ ಬೋರ್‌ವೆಲ್‌ಗಳ ಮೂಲಕವೂ ಜನರ ನೀರಿನ ಬವಣೆ ತಣಿಸಲು ಪುರಸಭಾ ಆಡಳಿತವು ಪ್ರಯತ್ನ ನಡೆಸಿತ್ತು. ಆದರೆ, ದಿನವೊಂದಕ್ಕೆ ಕನಿಷ್ಠ 1 ಗಂಟೆಗಳ ನೀರನ್ನು ಪೂರೈಸಲೂ ಹರಸಾಹಸ ಪಡಬೇಕಾಗುತ್ತಿತ್ತು.
 ಜನರು ನೀರು ಸಿಗುತ್ತಿಲ್ಲ ಎಂದು ಪುರಸಭೆಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಎಡಿಬಿ ಕುಡಿಯುವ ನೀರಿನ ಯೋಜನೆಯ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು.
ನೀರು ಪೂರೈಕೆ- ಸವಾಲು: ಹಿಂದಿನ ಆಡಳಿತ ಪಕ್ಷ (ಬಿಜೆಪಿಯ) ಸೋಲಿಗೆ ಇದೊಂದು ಮೂಲ ಕಾರಣವೂ ಆಗಿತ್ತು. ಈ ಹಿನ್ನೆಲೆಯಲ್ಲಿ ಚುನಾವಣೆಯ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಸ್ಪರ್ಧಿಸಿದ್ದ ಎಲ್ಲಾ ಪಕ್ಷಗಳು ಹಾಗೂ ಪಕ್ಷೇತರರು ನೀರಿನ ಜನರ ನೀರಿನ ಸಮಸ್ಯೆ ನೀಗಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಎಲ್ಲರಿಗೂ ನೀರು ಪೂರೈಸುವ ಸವಾಲು ನೂತನ ಸದಸ್ಯರ ಮೇಲಿದೆ.
 ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬುದು ನಗರದ ಜನರ ಮತ್ತೊಂದು ದೂರು. ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವುದಾಗಿ ತಿಳಿಸಿದ್ದ ಪುರಸಭೆಯು ಹೊಟೇಲ್, ವಾಣಿಜ್ಯ ಮಳಿಗೆ, ಅಂಗಡಿ ಮತ್ತು ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವುದಾಗಿ ಶುಲ್ಕ ನಿಗದಿ ಪಡಿಸಿದೆ. ಆದರೆ, ಶುಲ್ಕ ವಸೂಲಿಗೆ ಬರುವುದನ್ನು ಬಿಟ್ಟರೆ ಯಾವುದೇ ಮನೆಗಳಿಂದ ಸಮರ್ಪಕವಾಗಿ ಕಸ ವಿಲೇವಾರಿ ನಡೆಯುತ್ತಿಲ್ಲ.
 ನೂತನ ಸದಸ್ಯರಿಗೆ ಈ ಸಮಸ್ಯೆಯೇ ಬೆಟ್ಟದಂತಾಗಿದೆ. ಮಂಗಳೂರಿನ ಮಾದರಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂಬುದು ಇಲ್ಲಿನ ಜನರ ಆಗ್ರಹವಾಗಿದೆ.
 ಎಡಿಬಿ ಯೋಜನೆಯಿಂದ ನಿರ್ಮಿಸಲಾದ ಸಂತೆ ಕಟ್ಟಡದ ಮೇಲ್ಭಾಗದಲ್ಲಿಯೇ ಪುರಸಭಾ ಕಚೇರಿ ಕಾರ್ಯಾಚರಿಸುತ್ತಿದೆ. ಕಿಲ್ಲೆ ಮೈದಾನದಲ್ಲಿ ನಡೆಯುವ ಸಂತೆಯನ್ನು ನೂತನ ಆಡಳಿತ ಸಮಿತಿಗೆ ಕಿಲ್ಲೆ ಮೈದಾನದಿಂದ ಸಂತೆ ಕಟ್ಟಡಕ್ಕೆ ಸ್ಥಳಾಂತರಿಸಬೇಕು.
ಕೃತಕ ನೆರೆ- ಸಮಸ್ಯೆ: ನಗರದ ಹೃದಯ ಭಾಗದಲ್ಲಿ ಕಿರುತೋಡು ಹರಿಯುತ್ತಿದ್ದು, ಈ ತೋಡಿಗೆ ಎಡಿಬಿ ಯೋಜನೆಯಲ್ಲಿ ಕಲ್ಲು ಹಾಸಲಾಗಿದೆ.
ಕಲ್ಲು ಹಾಸಿದ ಕಾರಣದಿಂದಾಗಿ ಮಳೆಗಾಲದಲ್ಲಿ ಈ ತೋಡಿನಲ್ಲಿ ಕೃತಕ ನೆರೆ ಉಂಟಾಗುತ್ತಿರುವುದರಿಂದ ನಗರದ ಹಲವು ಅಂಗಡಿ ಮತ್ತು ಇತರ ಕಟ್ಟಡಗಳಿಗೆ ನೀರು ನುಗ್ಗುತ್ತಿದೆ. ಪ್ರತಿ ಮಳೆಗಾಲದಲ್ಲಿಯೂ ಇದು ಪುನರಾವರ್ತನೆಯಾಗುತ್ತಿದ್ದು, ಇದಕ್ಕೊಂದು ಶಾಶ್ವತ ಪರಿಹಾರ ಕಂಡು ಹಿಡಿಯಬೇಕಾಗಿದೆ.
ನಗರದಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆಯಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ನಗರದ ದರ್ಬೆಯಿಂದ ಬೊಳುವಾರು ತನಕ ಸಮರ್ಪಕವಾದ ಪಾರ್ಕಿಂಗ್ ವ್ಯವಸ್ಥೆಯಾಗಿಲ್ಲ. ಪೇಟೆಗೆ ವಾಹನದಲ್ಲಿ ಆಗಮಿಸುವವರು ತಮ್ಮ ವಾಹನಗಳನ್ನು ಎಲ್ಲಿ ನಿಲ್ಲಿಸಬೇಕು ಎಂದು ತಿಳಿಯದೆ ಒದ್ದಾಟ ನಡೆಸಬೇಕಾಗುತ್ತದೆ.
ನಗರದಲ್ಲಿ ಎಲ್ಲಿ ನೋಡಿದರೂ ನೋ ಪಾರ್ಕಿಂಗ್ ಎಂದಿದೆ. ಕೆಲವೊಮ್ಮೆ ಅನಿವಾರ್ಯವಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಿ ಟ್ರಾಫಿಕ್ ಪೊಲೀಸರಿಗೆ ದಂಡ ತೆರವ ಪ್ರಸಂಗವೂ ಎದುರಾಗುತ್ತಿದೆ.
ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಸಮರ್ಪಕವಾದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಹೊಣೆಯೂ ನೂತನ ಸದಸ್ಯರ ಮೇಲಿದೆ.
 ಒಟ್ಟಿನಲ್ಲಿ ಪುತ್ತೂರು ಪುರಸಭೆಯ ಎಲ್ಲ ಮನೆಗಳಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ, ತ್ಯಾಜ್ಯಗಳ ವಿಲೇವಾರಿ ಹಾಗೂ ನಿರ್ವಹಣೆಯ ವ್ಯವಸ್ಥೆ, ಸುವ್ಯವಸ್ಥಿತ ರಸ್ತೆ ಹಾಗೂ ದಾರಿ ದೀಪಗಳ ವ್ಯವಸ್ಥೆ, ವಾಹನ ಪಾರ್ಕಿಂಗ್ ವ್ಯವಸ್ಥೆ, ತೆರಿಗೆ ಪಾವತಿ ಸಮಸ್ಯೆ ಪರಿಹಾರ, ಸ್ವಚ್ಛ ನಗರ ನಿರ್ಮಾಣ ಮತ್ತು ಪ್ರಾಮಾಣಿಕ ಸೇವೆ ನೀಡುವ ಮಹತ್ತರವಾದ ಸವಾಲು ನೂತನ ಸದಸ್ಯರಿಗೆ ಹಾಗೂ ಆಡಳಿತ ಮಂಡಳಿಗಿದೆ.




ತ್ಯಾಜ್ಯ ವಿಲೇ'ವರಿ'...
ಹಿಂದೆಲ್ಲಾ ಪುರಸಭೆಯು ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯಲು ಕಸದ ತೊಟ್ಟಿಗಳನ್ನು ಇಟ್ಟು ಅದನ್ನು ಸಂಗ್ರಹಿಸಿ ಡಂಪಿಂಗ್ ಯಾರ್ಡ್‌ಗೆ ಹಾಕಿಸುವ ಕೆಲಸ ಮಾಡುತ್ತಿತ್ತು. ಆದರೆ, ಮನೆ ತ್ಯಾಜ್ಯ ಸಂಗ್ರಹ ವ್ಯವಸ್ಥೆ ಆರಂಭಗೊಂಡ ಬಳಿಕ ಬಹುತೇಕ ಕಡೆಗಳಲ್ಲಿ ರಸ್ತೆ ಬದಿಯಲ್ಲಿದ್ದ ಕಸದ ತೊಟ್ಟಿಗಳನ್ನು ತೆರವುಗೊಳಿಸಿದೆ. ಇದರಿಂದಾಗಿ ಜನರಿಗೆ ತಮ್ಮ ಮನೆಯ ಕಸವನ್ನು ಎಸೆಯಲು ಎಲ್ಲೂ ಸ್ಥಳವಿಲ್ಲ ಎಂಬಂತಾಗಿದೆ. ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ಮಾಡುತ್ತೇವೆ ಎಂದು ಎಲ್ಲ ಅಭ್ಯರ್ಥಿಗಳು ಮತದಾರನ ಮುಂದೆ ಭರವಸೆ ನೀಡಿತ್ತು. ಇದೀಗ ಅದನ್ನು ಪೂರೈಸುವ ಜವಾಬ್ದಾರಿಯೂ ಸದಸ್ಯರ ಹಾಗೂ ನೂತನ ಆಡಳಿತದ ಮೇಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement